ADVERTISEMENT

ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ರಂಗಭೂಮಿ ಅವಶ್ಯಕ: ನಟಿ ಲಕ್ಷ್ಮೀ ಭಟ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 16:19 IST
Last Updated 3 ಫೆಬ್ರುವರಿ 2026, 16:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ರಂಗಭೂಮಿಯ ಸನಿಹಕ್ಕೆ ತರಬೇಕು ಹಾಗೂ ನಾಟಕ, ಅಭಿನಯ ಮತ್ತು ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂಬ ಅಭಿಪ್ರಾಯ ಹೆಚ್ಚು ಬಲ ಪಡೆದುಕೊಳ್ಳುತ್ತಿದೆ ಎಂದು ನಟಿ ಲಕ್ಷ್ಮೀ ಭಟ್‌ ಹೇಳಿದರು.

ಬೆನಕ ಮಕ್ಕಳ ನಾಟಕ ಕೇಂದ್ರದ ವತಿಯಿಂದ ಉದಯಭಾನು ಕಲಾ ಸಂಘದಲ್ಲಿ ಏರ್ಪಡಿಸಿದ್ದ 47ನೇ ಮಕ್ಕಳ ರಂಗಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ADVERTISEMENT

ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಶಿಸ್ತುಬದ್ಧ ಜೀವನ ಶೈಲಿ, ಸಮಯಪಾಲನೆ ಹಾಗೂ ಆತ್ಮವಿಶ್ವಾಸ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.

ಎರಡು ದಶಕಗಳ ಹಿಂದೆ ಪೋಷಕರು ತಮ್ಮ ಮಕ್ಕಳನ್ನು ರಂಗಭೂಮಿ ಅಥವಾ ಸಿನಿಮಾರಂಗಕ್ಕೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಕಲಾರಂಗವನ್ನು ಭದ್ರ ಭವಿಷ್ಯದ ಕ್ಷೇತ್ರವೆಂದು ಪರಿಗಣಿಸದ ಮನೋಭಾವ ಸಮಾಜದಲ್ಲಿ ಸಾಮಾನ್ಯವಾಗಿತ್ತು. ಆದರೆ, ಕಾಲ ಬದಲಾಗಿದೆ. ಕಲೆಯ ಮಹತ್ವವನ್ನು ಅರಿತಿರುವ ಇಂದಿನ ಪೋಷಕರು, ಮಕ್ಕಳ ಪ್ರತಿಭೆ ಗುರುತಿಸಿ, ಅದಕ್ಕೆ ಅಗತ್ಯವಾದ ವೇದಿಕೆ ಮತ್ತು ಬೆಂಬಲ ನೀಡುತ್ತಿದ್ದಾರೆ ಎಂದರು.

ನಟ ಭುವನ್ ಮಾತನಾಡಿ, ‘ರಂಗಭೂಮಿ ಕೇವಲ ಕಲೆಯ ವೇದಿಕೆಯಷ್ಟೇ ಅಲ್ಲ. ಅದು ಮಕ್ಕಳಿಗೆ ಜೀವನ ಪಾಠ ಕಲಿಸುವ ಶಾಲೆಯಂತಿದೆ. ಹೀಗಾಗಿ ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ಅವರನ್ನು ಬಾಲ್ಯದಲ್ಲೇ ರಂಗಭೂಮಿಯೊಂದಿಗೆ ಸಂಪರ್ಕಕ್ಕೆ ತರಬೇಕು’ ಎಂದು ತಿಳಿಸಿದರು.

ಬ್ಯಾಂಕರ್ಸ್ ಕನ್ನಡಿಗರ ಬಳಗದ ಅಧ್ಯಕ್ಷ ಎಂ. ವೆಂಕಟೇಶ ಶೇಷಾದ್ರಿ ಮಾತನಾಡಿ, ‘ಮಕ್ಕಳಲ್ಲಿ ಶಿಸ್ತು, ಸಂಯಮ ಹಾಗೂ ಸಾಮಾಜಿಕ ಹೊಣೆಗಾರಿಕೆಯ ಗುಣಗಳು ಬೆಳೆಯಬೇಕಾದರೆ ರಂಗಭೂಮಿಗಿಂತ ಉತ್ತಮವಾದ ವೇದಿಕೆ ಮತ್ತೊಂದಿಲ್ಲ’ ಎಂದು ಹೇಳಿದರು.

ಕೇಂದ್ರದ ಮಕ್ಕಳು ರಂಗ ಗೀತೆಗಳು ಮತ್ತು ರಾಜೇಶ್ ಕಶ್ಯಪ್ ನಿರ್ದೇಶನದ ಜಾನಪದ ಕಥೆ ಆಧಾರಿತ ನಾಟಕ ‘ದಾನದ ಮಹತ್ವ’ ಪ್ರದರ್ಶಿಸಿದರು.

ಬೆನಕ ಮಕ್ಕಳ ನಾಟಕ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೆ.ಜಿ. ಸಂಪತ್ ಕುಮಾರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.