22ನೇ ಚಿತ್ರಸಂತೆಗೆ ಕರ್ನಾಟಕ ಚಿತ್ರಕಲಾ ಪರಿಷತ್ ಸಜ್ಜುಗೊಳ್ಳುತ್ತಿದ್ದು, ಶುಕ್ರವಾರ ಕಂಡುಬಂದ ಆಕರ್ಷಕ ದೃಶ್ಯ ಪ್ರ
ಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ವತಿಯಿಂದ ಭಾನುವಾರ (ಜ.5ರಂದು) ಕುಮಾರಕೃಪಾ ರಸ್ತೆಯಲ್ಲಿ 22ನೇ ಚಿತ್ರಸಂಜೆ ಆಯೋಜಿಸಲಾಗಿದ್ದು, ಕುಮಾರಕೃಪಾ ರಸ್ತೆಯ ವಿಂಡ್ಸರ್ ಮ್ಯಾನರ್ ವೃತ್ತದಿಂದ ಶಿವಾನಂದ ವೃತ್ತದವರೆಗೆ (ಈಶಾನ್ಯ ದಿಕ್ಕಿನಿಂದ ನೈರುತ್ಯ ದಿಕ್ಕಿನ ಕಡೆಗೆ) ಅಂದು ಎಲ್ಲ ಮಾದರಿಯ ವಾಹನಗಳ ಸಂಚಾರ ನಿಷೇಧಿಸಲಾಗಿದೆ.
ಚಿತ್ರಸಂತೆಯಲ್ಲಿ ಭಾವಗಿಸುವ ದೇಶದ ಹಲವು ರಾಜ್ಯಗಳ ಕಲಾವಿದರು ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್ ಆವರಣ ಹಾಗೂ ಕುಮಾರ ಕೃಪಾ ರಸ್ತೆಯ ಎರಡೂ ಬದಿಯ ಪಾದಚಾರಿ ಮಾರ್ಗದಲ್ಲಿ ಪ್ರದರ್ಶನಕ್ಕೆ ಇಡಲಿದ್ದಾರೆ. ಕಲಾಕೃತಿಯ ವೀಕ್ಷಣೆ ಹಾಗೂ ಖರೀದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು, ಕಲಾವಿದರು ಹಾಗೂ ಸಾರ್ವಜನಿಕರು ಬರುವ ನಿರೀಕ್ಷೆಯಿದ್ದು ಭಾನುವಾರ ಬೆಳಿಗ್ಗೆ 6ರಿಂದ ರಾತ್ರಿ 9 ಗಂಟೆವರೆಗೆ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಅಲ್ಲದೇ ಚಿತ್ರಸಂತೆಗೆ ಬರುವವರಿಗೆ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ತಿಳಿಸಿದ್ದಾರೆ.
ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಕುಮಾರಕೃಪಾ ರಸ್ತೆಯ ಕಡೆಗೆ ತೆರಳುವ ವಾಹನಗಳು ರೇಸ್ ವ್ಯೂ ಜಂಕ್ಷನ್‌ನಲ್ಲಿ ಬಸವೇಶ್ವರ ವೃತ್ತಕ್ಕೆ ನೇರವಾಗಿ ಸಾಗಿ ಅಲ್ಲಿಂದ ಬಸವೇಶ್ವರ ವೃತ್ತದಲ್ಲಿ ಎಡಕ್ಕೆ ತಿರುವು ಪಡೆದುಕೊಳ್ಳಬೇಕು. ಹಳೇ ಹೈಗ್ರೌಂಡ್ಸ್ ಜಂಕ್ಷನ್ ವಿಂಡ್ಸರ್ ಮ್ಯಾನರ್ ಜಂಕ್ಷನ್ ಮೂಲಕ ಸಾಗಬಹುದು.
ಟಿ.ಚೌಡಯ್ಯ ರಸ್ತೆಯಿಂದ ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕುಮಾರಕೃಪಾ ರಸ್ತೆಗೆ ಪ್ರವೇಶ ಪಡೆಯುವ ವಾಹನಗಳು, ವಿಂಡ್ಸರ್ ಮ್ಯಾನರ್ ವೃತ್ತದಲ್ಲಿಯೇ ಕುಮಾರಕೃಪಾ ರಸ್ತೆಗೆ ಪ್ರವೇಶ ಪಡೆಯುವುದನ್ನು ನಿರ್ಬಂಧಿಸಲಾಗಿದೆ. ಹಳೇ ಹೈಗ್ರೌಂಡ್ಸ್ ಜಂಕ್ಷನ್‌ಗೆ ನೇರವಾಗಿ ಸಾಗಿ, ಎಲ್ಆರ್‌ಡಿಇ ಬಳಿ ಬಲಕ್ಕೆ ತಿರುವು ಪಡೆದು ಬಸವೇಶ್ವರ ವೃತ್ತ– ರೇಸ್ ಕೋರ್ಸ್ ರಸ್ತೆ ಮೂಲಕ ಮುಂದಕ್ಕೆ ಸಾಗಲು ವ್ಯವಸ್ಥೆ ಕಲ್ಪಿಸಲಾಗಿದೆ.
ಟಿ.ಚೌಡಯ್ಯ ರಸ್ತೆಯಲ್ಲಿ ಹೈಗ್ರೌಂಡ್ಸ್ ಜಂಕ್ಷನ್‌ನಿಂದ ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕುಮಾರಕೃಪಾ ರಸ್ತೆಗೆ ಪ್ರವೇಶ ಪಡೆಯುವ ವಾಹನಗಳು ನೇರವಾಗಿ ಸಾಗಿ, ಆರ್‌ಪಿ ರಸ್ತೆ ಮೂಲಕ ಮುಂದಕ್ಕೆ ಸಾಗಲು ವ್ಯವಸ್ಥೆ ಕಲ್ಪಿಸಲಾಗಿದೆ.
ನೆಹರೂ ವೃತ್ತದಿಂದ ಉಕ್ಕಿನ ಸೇತುವೆ (ಸ್ಟೀಲ್ ಬ್ರಿಡ್ಜ್) ಕೆಳಭಾಗದಲ್ಲಿ ಶಿವಾನಂದ ವೃತ್ತದ ಮೂಲಕ ಟ್ರಿಲೈಟ್ ಜಂಕ್ಷನ್ ಮತ್ತು ರೇಸ್ ಕೋರ್ಸ್ ಕಡೆಗೆ ಸಾಗುವ ವಾಹನಗಳು ನೆಹರೂ ವೃತ್ತದಿಂದ ಉಕ್ಕಿನ ಮೇಲ್ಸೇತುವೆಯಲ್ಲಿ ಸಾಗಿ ಟ್ರಿಲೈಟ್ ಜಂಕ್ಷನ್ ಹಾಗೂ ರೇಸ್ ಕೋರ್ಸ್ ರಸ್ತೆ ಕಡೆಗೆ ತೆರಳಬಹುದಾಗಿದೆ.
ಮೌರ್ಯ ವೃತ್ತ ಮತ್ತು ಆನಂದರಾವ್ ವೃತ್ತದ ಕಡೆಯಿಂದ ಬರುವ ವಾಹನ ಸಂಚಾರವನ್ನು ಶಿವಾನಂದ ಜಂಕ್ಷನ್ ಮೂಲಕ ಕೆ.ಕೆ.ರಸ್ತೆ ಪ್ರವೇಶ ನಿರ್ಬಂಧಿಸಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಟ್ರಿಲೈಟ್ ಜಂಕ್ಷನ್ –ಬಸವೇಶ್ವರ ವೃತ್ತ – ಹಳೇ ಹೈಗ್ರೌಂಡ್ಸ್ ಜಂಕ್ಷನ್ – ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಮುಂದಕ್ಕೆ ಸಾಗಬಹುದಾಗಿದೆ.
ಟಿ.ಚೌಡಯ್ಯ ರಸ್ತೆಯಿಂದ ಬಂದು ವಿಂಡ್ಸರ್ ಮ್ಯಾನರ್ ವೃತ್ತದ ಮೂಲಕ ಕೆ.ಕೆ.ರಸ್ತೆ ಪ್ರವೇಶಿಸುವ ವಾಹನಗಳನ್ನು ವಿಂಡ್ಸರ್ ಮ್ಯಾನರ್ ಬಳಿ ನಿರ್ಬಂಧಿಸಲಾಗಿದೆ. ವಾಹನಗಳು ಟಿ.ಚೌಡಯ್ಯ ರಸ್ತೆ ಹಳೇ ಹೈಗ್ರೌಂಡ್ಸ್ ಜಂಕ್ಷನ್ - ಎಲ್ಆರ್‌ಡಿಇ– ಬಸವೇಶ್ವರ ವೃತ್ತ– ರೇಸ್ ಕೋರ್ಸ್ ರಸ್ತೆ ಮೂಲಕ ಮುಂದಕ್ಕೆ ಸಾಗಬಹುದಾಗಿದೆ.
ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿ ನಾಲ್ಕು ಚಕ್ರಗಳ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಕ್ರೆಸೆಂಟ್ ರಸ್ತೆಯಲ್ಲಿ, ಗುರುರಾಜ ಕಲ್ಯಾಣ ಮಂಟಪದಿಂದ ಹೋಟೆಲ್ ಜನಾರ್ದನದವರೆಗೆ ರಸ್ತೆಯ ಪಶ್ಚಿಮಕ್ಕೆ ನಾಲ್ಕು ಚಕ್ರದ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ರೇಸ್‌ಕೋರ್ಸ್ ರಸ್ತೆ, ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ವರೆಗೆ, ರಸ್ತೆಯ ಪೂರ್ವ ಭಾಗಕ್ಕೆ ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ವ್ಯವಸ್ಥೆ
ವಾಹನಗಳ ನಿಲುಗಡೆಗೆ ಕೆ.ಕೆ.ರಸ್ತೆಯ ಸುತ್ತಮುತ್ತ ಸ್ಥಳಾವಕಾಶ ಕೊರತೆ ಇರುವುದರಿಂದ ಕಾರ್ಯಕ್ರಮಕ್ಕೆ ಬರುವವರು ಬಿಎಂಟಿಸಿ ಬಸ್ ಮೆಟ್ರೊ ಒಲಾ ಊಬರ್ ಸೇರಿದಂತೆ ಇತರೆ ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಬಳಸುವಂತೆ ಸಂಚಾರ ಪೊಲೀಸರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.