ADVERTISEMENT

ಬಿಬಿಎಂಪಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ತರಾಟೆ

ಶಾಶ್ವತ ಪರಿಹಾರ ಕ್ರಮ ಜಾರಿಯಾಗಿಲ್ಲ ಏಕೆ– ಸಿ.ಎಂ. ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 19 ಮೇ 2022, 19:41 IST
Last Updated 19 ಮೇ 2022, 19:41 IST
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ   

ಬೆಂಗಳೂರು: ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ ಬಳಿಕ ಬಿಬಿಎಂಪಿ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕ್ರಮಗಳನ್ನು ಜಾರಿಗೊಳಿಸಿಲ್ಲ ಏಕೆ’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ವರ್ಷಪೂರ್ತಿ ಏನು ಕೆಲಸ ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ ಅವರು, ‘ಮಳೆಗಾಲ ಬರುತ್ತದೆ, ಸಮಸ್ಯೆ ಆಗುತ್ತದೆ ಎನ್ನುವುದು ಗೊತ್ತಿಲ್ಲವೆ? ವರ್ಷಪೂರ್ತಿ ಮಲಗಿರೋದು, ಮಳೆ ಬಂದಾಗ ಎಚ್ಚೆತ್ತುಕೊಳ್ಳುವುದು... ಇದೇ ಆಯ್ತು ನಿಮ್ಮ ಹಣೆಬರಹ’ ಎಂದು ಕಿಡಿಕಾರಿದರು.

‘ನೀವು ಕರ್ತವ್ಯ ಮರೆತಿದ್ದೀರಿ. ಮಳೆಗಾಲಕ್ಕೂ ಮುನ್ನ ಚರಂಡಿಗಳ ಹೂಳೆತ್ತಿಸಬೇಕು. ಮಳೆ ನೀರು ಚರಂಡಿ
ಗಳನ್ನು ಸ್ವಚ್ಛಗೊಳಿಸಬೇಕು. ಇವೆಲ್ಲಾ ನಿಮ್ಮ ಕೆಲಸ ಅಲ್ಲವೇ? ಈ ಕೆಲಸ ಬಿಟ್ಟು ಬೇರೆ ಏನು ಕೆಲಸ ಮಾಡುತ್ತೀರಿ’ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

‘ಸಮಸ್ಯೆ ಇರುವ ಜಾಗಕ್ಕೇ ಹೋಗಿ ಕೆಲಸ ಮಾಡಲು ತಾಂತ್ರಿಕ ವಿಭಾಗವನ್ನು ಬಲಪಡಿಸಬೇಕು. ದಿನದ 24 ಗಂಟೆಯೂ ಯುದ್ಧೋಪಾದಿಯಲ್ಲಿ ಕೆಲಸ ನಡೆಯಬೇಕು. ಅದಕ್ಕೆ ಬೇಕಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಿ’ ಎಂದು ಮುಖ್ಯ ಆಯುಕ್ತರಿಗೆ ಸೂಚನೆ ನೀಡಿದರು.

‘ವಲಯ ಆಯುಕ್ತರು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಅಧಿಕಾರ ವಿಕೇಂದ್ರೀಕರಣ ಮಾಡಿ
ವಲಯ ಆಯುಕ್ತರೇ ಬಿಲ್ ಪಾವತಿಸಲು ಅನುಮತಿ ನೀಡಿ. ಸರಿಯಾಗಿ ಕೆಲಸ ಮಾಡದ ಎಂಜಿನಿಯರ್‌ಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ’ ಎಂದು ತಾಕೀತು ಮಾಡಿದರು.

‘₹800 ಕೋಟಿ ಏನಾಯಿತು’

‘ಹೊರಮಾವು ಪ್ರದೇಶದ ಸಮಸ್ಯೆಯನ್ನು ಫೆಬ್ರುವರಿ ಒಳಗೆ ಸರಿಪಡಿಸುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗಾದರೆ ಕೆ.ಆರ್.ಪುರ ಕ್ಷೇತ್ರಕ್ಕೆ ಕೊಟ್ಟ ₹800 ಕೋಟಿ ಏನಾಯಿತು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಕೋಟ್ಯಂತರ ರೂಪಾಯಿ ಅನುದಾನ ತೆಗೆದುಕೊಂಡು ಹೋಗಿ ಏನು ಕೆಲಸ ಮಾಡಿದ್ದಾರೆ. ನಗರ ಪ್ರದಕ್ಷಿಣೆ ಹಾಕಿ ಪೋಟೊಗೆ ಸೀಮಿತ ಆಗಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.