ADVERTISEMENT

ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ‘ಮಕ್ಕಳ ಸ್ನೇಹಿ ಕೊಠಡಿ’

ಕೆ.ಎಸ್.ಸುನಿಲ್
Published 13 ಜನವರಿ 2026, 0:01 IST
Last Updated 13 ಜನವರಿ 2026, 0:01 IST
<div class="paragraphs"><p>ಸಾಂದರ್ಭಿಕ-ಚಿತ್ರ</p></div>

ಸಾಂದರ್ಭಿಕ-ಚಿತ್ರ

   

ಬೆಂಗಳೂರು: ಪೊಲೀಸ್ ಠಾಣೆ ನೋಡಿದಾಗ ಮಕ್ಕಳಲ್ಲಿ ಭಯ, ಆತಂಕ ಸಾಮಾನ್ಯ. ಪೊಲೀಸರೊಂದಿಗೆ ಮಾತನಾಡಲು ಮಕ್ಕಳು ಹಿಂಜರಿಯು ವುದೂ ಉಂಟು. ಇದನ್ನು ಹೋಗಲಾಡಿಸುವು ದರ ಜತೆಗೆ ಮಕ್ಕಳ ಮೇಲಿನ ಅಪರಾಧಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪೊಲೀಸ್ ಠಾಣೆಗಳಲ್ಲಿ ‘ಮಕ್ಕಳ ಸ್ನೇಹಿ ಕೊಠಡಿ’ ನಿರ್ಮಿಸಲಾಗಿದೆ.

ಪಶ್ಚಿಮ ಉಪ ವಿಭಾಗದ ಗೋವಿಂದರಾಜನಗರ, ಮಾಗಡಿ ರಸ್ತೆ, ವಿಜಯನಗರ ಹಾಗೂ ಕಾಮಾಕ್ಷಿಪಾಳ್ಯ, ಬಸವೇಶ್ವರ ನಗರ ಪೊಲೀಸ್ ಠಾಣೆಗಳಲ್ಲಿ ‘ಮಕ್ಕಳ ಸ್ನೇಹಿ ಕೊಠಡಿ’ ತೆರೆಯಲಾಗಿದೆ.

ADVERTISEMENT

ಸಾರ್ವಜನಿಕರು ಮಕ್ಕಳೊಂದಿಗೆ ಠಾಣೆಗೆಭೇಟಿ ನೀಡುವ ಸಂದರ್ಭದಲ್ಲಿ ಮಕ್ಕಳಗಮನವನ್ನು ಸೆಳೆಯುವ ವಾತಾವರಣ ಸೃಷ್ಟಿಸುವ ಉದ್ದೇಶವನ್ನು ಪೊಲೀಸರು ಹೊಂದಿದ್ದಾರೆ. ಇದರೊಂದಿಗೆ ಮಕ್ಕಳ ಮೇಲೆ ನಡೆಯುವ ಅಪರಾಧ ಗಳು, ಶೋಷಣೆಗಳ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಮಕ್ಕಳ ಸ್ನೇಹಿ ವಾತಾವರಣವನ್ನು ನಿರ್ಮಾಣ ಮಾಡಲು ಸಹಾಯ ಮಾಡುತ್ತದೆ.

ಐದು ಪೊಲೀಸ್ ಠಾಣೆಗಳ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ.

ಠಾಣೆಗಳಲ್ಲಿ ತಲಾ ಒಂದು ಕೊಠಡಿಯನ್ನು ಗುರುತಿಸಿ, ಪ್ರಾಯೋಜಕರು ಮತ್ತು ಚಿತ್ರಕಲಾ ಪರಿಷತ್‌ ವಿದ್ಯಾರ್ಥಿಗಳ ಸಹಾಯದಿಂದ ಚಿತ್ರಗಳನ್ನು ಬಿಡಿಸಲಾಗಿದೆ. ಠಾಣೆಗಳಿಗೆ ತಮ್ಮ ಪೋಷಕರೊಂದಿಗೆ ಭೇಟಿ ನೀಡುವ ಮಕ್ಕಳಿಗೆ ಹೆಚ್ಚು ಸುರಕ್ಷಿತ ಮತ್ತು ಆರಾಮದಾಯಕ ಎನಿಸುವ ವ್ಯವಸ್ಥೆ ಕಲ್ಪಿಸಲು ಈ ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಆಸನಗಳು, ಆಟಿಕೆಗಳು, ಶೈಕ್ಷಣಿಕ ವಿಚಾರ ಕುರಿತ ವ್ಯಂಗ್ಯಚಿತ್ರಗಳು, ಪುಸ್ತಕಗಳು ಮತ್ತು ಪತ್ರಿಕೆಗಳು ಇವೆ.

ಮಕ್ಕಳ ಹಕ್ಕುಗಳು, ಶಿಕ್ಷಣದ ಮಹತ್ವ, ಬಾಲ್ಯವಿವಾಹ, ಲೈಂಗಿಕ ಅಪರಾಧ ಸೇರಿದಂತೆ ಮಕ್ಕಳ ವಿರುದ್ಧದ ಅಪರಾಧಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ಮಕ್ಕಳ ರಕ್ಷಣೆಯ ಬಗ್ಗೆ ಶಿಕ್ಷಣ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಪೋಷಕರೊಂದಿಗೆ ಠಾಣೆಗಳಿಗೆ ಬರುವ ಮಕ್ಕಳು ಹಾಗೂ ಅವರ ಪೋಷಕರಿಗೂ ಮಹಿಳಾ ಪೊಲೀಸ್ ಸಿಬ್ಬಂದಿ ಮೂಲಕ ಅರಿವು ಮೂಡಿಸಲಾಗುತ್ತದೆ. ಅಲ್ಲದೇ ಪೋಕ್ಸೊ ಮತ್ತಿತರ ಸೂಕ್ಷ್ಮ ಪ್ರಕರಣಗಳಲ್ಲಿ ಮಕ್ಕಳಿಗೆ ಆಪ್ತ ಸಮಾಲೋಚನೆ ನಡೆಸುವುದಕ್ಕೂ ಇದನ್ನು ಬಳಸಿಕೊಳ್ಳಲಾಗುತ್ತದೆ.

‘ನಾನಾ ಸಂದರ್ಭದಲ್ಲಿ ಪೋಷಕರ ಜತೆ ಮಕ್ಕಳು ಠಾಣೆಗೆ ಬಂದು ಕುಳಿತುಕೊಳ್ಳುವುದನ್ನು ನೋಡುತ್ತಿದ್ದೇವೆ. ಕಳ್ಳರು, ಪೋಕ್ಸೊ ಹಾಗೂ ಕೊಲೆ ಆರೋಪಿಗಳು, ಲಾಕಪ್‌ ನೋಡಿ ಗಾಬರಿ ಗೊಳ್ಳುತ್ತಿದ್ದರು. ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಉತ್ತಮ ವಾತಾವರಣ ನಿರ್ಮಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳಲ್ಲಿನ ಭಯ ಹೋಗಲಾಡಿಸುವ ದೃಷ್ಟಿಯಿಂದ ಠಾಣೆಯಒಂದು ಕೊಠಡಿಯಲ್ಲಿ ಆಟಿಕೆಗಳು, ಪಂಚತಂತ್ರ ಕತೆಗಳು, ಪೋಕ್ಸೊ ಕಾಯ್ದೆ ಕುರಿತು ಮಾಹಿತಿ ನೀಡುವ ಚಿತ್ರಗಳು, ಜೀತ ಪದ್ದತಿ, ಕಾನೂನುಗಳ ಕುರಿತ ಫಲಕಗಳನ್ನು ಅಳವಡಿಸಿ, ಅರಿವುಮೂಡಿಸಲಾಗುತ್ತಿದೆ’ ಎಂದು ಎಸಿಪಿ ಎನ್. ಚಂದನ್ ಕುಮಾರ್ ತಿಳಿಸಿದರು.

‘ಈ ಕೊಠಡಿಗಳು ಮಕ್ಕಳಿಗೆ ಸುರಕ್ಷಿತ ಮತ್ತು ಆರಾಮದಾಯಕ ಸ್ಥಳವನ್ನು ಒದಗಿಸುವುದು ಮಾತ್ರವಲ್ಲದೆ, ಮಕ್ಕಳ ಮೇಲಿನ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಮಕ್ಕಳುಹಾಗೂ ಅವರ ಪೋಷಕರಿಗೆ ಸುರಕ್ಷತೆ ಮತ್ತು ಅಪರಾಧ ತಡೆಗಟ್ಟುವಿಕೆಯ ಬಗ್ಗೆ ಶಿಕ್ಷಣ ನೀಡಲು ವಿನ್ಯಾಸಗೊಳಿಸಲಾಗಿದೆ. ಲೈಂಗಿಕ ಕಿರುಕುಳ ನೀಡಿದವರ ವಿರುದ್ಧ ದೂರು ನೀಡಿದರೆ ಗುರುತು ಬಹಿರಂಗ ಪಡಿಸುವುದಿಲ್ಲ ಎಂಬುದನ್ನು ಮನವರಿಕೆ ಮಾಡಲಾಗುತ್ತಿದೆ. ಸಾಮಾನ್ಯ ಕಾನೂನುಗಳು, ಗುಡ್ ಟಚ್-ಬ್ಯಾಡ್ ಟಚ್‌ನಂತಹ ವಿಷಯಗಳ ಕುರಿತು ಮಕ್ಕಳಿಗೆ ತಿಳಿಸಲು ಈ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು.

ಈ ಕೊಠಡಿಗಳನ್ನು ಆರಂಭಿಸಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,ಮತ್ತಷ್ಟು ಠಾಣೆಗಳಲ್ಲಿ ಮಕ್ಕಳ ಸ್ನೇಹಿ ಕೊಠಡಿ ನಿರ್ಮಿಸಲು ಇಲಾಖೆ ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗೃಹ ಸಚಿವ ಜಿ.ಪರಮೇಶ್ವರ ಅವರ ಸೂಚನೆ ಮೇರೆಗೆ ಮೊದಲ ಹಂತದಲ್ಲಿ ಐದು ಠಾಣೆಗಳಲ್ಲಿ ‘ಮಕ್ಕಳ ಸ್ನೇಹಿ ಕೊಠಡಿ’ ನಿರ್ಮಿಸಲಾಗಿದ್ದು, ಹಂತ ಹಂತವಾಗಿ ಇನ್ನೂ ಕೆಲವು ಪೊಲೀಸ್ ಠಾಣೆಗಳಲ್ಲಿ ಈ ರೀತಿಯ ಕೊಠಡಿ ನಿರ್ಮಿಸಲಾಗುವುದು
ಸೀಮಾಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಕಮಿಷನರ್

‘ಮಕ್ಕಳ ಪರ ವಾತಾವರಣ ಕಲ್ಪಿಸಿ’

ಆದ್ಯತೆ ಮೇರೆಗೆ ಪ್ರತಿಯೊಂದು ಠಾಣೆಯಲ್ಲಿ ‘ಮಕ್ಕಳ ಸ್ನೇಹಿ ಕೊಠಡಿ’ ನಿರ್ಮಿಸುವ ಮೂಲಕ ಮಕ್ಕಳ ಪರ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗೃಹ ಇಲಾಖೆ ಗಮನ ಹರಿಸಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.

ಪ್ರತಿ ಠಾಣೆಯಲ್ಲೂ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ, ಜಿಲ್ಲಾ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಮಕ್ಕಳ ವಿಶೇಷ ಪೊಲೀಸ್ ಘಟಕದ ಜಿಲ್ಲಾ ನೋಡಲ್ ಅಧಿಕಾರಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ, ಸದಸ್ಯ, ಬಾಲ ನ್ಯಾಯ ಮಂಡಳಿಯ ಅಧ್ಯಕ್ಷ, ಸದಸ್ಯರು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೇರಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಮಾಹಿತಿ ಒಳಗೊಂಡ ಫಲಕ ಹಾಕಿರಬೇಕು ಎಂದು ತಿಳಿಸಿದರು.

ಮಕ್ಕಳ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನೋಂದಣಿ ಪುಸ್ತಕ, ಠಾಣಾ ವ್ಯಾಪ್ತಿಯ ಶಾಲಾ, ಕಾಲೇಜುಗಳಲ್ಲಿ ಪ್ರತಿ ಗುರುವಾರ ಜರುಗುವ ತೆರೆದ ಮನೆ ಕಾರ್ಯಕ್ರಮದ ನೋಂದಣಿ ಪುಸ್ತಕ ಹಾಗೂ 1 ಮತ್ತು 17 ಫಾರಂಗಳು ಲಭ್ಯವಿರಬೇಕು. ಮಕ್ಕಳ ಸಹಾಯವಾಣಿ 1098 ಹಾಗೂ ಪೊಲೀಸ್ ತುರ್ತು ಸಹಾಯವಾಣಿ ಮಾಹಿತಿಯನ್ನು ಫಲಕದಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.