ADVERTISEMENT

ಮಗುವಿನ ಅಪಹರಣ ಪ್ರಕರಣ; ತೂತ್ತುಕುಡಿ ತಹಶೀಲ್ದಾರ್ ದಂಪತಿ ಸೇರಿ ಐವರ ಸೆರೆ

ಪೊಲೀಸರಿಗೆ ನೆರವಾದ ಕಾರು ಚಾಲಕ

​ಪ್ರಜಾವಾಣಿ ವಾರ್ತೆ
Published 20 ಜನವರಿ 2019, 3:01 IST
Last Updated 20 ಜನವರಿ 2019, 3:01 IST
ಥಾಮಸ್ ದಂಪತಿ
ಥಾಮಸ್ ದಂಪತಿ   

ಬೆಂಗಳೂರು: ಹನ್ನೊಂದು ತಿಂಗಳ ಮಗುವನ್ನು ಅಪಹರಿಸಿ ತೂತ್ತುಕುಡಿ ವಿಶೇಷ ತಹಶೀಲ್ದಾರ್‌ಗೆ ಮಾರಾಟ ಮಾಡಿದ್ದ ಮೂವರು ಅಪಹರಣಕಾರರು ಹಾಗೂ ತಹಶೀಲ್ದಾರ್ ದಂಪತಿಯನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

ತಮ್ಮ ಮಗು ನಾಪತ್ತೆಯಾದ ಸಂಬಂಧ ದೆಹಲಿಯ ಚಂದನ್ ಕುಮಾರ್ ಸಿಂಗ್ ಹಾಗೂ ರಾಣಿ ದಂಪತಿ ಜ.16ರಂದು ದೂರು ಕೊಟ್ಟಿದ್ದರು.

‘ವಿಶೇಷ ತಹಶೀಲ್ದಾರ್ ಟಿ.ಥಾಮಸ್ ಪಯಸ್ ಅರುಳ್ (55), ಪತ್ನಿ ಜೆ.ಅರುಣಾ ಪಯಸ್ (45), ಮಲ್ಲತ್ತಹಳ್ಳಿಯ ಅಂಬುಕುಮಾರ್ (43), ಮಾಗಡಿ ರಸ್ತೆಯ ಮಂಜುನಾಥ (19), ಡಿ.ಯೋಗೇಶ್ ಕುಮಾರ್ (23) ಎಂಬುವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಮಣಿ ತಲೆಮರೆಸಿಕೊಂಡಿದ್ದಾನೆ’ ಎಂದು ಜ್ಞಾನಭಾರತಿ ಪೊಲೀಸರು ತಿಳಿಸಿದರು.

ADVERTISEMENT

ದತ್ತು ಕೇಳಿದರೆ ಕದ್ದು ತಂದರು: ಥಾಮಸ್ ಕಚೇರಿಯಲ್ಲೇ ಸೋಮಸುಂದರ್ ಎಂಬುವರು ಗುಮಾಸ್ತರಾಗಿದ್ದಾರೆ. ಮದುವೆಯಾಗಿ 23 ವರ್ಷವಾದರೂ ಅವರಿಗೆ ಮಗು ಇರಲಿಲ್ಲ. ಹೀಗಾಗಿ, ಅನಾಥ ಮಗುವನ್ನು ದತ್ತು ಪಡೆಯಲು ನಿರ್ಧರಿಸಿದ್ದರು. ಅದಕ್ಕೆ ಥಾಮಸ್‌ ಅವರ ನೆರವು ಕೋರಿದ್ದರು. ಕೂಡಲೇ ಬೆಂಗಳೂರಿನ ಸ್ನೇಹಿತ ಅಂಬುಕುಮಾರ್‌ಗೆ ಕರೆ ಮಾಡಿದ್ದ ಅವರು, ‘ಎಷ್ಟು ಹಣ ಖರ್ಚಾದರೂ ಚಿಂತೆಯಿಲ್ಲ. ನನ್ನ ಸ್ನೇಹಿತನಿಗೆ ಒಂದು ಮಗು ಕೊಡಿಸು’ ಎಂದಿದ್ದರು. ಅದಕ್ಕೆ ಆತ ಒಪ್ಪಿಕೊಂಡಿದ್ದ.

ಚಂದನ್ ಹಾಗೂ ರಾಣಿ ದಂಪತಿ ಮೂರು ವರ್ಷಗಳಿಂದ ಮಲ್ಲತ್ತಹಳ್ಳಿಯಲ್ಲಿ ನೆಲೆಸಿದ್ದರು. ಪಕ್ಕದ ಮನೆಯಲ್ಲೇ ಅಂಬುಕುಮಾರ್ ವಾಸವಿದ್ದ. ಚಂದನ್‌ ಅವರನ್ನು ಪರಿಚಯ ಮಾಡಿಕೊಂಡಿದ್ದ ಆತ, ಆಗಾಗ್ಗೆ ಅವರ ಮನೆಗೂ ಹೋಗಿ ಬರುತ್ತಿದ್ದ. ಅವರ ಮಗುವನ್ನೇ ಅಪಹರಿಸಿ ತಹಶೀಲ್ದಾರ್ ದಂಪತಿಗೆ ಕೊಡಲು ಸಂಚು ರೂಪಿಸಿದ್ದ.

ಜ.14ರಂದು ಥಾಮಸ್‌ಗೆ ಕರೆ ಮಾಡಿದ್ದ ಅಂಬುಕುಮಾರ್, ‘ಮಗು ಸಿಕ್ಕಿದೆ. ನೀವು ಕೂಡಲೇ ಹೊರಟು ಬನ್ನಿ’ ಎಂದು ತಿಳಿಸಿದ್ದ. ಅಂತೆಯೇ ದಂಪತಿ ರೈಲಿನಲ್ಲಿ ಬೆಂಗಳೂರಿಗೆ ಬಂದು ಮೊದಲ ದಿನ ಆತನ ಮನೆಯಲ್ಲೇ ಉಳಿದುಕೊಂಡಿದ್ದರು. ಆರೋಪಿಯ ಸೂಚನೆಯಂತೆ ಮರುದಿನ ಬೆಳಿಗ್ಗೆ ನಾಯಂಡಹಳ್ಳಿಯ ಲಾಡ್ಜ್‌ಗೆ ತೆರಳಿ ಆಶ್ರಯ ಪಡೆದಿದ್ದರು.

ವ್ಯವಸ್ಥಿತ ಸಂಚು: ಮಲ್ಲತ್ತಹಳ್ಳಿಯಲ್ಲೇ ಹೊಸ ಮನೆ ನೋಡಿದ್ದ ಚಂದನ್–ರಾಣಿ ದಂಪತಿ, ವಾಸ್ತವ್ಯವನ್ನು ಅಲ್ಲಿಗೆ ಬದಲಿಸಲು ನಿರ್ಧರಿಸಿದ್ದರು. ಮನೆ ಸಾಮಾನುಗಳನ್ನು ಸ್ಥಳಾಂತರಿಸಲು ಕೆಲಸದ ಆಳುಗಳನ್ನು ಹುಡುಕಿಕೊಡುವಂತೆ ಅವರು ಅಂಬುಕುಮಾರ್‌ಗೇ ಕೇಳಿದ್ದರು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆತ, ಸ್ನೇಹಿತರಾದ ಮಂಜುನಾಥ, ಯೋಗೇಶ್ ಹಾಗೂ ಮಣಿ ಅವರನ್ನು ಕರೆಸಿಕೊಂಡಿದ್ದ. ಮಗುವನ್ನು ಅಪಹರಿಸಿದರೆ ಕೈತುಂಬ ಹಣ ಸಿಗುವುದಾಗಿ ಆಮಿಷವೊಡ್ಡಿದ್ದ. ಅದಕ್ಕೆ ಅವರೂ ಒಪ್ಪಿಕೊಂಡಿದ್ದರು.

ಜ.16ರ ರಾತ್ರಿ ಚಂದನ್ ಅವರು ಜಿಗಣಿಯಲ್ಲಿ ನೆಲೆಸಿರುವ ಮೊದಲ ಪತ್ನಿಯ ಮನೆಗೆ ತೆರಳಿದ್ದರು. ಹೀಗಾಗಿ, ರಾಣಿ ಒಬ್ಬರೇ ಸ್ಥಳೀಯರ ನೆರವಿನಿಂದ ಸಾಮಾನುಗಳನ್ನು ಹೊಸ ಮನೆಗೆ ಸ್ಥಳಾಂತರಿಸುತ್ತಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಅಲ್ಲಿಗೆ ಬಂದ ಮಂಜುನಾಥ್, ‘ಸಾಮಾನುಗಳನ್ನು ಶಿಫ್ಟ್‌ ಮಾಡಲು ಅಂಬುಕುಮಾರ್ ಅವರು ನನ್ನನ್ನು ಕಳುಹಿಸಿದ್ದಾರೆ’ ಎಂದಿದ್ದ. ಆತ ಹೊಸ ಮನೆ ತೋರಿಸುವಂತೆ ರಾಣಿ ಅವರನ್ನು ಕರೆದುಕೊಂಡು ಹೋದಾಗ, ಯೋಗೇಶ್ ಹಾಗೂ ಮಣಿ ಬೈಕ್‌ನಲ್ಲಿ ಬಂದು ಮಲಗಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದರು.

ಮಗುವನ್ನು ನಾಯಂಡಹಳ್ಳಿ ಜಂಕ್ಷನ್‌ ಬಳಿ ತರಿಸಿಕೊಂಡ ಅಂಬುಕುಮಾರ್, ಥಾಮಸ್ ದಂಪತಿಯನ್ನೂ ಜಂಕ್ಷನ್‌ಗೇ ಕರೆಸಿಕೊಂಡು ಮಗು ಕೊಟ್ಟಿದ್ದ. ಮಾತುಕತೆಯಂತೆ ದಂಪತಿ ಆತನಿಗೆ ₹2 ಲಕ್ಷ ಕೊಟ್ಟಿದ್ದರು. ಬಳಿಕ ‘ಜಸ್ಟ್ ಡಯಲ್’ ಮೂಲಕ ಟ್ರಾವೆಲ್ಸ್ ಏಜೆನ್ಸಿಯನ್ನು ಸಂಪರ್ಕಿಸಿ ಬಾಡಿಗೆ ಕಾರಿನಲ್ಲಿ ತೂತ್ತುಕುಡಿ ಕಡೆ ಪ್ರಯಾಣ ಬೆಳೆಸಿದ್ದರು.

ಇತ್ತ ಅರ್ಧ ತಾಸಿನ ಬಳಿಕ ತಾಯಿ ಹಳೆ ಮನೆಗೆ ಬಂದಾಗ ಮಗು ಇರಲಿಲ್ಲ. ಅಕ್ಕ–ಪಕ್ಕದವರನ್ನು ವಿಚಾರಿಸಿದರೂ
ಪ್ರಯೋಜನವಾಗಿರಲಿಲ್ಲ. ‘ಯುವಕರಿಬ್ಬರು ನಿಮ್ಮ ಮನೆಯೊಳಗೆ ಹೋಗಿದ್ದನ್ನು ನೋಡಿದೆ. ಅವರು ಸಾಮಾನು ಸ್ಥಳಾಂತರಿಸಲು ಬಂದಿರಬಹುದೆಂದು ನಾನೂ ತಲೆ ಕೆಡಿಸಿಕೊಳ್ಳಲಿಲ್ಲ’ ಎಂದು ಹತ್ತಿರದ ಅಂಗಡಿ ಮಾಲೀಕರೊಬ್ಬರು ಹೇಳಿದ್ದರು. ಕೂಡಲೇ ರಾಣಿ ಠಾಣೆಯ ಮೆಟ್ಟಿಲೇರಿದ್ದರು.

‘ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ಅಂಬುಕುಮಾರ್, ‘ಮಗುವನ್ನು ಸಾಕುತ್ತೇನೆ. ನನಗೆ ಕೊಟ್ಟು ಬಿಡಿ’ ಎಂದು ಕೇಳಿದ್ದರು. ಅದಕ್ಕೆ ನಾನು ನಿರಾಕರಿಸಿದ್ದೆ. ಅವರ ಮೇಲೆಯೇ ಅನುಮಾನವಿದೆ’ ಎಂದು ಸಂಶಯವನ್ನೂ ವ್ಯಕ್ತಪಡಿಸಿದ್ದರು. ‍ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಗು ಅಪಹರಣದ ರಹಸ್ಯವನ್ನು ಬಾಯ್ಬಿಟ್ಟಿದ್ದ.

ಸ್ನೇಹಕ್ಕೆ ‘ಜರ್ಮನಿ’ ಸೇತುವೆ!

‘ಥಾಮಸ್‌ ಅಕ್ಕ ಅಲೆಕ್ಸ್ ಅವರ ಕುಟುಂಬ ಜರ್ಮನಿಯಲ್ಲಿ ನೆಲೆಸಿದೆ. ಅಂಬುಕುಮಾರ್‌ನ ಸಂಬಂಧಿಯ ಕುಟುಂಬ ಸಹ ಅದೇ ದೇಶದಲ್ಲಿದ್ದಾರೆ. ಮೊದಲು ಆ ಎರಡು ಕುಟುಂಬಗಳ ನಡುವೆ ಸ್ನೇಹ ಬೆಳೆದಿತ್ತು. ಮೂರು ವರ್ಷಗಳ ಹಿಂದೆ ಎಲ್ಲರೂ ಒಟ್ಟಾಗಿ ಬೆಂಗಳೂರಿಗೆ ಬಂದು ಅಲೆಕ್ಸ್ ಮನೆಯಲ್ಲೇ ಉಳಿದುಕೊಂಡಿದ್ದರು. ಅಕ್ಕನನ್ನು ಕಾಣಲು ಥಾಮಸ್ ಕೂಡ ಬೆಂಗಳೂರಿಗೆ ಬಂದಾಗ ಅಂಬುಕುಮಾರ್‌ನ ಪರಿಚಯವಾಗಿತ್ತು. ಆ ನಂತರ ಎಲ್ಲರೂ ಒಂದೇ ಕುಟುಂಬದವರಂತೆ ಇದ್ದರು’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ, ಕಾರು, ಬೈಕ್ ಜಪ್ತಿ

ಮಗುವಿನ ತಂದೆ ಜಿಗಣಿಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಾರೆ. ಆರೋಪಿಗಳ ಪೈಕಿ ಅಂಬುಕುಮಾರ್ ಎಲೆಕ್ಟ್ರೀಷಿಯನ್ ಆಗಿ, ಯೋಗೇಶ್ ಮೆಕ್ಯಾನಿಕ್ ಆಗಿ, ಮಂಜುನಾಥ್ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. ಬಂಧಿತರಿಂದ ₹ 2 ಲಕ್ಷ ನಗದು, ಅಂಬುಕುಮಾರ್‌ನ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚಾಲಕನ ಸಮಯ ಪ್ರಜ್ಞೆ

ಪೊಲೀಸರು ಥಾಮಸ್‌ ಅವರಿಗೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು. ಅವರ ಮೊಬೈಲ್‌ನಿಂದ ಕಡೆಯದಾಗಿ ಟ್ರಾವೆಲ್ಸ್ ಏಜೆನ್ಸಿಗೆ ಕರೆ ಹೋಗಿದ್ದರಿಂದ, ಕೂಡಲೇ ಅವರನ್ನು ಸಂಪರ್ಕಿಸಿ ಚಾಲಕನ ಮೊಬೈಲ್ ಸಂಖ್ಯೆ ಪಡೆದುಕೊಂಡರು. ಬಳಿಕ ಚಾಲಕನಿಗೆ ಕರೆ ಮಾಡಿ, ‘ನಿಮ್ಮ ಕಾರಿನಲ್ಲಿರುವ ದಂಪತಿ ಮಗುವನ್ನು ಅಪಹರಿಸಿಕೊಂಡು ಹೋಗುತ್ತಿದ್ದಾರೆ. ಅವರನ್ನು ಬಂಧಿಸಲು ನಿಮ್ಮ ಸಹಕಾರ ಬೇಕು’ ಎಂದಿದ್ದರು.

ಚಾಲಕ ಮೊಬೈಲ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದರಿಂದ ಅನುಮಾನಗೊಂಡ ಥಾಮಸ್, ‘ಚಾಲನೆ ವೇಳೆ ಕರೆ ಸ್ವೀಕರಿಸುತ್ತೀರಲ್ಲ. ಪ್ರಯಾಣಿಕರ ಸುರಕ್ಷತೆ ಕಡೆಗೂ ಗಮನ ಇರಲಿ. ಮೊಬೈಲ್ ಪಕ್ಕಕ್ಕಿಟ್ಟು ಬೇಗ ತೂತ್ತುಕುಡಿಗೆ ಕರೆದುಕೊಂಡು ಹೋಗಿ. ₹1,000 ಹೆಚ್ಚುವರಿ ಬಾಡಿಗೆ ಕೊಡುತ್ತೇನೆ’ ಎಂದಿದ್ದರು. ಆಗ ಚಾಲಕ, ‘ಸರ್, ನನಗೆ ನಿದ್ರೆ ಬರುತ್ತಿದೆ. ಸ್ವಲ್ಪ ಸಮಯ ಕಾರಿನಲ್ಲೇ ಮಲಗುತ್ತೇನೆ. ನೀವೂ ವಿಶ್ರಾಂತಿ ಪಡೆಯಿರಿ’ ಎಂದಿದ್ದರು. ಅದಕ್ಕೆ ಥಾಮಸ್ ಒಪ್ಪಿರಲಿಲ್ಲ.

ಠಾಣೆ ಆವರಣಕ್ಕೆ ನುಗ್ಗಿಸಿದರು: ಮೂತ್ರ ವಿಸರ್ಜನೆ ನೆಪದಲ್ಲಿ ಕಾರು ನಿಲ್ಲಿಸಿದ್ದ ಚಾಲಕ, ಜ್ಞಾನಭಾರತಿ ಇನ್‌ಸ್ಪೆಕ್ಟರ್ ಶಿವಾರೆಡ್ಡಿ ಅವರಿಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದರು. ಆಗ ಅವರು, ‘ಹತ್ತಿರದಲ್ಲಿ ಯಾವುದಾದರೂ ಪೊಲೀಸ್ ಠಾಣೆ ಇದ್ದರೆ, ಕಾರನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ. ನಾನು ಆ ಪೊಲೀಸರ ಜತೆ ಮಾತನಾಡುತ್ತೇನೆ’ ಎಂದಿದ್ದರು. ಅಂತೆಯೇ ಗೂಗಲ್ ಸರ್ಚ್ ಮಾಡಿದಾಗ, ಹತ್ತಿರದಲ್ಲೇ ಓಮ್ಲೂರು ಠಾಣೆ ಇರುವುದು ಗೊತ್ತಾಗಿತ್ತು. ಆ ಮಾಹಿತಿಯನ್ನು ಇನ್‌ಸ್ಪೆಕ್ಟರ್‌ಗೆ ಕಳುಹಿಸಿದ ಚಾಲಕ, ಅಲ್ಲಿಂದ ಹೊರಟು ಠಾಣೆ ಆವರಣದೊಳಗೆ ಕಾರು ನುಗ್ಗಿಸಿದ್ದರು.

ಅಷ್ಟರಲ್ಲಾಗಲೇ ಶಿವಾರೆಡ್ಡಿ ಆ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದರು. ದಂಪತಿ ಇಳಿದು ಹೋಗದಂತೆ ಡೋರ್‌ಗಳನ್ನು ಲಾಕ್ ಮಾಡಿದ ಚಾಲಕ, ಕೂಡಲೇ ಠಾಣೆಯೊಳಗೆ ಓಡಿ ವಿಷಯ ತಿಳಿಸಿದ್ದರು. ಅವರು ದಂಪತಿಯನ್ನು ವಶಕ್ಕೆ ಪಡೆದು ಠಾಣೆಯಲ್ಲೇ ಕೂರಿಸಿಕೊಂಡಿದ್ದರು. ಜ್ಞಾನಭಾರತಿ ಠಾಣೆಯ ಎಸ್‌ಐ ಮಲ್ಲಿಕಾರ್ಜುನ್, ಎಎಸ್‌ಐ ಲಕ್ಷ್ಮೀಶ ಹಾಗೂ ಇತರೆ ನಾಲ್ವರು ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ ಓಮ್ಲೂರು ಠಾಣೆಗೆ ತೆರಳಿ ದಂಪತಿಯನ್ನು ಹಾಗೂ ಮಗುವನ್ನು ನಗರಕ್ಕೆ ಕರೆತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.