ADVERTISEMENT

ಖಾತೆಯಾಗದ ಚಿಕ್ಕಪೇಟೆ ಶಾಲೆ ಸ್ವತ್ತು

ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಜಿಲ್ಲಾಡಳಿತ, ಕಂದಾಯ ಇಲಾಖೆಗೆ ಪತ್ರ

ಚಂದ್ರಹಾಸ ಹಿರೇಮಳಲಿ
Published 30 ಡಿಸೆಂಬರ್ 2022, 21:07 IST
Last Updated 30 ಡಿಸೆಂಬರ್ 2022, 21:07 IST
   

ಬೆಂಗಳೂರು: ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾಗಿದ್ದ ಚಿಕ್ಕಪೇಟೆ ಸರ್ಕಾರಿ ಪ್ರೌಢಶಾಲೆಯ ಬಹುಕೋಟಿ ಮೌಲ್ಯದ ನಿವೇಶನ ಹಾಗೂ ಕಟ್ಟಡವನ್ನು ಶಾಲೆ ಹೆಸರಿಗೆ ಖಾತೆ ಮಾಡಿಕೊಡಲು ಕಂದಾಯ ಇಲಾಖೆ ಮೀನಮೇಷ ಎಣಿಸುತ್ತಿದೆ.

‘ಸರ್ಕಾರಿ ಶಾಲೆ ಮಾರಾಟಕ್ಕಿದೆ’ ಎಂಬ ಶೀರ್ಷಿಕೆಯಡಿ ಇದೇ ವರ್ಷದ ಆಗಸ್ಟ್‌ನಲ್ಲಿ ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಆ ಬಳಿಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರಿಗಳ ಸಭೆ ನಡೆದು, ಶಾಲೆ ಹೆಸರಿಗೆ ನಿವೇಶನ ಹಾಗೂ ಕಟ್ಟಡವನ್ನು ನೋಂದಣಿ ಮಾಡಿಕೊಡಲು, ಆರ್‌ಟಿಸಿಯಲ್ಲೂ ಪ್ರೌಢಶಾಲೆ ಸ್ವತ್ತು ಎಂದು ನಮೂದಿಸಲು ಕಂದಾಯ ಇಲಾಖೆಯನ್ನು ಕೋರಲಾಗಿತ್ತು. ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕಂದಾಯ ಇಲಾಖೆ ಬೆಂಗಳೂರು ನಗರ ಜಿಲ್ಲಾಡಳಿತಕ್ಕೆ ನೀಡಿತ್ತು.

ಬಿಬಿಎಂಪಿ ಹಾಗೂ ಸರ್ವೆ ಇಲಾಖೆ ಸಹಯೋಗದಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್, ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ವರದಿ ಕೊಟ್ಟಿದ್ದರು. ಈ ವರದಿ ಆಧಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಜಿಲ್ಲಾಧಿಕಾರಿ, ಕಟ್ಟಡವನ್ನು ಕಂದಾಯ ಇಲಾಖೆ ಅಧೀನದಲ್ಲೇ ಉಳಿಸಿಕೊಳ್ಳಲು, ಶಿಕ್ಷಣ ಇಲಾಖೆಗೆ ನೀಡಲು ಅಥವಾ ರಜತ ಕಾಂಪ್ಲೆಕ್ಸ್‌ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ 30 ವರ್ಷಗಳಿಗೆ ಮರಳಿ ಗುತ್ತಿಗೆ ನೀಡಬಹುದೇ ಎಂದು ಕೋರಿ ಕಂದಾಯ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಅಗತ್ಯ ದಾಖಲೆಗಳಿದ್ದರೂ ಶಾಲೆಯ ಹೆಸರಿಗೆ ಸ್ವತ್ತು ವರ್ಗಾಯಿಸಲು ಕ್ರಮಕೈಗೊಂಡಿಲ್ಲ.
ಚಿಕ್ಕಪೇಟೆ ಒಟಿಸಿ ರಸ್ತೆಯಲ್ಲಿರುವ (ಮೆಜೆಸ್ಟಿಕ್‌ ಸಮೀಪ) ಸರ್ಕಾರಿ ಪ್ರೌಢಶಾಲೆ 77 ವರ್ಷಗಳಷ್ಟು ಹಳೆಯದು. 13,735 ಅಡಿಗಳ ನಿವೇಶನದಲ್ಲಿ 1945ರಲ್ಲೇ ಪ್ರಾಥಮಿಕ, ಮಾಧ್ಯಮಿಕ ಶಾಲೆ ಆರಂಭವಾಗಿದ್ದವು. ಸ್ವಾತಂತ್ರ್ಯಾ ನಂತರ ಅದೇ
ಜಾಗದಲ್ಲಿ ಪ್ರೌಢಶಾಲೆಯನ್ನೂ ತೆರೆಯಲಾಗಿತ್ತು.

ADVERTISEMENT

ಶಿಥಿಲಾವಸ್ಥೆಯಲ್ಲಿದ್ದ ಶಾಲಾ ಕೊಠಡಿಗಳನ್ನು ಕೆಡವಿ, ಹೊಸ ಕಟ್ಟಡ ನಿರ್ಮಿಸಿಕೊಡಲು ಅವಕಾಶ ಕೋರಿ 1979ರಲ್ಲಿ ರಜತಾ ಎಂಟರ್‌ ಪ್ರೈಸಸ್‌ ಎಂಬ ಖಾಸಗಿ ಸಂಸ್ಥೆಯೊಂದು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಸಂಸ್ಥೆಯ ಮನವಿ ಪುರಸ್ಕರಿಸಿದ ಸರ್ಕಾರ, ಬಹು ಅಂತಸ್ತಿನ ಕಟ್ಟಡ ನಿರ್ಮಿಸಲು, ಎರಡನೇ ಮಹಡಿಯಲ್ಲಿ ಶಾಲೆಗಳಿಗೆ ಕೊಠಡಿ ಕಟ್ಟಿಕೊಡಲು ಒಪ್ಪಂದ ಮಾಡಿಕೊಂಡು 26 ವರ್ಷಗಳಿಗೆ
ಶಾಲಾ ಜಾಗವನ್ನು ಗುತ್ತಿಗೆ ನೀಡಿತ್ತು. ಗುತ್ತಿಗೆ ಒಪ್ಪಂದದಲ್ಲೇ ‘ಶಾಲೆಯ ಜಾಗ’ ಎಂದು ಸ್ಪಷ್ಟವಾಗಿ ನಮೂದಾಗಿದ್ದರೂ, ಅವಧಿ ಮುಗಿದ ನಂತರ ಶಾಲೆಯ ಹೆಸರಿಗೆ ಸರ್ಕಾರ ಖಾತೆ ಮಾಡಿಕೊಟ್ಟಿರಲಿಲ್ಲ. ನಂತರ ಬಾಡಿಗೆದಾರರ ಸಂಘಕ್ಕೆ 10 ವರ್ಷಗಳು ಗುತ್ತಿಗೆ ನೀಡಲಾಗಿತ್ತು. ಈ ಅವಧಿಯೂ 2021 ಜೂನ್‌ಗೆ ಮುಕ್ತಾಯವಾಗಿದೆ.

ಅವಧಿ ಬಳಿಕ ಗುತ್ತಿಗೆದಾರರಿಗೆ ಖಾತೆ!

ರಜತಾ ಎಂಟರ್‌ಪ್ರೈಸಸ್‌ಗೆ ನೀಡಿದ್ದಗುತ್ತಿಗೆ ಅವಧಿ 2005ಕ್ಕೆ ಮುಕ್ತಾಯವಾಗಿತ್ತು. ಗುತ್ತಿಗೆ ಮುಂದುರಿಸಲು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಜಾ ಮಾಡಿದ ನಂತರ ರಜತಾ ಕಾಂಪ್ಲೆಕ್ಸ್‌ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಸಂಘಕ್ಕೆ 2011ರಲ್ಲಿ ಗುತ್ತಿಗೆ ನೀಡಲಾಗಿತ್ತು. ಈ ಅವಧಿಯಲ್ಲೇ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಹಿಂದೆ ಗುತ್ತಿಗೆ ಪಡೆದಿದ್ದ ರಜತಾ ಎಂಟರ್‌ಪ್ರೈಸಸ್‌ ಮಾಲೀಕರ ಹೆಸರಿಗೆ ಸ್ವತ್ತಿನ ಖಾತೆ ಮಾಡಿಕೊಟ್ಟಿರುವುದು ಅನುಮಾನಕ್ಕೆ ಕಾರಣವಾಗಿದೆ. ಶಿಕ್ಷಣ ಇಲಾಖೆಯ ಮನವಿಯಂತೆ ದಾಖಲೆಗಳ ಪರಿಶೀಲನೆ ನಡೆಸಿದಾಗ ಇಂತಹ ಅಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

‘ಚಿಕ್ಕಪೇಟೆ ಸರ್ವೆ ನಂಬರ್‌ 812/2ರಲ್ಲಿರುವ ಶಾಲೆಯ ಕಟ್ಟಡದ ಖಾತೆ 2011ರಿಂದರಜತಾ ಎಂಟರ್‌ಪ್ರೈಸಸ್‌ ಹೆಸರಿಗೆ ದಾಖಲಾಗಿದೆ‌. ಹೇಗೆ ಖಾತೆ ಮಾಡಲಾಗಿದೆ ಎಂಬ ದಾಖಲೆಗಳು ಲಭ್ಯವಾಗಿಲ್ಲ. ಖಾತೆ ವರ್ಗಾವಣೆಯ ಬಗ್ಗೆ ಜಿಲ್ಲಾಡಳಿತ ನಿರಾಕ್ಷೇಪಣಾ ಪತ್ರ ನೀಡಿದರೆ ಮನವಿ ಪರಿಗಣಿಸಲಾಗುವುದು’ ಎಂದು ಬಿಬಿಎಂಪಿ ಸಹಾಯಕ ಕಂದಾಯಾಧಿಕಾರಿ ಶಿಕ್ಷಣ ಇಲಾಖೆಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.