ADVERTISEMENT

ಚುಕುಬುಕು ಬೇಕು, ಸಂಪುಟದ ಒಪ್ಪಿಗೆ ಕೊಡಿ: ಉಪನಗರ ರೈಲಿಗಾಗಿ ಟ್ವೀಟ್ ಅಭಿಯಾನ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 14:21 IST
Last Updated 2 ಜನವರಿ 2020, 14:21 IST
ರೈಲು ನಿಲ್ದಾಣವೊಂದರಲ್ಲಿ ಮಕ್ಕಳೊಂದಿಗೆ ಕುಳಿತ ಮಹಿಳೆ ‘ಚುಕುಬುಕು ಬೇಕು’ ಎಂದು ಕೂಗುತ್ತಿರುವ ಚಿತ್ರವನ್ನು ‘ಲೈವ್ ಇವಿಲ್’ ಟ್ವಿಟರ್ ಪೇಜ್‌ ಹಂಚಿಕೊಂಡಿದೆ
ರೈಲು ನಿಲ್ದಾಣವೊಂದರಲ್ಲಿ ಮಕ್ಕಳೊಂದಿಗೆ ಕುಳಿತ ಮಹಿಳೆ ‘ಚುಕುಬುಕು ಬೇಕು’ ಎಂದು ಕೂಗುತ್ತಿರುವ ಚಿತ್ರವನ್ನು ‘ಲೈವ್ ಇವಿಲ್’ ಟ್ವಿಟರ್ ಪೇಜ್‌ ಹಂಚಿಕೊಂಡಿದೆ   
""

ಬೆಂಗಳೂರು: ‘ಸೊನ್ನೆಯಿಂದ ಸೊನ್ನೆಗೆ ಬಂದಿದೆ ಉಪನಗರ ರೈಲು ಯೋಜನೆ’, ‘ಹಗ್ಗ ಹರಿಯಲಿಲ್ಲ ಕೋಲು ಮುರಿಯಲಿಲ್ಲ, ಬೆಂಗಳೂರು ನಗರಕ್ಕೆ ಸಬ್‌ ಅರ್ಬನ್ ರೈಲು ಬರಲಿಲ್ಲ...’

ನಗರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆಯಲು ಬೆಂಗಳೂರಿನ ಜನರು ಗುರುವಾರ ಮಾಡಿರುವ ಸರಣಿ ಟ್ವೀಟ್‌ಗಳ ತುಣುಕುಗಳಿವು.

ಉಪನಗರ ರೈಲು ಯೋಜನೆಗೆ ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ನೀಡುವಂತೆ ಒತ್ತಾಯಿಸಿ ‘ಚುಕುಬುಕು ಕ್ಯಾಬಿನೆಟ್ ಕ್ಲಿಯರೆನ್ಸ್ ಬೇಕು’ ಎಂಬ ಹ್ಯಾಷ್ ಟ್ಯಾಗ್ ಅಡಿಯಲ್ಲಿಗುರುವಾರ ಮಧ್ಯಾಹ್ನ 2ರಿಂದ ಸಂಜೆ 4 ಗಂಟೆಯವರೆಗೆ ಟ್ವಿಟ್ಟಿಗರು ಟ್ವೀಟ್‌ಗಳ ಸುರಿಮಳೆಗೈದಿದ್ದಾರೆ.‌

ADVERTISEMENT

‘ಬೆಂಗಳೂರು ಉಪನಗರ ರೈಲು ಯೋಜನೆ ಕೇಂದ್ರ ಸರ್ಕಾರಕ್ಕೆ ಏಕೆ ಆದ್ಯತೆಯ ವಿಷಯವಾಗಿಲ್ಲ. ಕೇಂದ್ರದ ನಿರ್ಲಕ್ಷ್ಯದಿಂದಾಗಿ ಈ ಯೋಜನೆ ಸೊನ್ನೆಯಿಂದ ಸೊನ್ನೆಗೆ ಬಂದಿದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ದೇವರು ವರ ಕೊಟ್ಟರೂ ಕ್ಯಾಬಿನೆಟ್ ವರ ಕೊಡಲಿಲ್ಲ’, ‘ಚುಕುಬುಕು ಬೇಕು ಕೂ....ಕೂ......! ಪ್ರಧಾನಮಂತ್ರಿಯವರೇ ಈ ಕೂಗು ನಿಮಗೆ ಕೇಳಿಸುತ್ತಿದೆಯೇ, ಹಾಗಿದ್ದರೆ ಕೂಡಲೇ ಸಂಪುಟದ ಅನುಮೋದನೆ ಕೊಡಿಸಿ’ ಎಂಬಿತ್ಯಾದಿ ಟ್ವೀಟ್‌ಗಳು ಹರಿದಾಡಿವೆ.

‘30ಕ್ಕೂ ಹೆಚ್ಚು ವರ್ಷಗಳಿಂದ ಉಪನಗರ ರೈಲು ಯೋಜನೆಯನ್ನು ಬೆಂಗಳೂರಿಗರು ಕೇಳುತ್ತಿದ್ದೇವೆ. ರೈಲು ಸಂಚಾರ ಆರಂಭವಾದರೆ ನಗರದ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅದು ಗೊತ್ತಿದ್ದರೂ ಎಲ್ಲಾ ಸರ್ಕಾರಗಳು ಈ ಯೋಜನೆ ಅನುಷ್ಠಾನದಲ್ಲಿ ವಿಫಲವಾಗಿವೆ’ ಎಂದು ‘ವೈಟ್‌ಫೀಲ್ಡ್‌ ರೈಸಿಂಗ್’ ಸಂಘಟನೆ ಅಸಮಾಧಾನ ವ್ಯಕ್ತಪಡಿಸಿದೆ.

‘ನಮಗೆ ಐಷಾರಾಮಿ ಬೇಕಿಲ್ಲ, ಅರಾಮದಾಯಕ ಪ್ರಯಾಣ ಬೇಕು’ ಎಂದು ನಮ್ರತಾ ಎಂಬುವರು ಕೋರಿದ್ದಾರೆ.

‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಎಲ್ಲಾ ಕಡೆಯೂ ಬಿಜೆಪಿಯೇ ಆಡಳಿತದಲ್ಲಿದೆ. ಆದರೆ, ನಗರದ ಜನರಿಗೆ ಉಪನಗರ ರೈಲು ಯೋಜನೆಯ ಭಾಗ್ಯ ದೊರಕುತ್ತಿಲ್ಲ. ‘ವೈ ದಿಸ್ ಕೊಲವೆರಿ’ ಎಂದು ಯೋಗೀಶ್ ಪ್ರಭುಸ್ವಾಮಿ ಎಂಬುವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.