ADVERTISEMENT

ಕೋವಿಡ್: ಮಕ್ಕಳಿಗೂ ಇದೆ ಆರೈಕೆ ಕೇಂದ್ರ

ಮಕ್ಕಳ ಆರೈಕೆಗೆ ವ್ಯವಸ್ಥೆ *ಸೋಂಕಿತ ಮಕ್ಕಳಿಗೂ ಚಿಕಿತ್ಸೆ

ಮನೋಹರ್ ಎಂ.
Published 11 ಮೇ 2021, 21:40 IST
Last Updated 11 ಮೇ 2021, 21:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪೋಷಕರಿಗೆ ಕೊರೊನಾ ಸೋಂಕು ತಗುಲಿ, ಮಕ್ಕಳ ಪಾಲನೆಯ ಚಿಂತೆಯಲ್ಲಿದ್ದರೆ ಹಾಗೂ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ಆರೈಕೆಗಾಗಿ ‘ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆ’ಯಡಿ ಮಕ್ಕಳ ಕಲ್ಯಾಣ ಸಮಿತಿಗಳು ಮಕ್ಕಳ ಆರೈಕೆ ಕೇಂದ್ರಗಳನ್ನು ತೆರೆದಿವೆ.

ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಯಾಗಿದ್ದು, ಜಿಲ್ಲಾವಾರು ಮಕ್ಕಳ ಕಲ್ಯಾಣ ಸಮಿತಿಗಳು ನೇತೃತ್ವ ವಹಿಸಿವೆ. ಕೊರೊನಾದಿಂದ ಒಂಟಿತನಕ್ಕೆ ದೂಡುತ್ತಿರುವ ಮಕ್ಕಳು ಹಾಗೂ ಕುಟುಂಬದ ತಾತ್ಕಾಲಿಕವಾಗಿ ಪ್ರತ್ಯೇಕಗೊಂಡಿರುವ ಮಕ್ಕಳ ಆರೈಕೆಗಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸುವ ಭರವಸೆ ನೀಡಿವೆ.

‘ಪೋಷಕರು ಹಾಗೂ ಮಕ್ಕಳನ್ನು ಕೊರೊನಾ ದೂರ ಮಾಡುತ್ತಿದೆ. ಪೋಷಕರಿಬ್ಬರಿಗೂ ಸೋಂಕು ತಗುಲಿದಾಗ, ಚಿಕಿತ್ಸೆಗಾಗಿ ಆಸ್ಪತ್ರೆ ಸೇರುತ್ತಾರೆ. ಈ ವೇಳೆ ಮಕ್ಕಳು ಒಂಟಿಯಾಗುತ್ತಾರೆ. ಸೋಂಕಿನಿಂದ ತಂದೆ–ತಾಯಿ ಇಬ್ಬರೂ ಮೃತಪಟ್ಟು ಮಕ್ಕಳು ಅನಾಥರಾಗುತ್ತಿರುವ ಘಟನೆಗಳೂ ಕಂಡು ಬರುತ್ತಿವೆ. ಇಂತಹ ಮಕ್ಕಳ ಪಾಲನೆಗೆಂದೇ ಮಕ್ಕಳ ಕಲ್ಯಾಣ ಸಮಿತಿಗಳು ವಿಶೇಷ ಪಾಲನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ’ ಎಂದು ಮಕ್ಕಳ ಕಲ್ಯಾಣ ಸಮಿತಿಯ ಬೆಂಗಳೂರು ಘಟಕದ ಅಧ್ಯಕ್ಷೆ ಅಂಜಲಿ ರಾಮಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಮಕ್ಕಳ ನ್ಯಾಯ ಕಾಯ್ದೆಯಡಿ ಮಕ್ಕಳ ಕಲ್ಯಾಣ ಸಮಿತಿಗಳು ಇಂತಹ ಮಕ್ಕಳ ಆರೈಕೆಗಾಗಿ ಒಂದು ಪ್ರತ್ಯೇಕ ಜಾಗ ನಿಗದಿ ಪಡಿಸಿದೆ. ಇಲ್ಲಿ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಶುಶ್ರೂಷಕರು, ವೈದ್ಯರು, ಆಪ್ತ ಸಮಾಲೋಚಕರೂ ಇರುತ್ತಾರೆ. ಮಕ್ಕಳಿಗೆ ಕೋವಿಡ್ ತಪಾಸಣೆ ಇರುತ್ತದೆ. ಸೋಂಕಿತ ಮಕ್ಕಳಿಗೆ ಕೋವಿಡ್ ಚಿಕಿತ್ಸೆಯ ವ್ಯವಸ್ಥೆಯೂ ಇರಲಿದೆ’ ಎಂದು ವಿವರಿಸಿದರು.

‘ಬೆಂಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ 6ರಿಂದ 18 ವರ್ಷದೊಳಗಿನ 150 ಮಕ್ಕಳಿಗೆ ಆಗುವಷ್ಟು ಸುಸಜ್ಜಿತ ಆರೈಕೆ ಕೇಂದ್ರ ಸಿದ್ಧಗೊಂಡಿದೆ. ಕೋವಿಡೇತರ ಮಕ್ಕಳಿಗೂ ಆರೈಕೆ ನೀಡಲಾಗುವುದು. ವಸತಿ, ಊಟ ಸೇರಿದಂತೆ ಮೂಲ ಸೌಕರ್ಯಗಳ ಜೊತೆಗೆ ಮನರಂಜನೆ, ಶಿಕ್ಷಣ, ಪರೀಕ್ಷೆಗೆ ಸಿದ್ಧತೆ, ಆನ್‌ಲೈನ್ ತರಗತಿಗಳ ವ್ಯವಸ್ಥೆಯೂ ಇರಲಿದೆ’ ಎಂದು ಮಾಹಿತಿ ನೀಡಿದರು.

‘ಇಂತಹ ಮಕ್ಕಳು ಕಂಡುಬಂದಲ್ಲಿ, ಮಕ್ಕಳ ಕಲ್ಯಾಣ ಸಮಿತಿಗಳು ಮೊದಲಿಗೆ ಆ ಮಕ್ಕಳ ಸಂಬಂಧಿಕರನ್ನು ಸಂಪರ್ಕಿಸಿ, ಅವರ ಪಾಲನೆಗೆ ನೀಡಲು ಪರಿಶೀಲಿಸುತ್ತದೆ. ಸಂಬಂಧಿಗಳು ಮಕ್ಕಳ ಜವಾಬ್ದಾರಿ ಹೊರಲು ಹಿಂದೆ ಸರಿದರೆ, ಮಕ್ಕಳನ್ನು ನೇರವಾಗಿ ರಕ್ಷಣಾ ಘಟಕಗಳಿಗೆ ಕರೆತರಲಾಗುವುದು’ ಎಂದರು.

‘ಮಕ್ಕಳ ಪೋಷಣೆಯ ಹೊಣೆ ನಾವೇ ಹೊತ್ತರೂ ಪೋಷಕರಿಗೂ ಕೆಲವು ಜವಾಬ್ದಾರಿಗಳಿವೆ. ನಮ್ಮ ಆರೈಕೆಯಲ್ಲಿರುವಾಗ ಪೋಷಕರು ತಮ್ಮ ಮಕ್ಕಳ ಸಂಪರ್ಕದಲ್ಲಿರಬೇಕು. ದೈನಂದಿನ ಸ್ಥಿತಿಗತಿಗಳನ್ನು ವಿಚಾರಿಸುತ್ತಿರಬೇಕು. ಈ ವ್ಯವಸ್ಥೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿನ ಮಕ್ಕಳಿಗೂ ಲಭ್ಯ. ಅಗತ್ಯವಿರುವವರು ಸಮೀಪದ ಮಕ್ಕಳ ಹಕ್ಕುಗಳ ರಕ್ಷಣಾ ಘಟಕಗಳು ಅಥವಾ ಮಕ್ಕಳ ಕಲ್ಯಾಣ ಸಮಿತಿಗಳನ್ನು ಸಂಪರ್ಕಿಸಬಹುದು’ ಎಂದು ಹೇಳಿದರು.

ಯಾರನ್ನು ಸಂಪರ್ಕಿಸಬೇಕು?

* ಮಕ್ಕಳ ಸಹಾಯವಾಣಿ-1098

* ಮಕ್ಕಳ ರಕ್ಷಣಾ ಘಟಕ (ಬೆಂಗಳೂರು):080–29523458

* ಜಿಲ್ಲಾಧಿಕಾರಿಗಳ ಕಚೇರಿಗೆ ಕರೆ ಮಾಡುವುದು (ಜಿಲ್ಲಾವಾರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.