ADVERTISEMENT

ಮನುಸ್ಮೃತಿ ಬಗ್ಗೆ ಎಚ್ಚರವಹಿಸಿ: ಸಿ.ಎಂ. ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 15:50 IST
Last Updated 26 ನವೆಂಬರ್ 2024, 15:50 IST
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ ಪೀಠಿಕೆ ವಾಚಿಸಿದರು . ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದ ರಾಜ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಚಿತ್ರ
ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂವಿಧಾನ ಪೀಠಿಕೆ ವಾಚಿಸಿದರು . ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದ ರಾಜ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉಪಸ್ಥಿತರಿದ್ದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದ ಅನಂತ ಕುಮಾರ ಹೆಗಡೆ ಅವರು ಸಂವಿಧಾನ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿದರು. ಆದರೆ, ಮೋದಿಯವರಾಗಲಿ, ಬಿಜೆಪಿಯವರಾಗಲಿ ಇದನ್ನು ವಿರೋಧಿಸಲಿಲ್ಲ. ಅವರನ್ನು ಮಂತ್ರಿ ಸ್ಥಾನದಿಂದ ಏಕೆ ಇಳಿಸಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

‌ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಉದ್ಘಾಟಿಸಿ, ಪ್ರಜಾಪ್ರಭುತ್ವ ದಿನದ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಸಂಘಟನೆಗಳ ಮುಖಂಡರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಮಾತನಾಡಿದರು.

ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ. ಈ ಬಗ್ಗೆ ಎಚ್ಚರಿಕೆ ಇರಬೇಕು. ಸಂವಿಧಾನ ಜಾರಿಗೊಳಿಸುವುದನ್ನು ಹಿಂದೂ ಮಹಾಸಭಾದ ಸಾವರ್ಕರ್, ಗೋಳ್ವಾಲ್ಕರ್ ಕೂಡ ವಿರೋಧಿಸಿದ್ದರು. ಆರ್‌ಎಸ್‌ಎಸ್ ಸಹ  ವಿರೋಧಿಸಿತ್ತು. ಅನಂತ ಕುಮಾರ ಹೆಗಡೆ ಅವರ ಮಾತಿಗೆ ಅವರೆಲ್ಲರ ಸಮ್ಮತಿ ಇತ್ತು ಅಂತಲೇ ಅರ್ಥ. ಇದನ್ನು ದೇಶದ ಜನತೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

‘ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ, ಮನುಷ್ಯರ ಮಧ್ಯೆ ತಾರತಮ್ಯ ಸೃಷ್ಟಿಯಾಗಿದೆ. ಸಂವಿಧಾನ ವಿರೋಧಿಗಳು ಮತ್ತು ಮನುಸ್ಮೃತಿ ಬಗ್ಗೆ ಎಚ್ಚರವಹಿಸಬೇಕು. ನಾನು ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದೇ ಈ ಸಂವಿಧಾನ ಬಲದಿಂದ’ ಎಂದು ಪ್ರತಿಪಾದಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಅವರು ಸಂವಿಧಾನ ಪೀಠಿಕೆ ವಾಚಿಸಿದರು. ಕ್ರೈಸ್ ಶಾಲೆಯ ಹಳೆಯ ವಿದ್ಯಾರ್ಥಿಗಳ ವೆಬ್‌ಸೈಟ್‌ ಅನ್ನು ಉದ್ಘಾಟಿಸಲಾಯಿತು ಮತ್ತು ಪಿಯು ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು. 

ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳಾದ ಕೆ. ಗೋವಿಂದರಾಜ್, ನಜೀರ್ ಅಹ್ಮದ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಪತ್ ರಾಜ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.

ಇತ್ತೀಚೆಗೆ ಉಡುಪಿಯ ಪೇಜಾವರ ಸ್ವಾಮೀಜಿ ಸಹ ಸಂವಿಧಾನ ಬದಲಾವಣೆಯ ಬಗ್ಗೆ ಮಾತನಾಡಿದ್ದಾರೆ. ಸಂವಿಧಾನವನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ
ಸಿದ್ದರಾಮಯ್ಯ ಮುಖ್ಯಮಂತ್ರಿ

ಸಂವಿಧಾನ ಬದಲಾಯಿಸುತ್ತೇವೆ ಎಂದವರು ಮನೆಗೆ ಹೋದರು

‘ಸಂವಿಧಾನವನ್ನು ಕಿತ್ತು ಹಾಕುತ್ತೇವೆ ಹರಿದು ಹಾಕುತ್ತೇವೆ ಬದಲಾಯಿಸುತ್ತೇವೆ ಎಂದ ಬಿಜೆಪಿಯವರನ್ನೇ ಜನರು ಬದಲಾಯಿಸಿದರು. ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಹೇಳಿದವರೆಲ್ಲ ಮನೆಗೆ ಹೋಗಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ‘ಸಚಿವ ಎಚ್‌.ಸಿ. ಮಹದೇವಪ್ಪ ಅವರು ರಾಜಕೀಯದಿಂದ ನಿವೃತ್ತಿ ಪಡೆದ ಬಳಿಕ ಅವರನ್ನು ವಿಶ್ವವಿದ್ಯಾಲಯಗಳಿಗೆ ಸಂದರ್ಶಕ ಉಪನ್ಯಾಸಕರನ್ನಾಗಿ ಕಳುಹಿಸಬೇಕು ಎನ್ನುವ ಅಭಿಲಾಷೆ ಅವರ ಮಾತುಗಳನ್ನು ಕೇಳಿದಾಗ ಅನ್ನಿಸಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.