ADVERTISEMENT

ವಿದೇಶಿಯನ ಮದುವೆಯಾಗುವ ಆಸೆಗೆ ಬಿದ್ದಿದ್ದ ಮಹಿಳೆ: ₹ 71.57 ಲಕ್ಷ ಕಿತ್ತ ವರ

ಸಂತೋಷ ಜಿಗಳಿಕೊಪ್ಪ
Published 21 ಫೆಬ್ರುವರಿ 2020, 22:49 IST
Last Updated 21 ಫೆಬ್ರುವರಿ 2020, 22:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಪರಿಚಯಿಸಿಕೊಂಡು ಉಡುಗೊರೆ ಆಮಿಷವೊಡ್ಡಿ ಲಕ್ಷಾಂತರ ರೂಪಾಯಿ ದೋಚುವ ಸೈಬರ್ ವಂಚಕರ ಕೃತ್ಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಂಥ ಜಾಲಕ್ಕೆ ಸಿಲುಕಿ ನಗರದ ಮಹಿಳೆಯೊಬ್ಬರು ₹ 71.57 ಲಕ್ಷ ಕಳೆದುಕೊಂಡಿದ್ದಾರೆ.

‘ವಾಟ್ಸ್‌ಆ್ಯಪ್‌’ ಮೂಲಕ ಪರಿಚಯವಾಗಿದ್ದ ಆ್ಯಂಡ್ರಿ ವೋಚೆನ್ ಎಂಬಾತಮಹಿಳೆಗೆ ಮದುವೆ ಆಮಿಷವೊಡ್ಡಿ ಉಡುಗೊರೆ ನೆಪದಲ್ಲಿ ಹಣವನ್ನು ಖಾತೆಗೆ ಹಾಕಿಸಿಕೊಂಡು ನಾಪತ್ತೆಯಾಗಿದ್ದಾನೆ. ಆತನನ್ನು ಪತ್ತೆ ಮಾಡುವಂತೆ ಮಹಿಳೆ ಸಿಐಡಿಯ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದಾರೆ.

‘ಖಾಸಗಿ ಕಂಪನಿ ಉದ್ಯೋಗಿ ಆಗಿರುವ 42 ವರ್ಷದ ಮಹಿಳೆ, ವಿದೇಶಿ ಪ್ರಜೆಯನ್ನು ಮದುವೆಯಾಗುವ ಆಸೆ ಹೊಂದಿ ವರನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಮಹಿಳೆಯ ತಂಗಿ ‘ಇನ್‌ಸ್ಟಾಗ್ರಾಂ’ ಮೊಬೈಲ್ ಆ್ಯಪ್‌ನಲ್ಲಿ ಖಾತೆ ಹೊಂದಿದ್ದಾಳೆ. ಅದರ ಮೂಲಕವೇ ಆಕೆಗೆ ಆರೋಪಿಆ್ಯಂಡ್ರಿ ವೋಚೆನ್ ಪರಿಚಯವಾಗಿತ್ತು. ಮೊಬೈಲ್ ನಂಬರ್ ಸಹ ವಿನಿಮಯ ಮಾಡಿಕೊಂಡಿದ್ದರು. ಮಾತು
ಕತೆ ವೇಳೆಯೇ ಆರೋಪಿ ಭಾರತೀಯ ಮಹಿಳೆಯನ್ನು ಮದುವೆಯಾಗುವ ಆಸೆ ವ್ಯಕ್ತಪಡಿಸಿದ್ದ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ADVERTISEMENT

‘ಆರೋಪಿಯ ಮೊಬೈಲ್‌ ನಂಬರ್‌ ಅನ್ನು ತಂಗಿಯೇ ಮಹಿಳೆಗೆ ನೀಡಿದ್ದರು. ಆತನನ್ನು ಸಂಪರ್ಕಿಸುವಂತೆಯೂ ತಿಳಿಸಿದ್ದರು. ಅದರಂತೆ ಮಹಿಳೆ ವಾಟ್ಸ್‌ಆ್ಯಪ್ ಮೂಲಕ ಆರೋಪಿಗೆ ಸಂದೇಶ ಕಳುಹಿಸಿದ್ದಳು. ಅದಕ್ಕೆ ಆರೋಪಿ ಉತ್ತರಿಸಿದ್ದ. ನಂತರ, ಅವರಿಬ್ಬರು ಹಲವು ದಿನ ಮಾತನಾಡಿದ್ದರು. ಮದುವೆಯಾಗುವುದಾಗಿ ಆರೋಪಿ ಹೇಳಿದ್ದ’ ಎಂದು ಮೂಲಗಳು ಹೇಳಿವೆ.

‘ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆದಿದೆ. ಆದರೂ ಇಂಥ ಪ್ರಕರಣದಲ್ಲಿ ಆರೋಪಿ ಪತ್ತೆ ಕಷ್ಟ’ ಎಂದು ಸಿಐಡಿ ಅಧಿಕಾರಿ ತಿಳಿಸಿದರು.

ಕಸ್ಟಮ್ಸ್ ಅಧಿಕಾರಿ ಸೋಗಿನಲ್ಲಿ ಕರೆ: ‘ಮಹಿಳೆಗೆ ಆಗಾಗ ಕರೆ ಮಾಡುತ್ತಿದ್ದ ಆರೋಪಿ, ‘ನೀನು ಎಂದರೆ ನನಗೆ ತುಂಬಾ ಇಷ್ಟ. ನಿನಗೆ ಸದ್ಯದಲ್ಲೇ ಬೆಲೆ ಬಾಳುವ ಉಡುಗೊರೆ ಕಳುಹಿಸುತ್ತೇನೆ’ ಎಂದು ಹೇಳಿ ವಿಳಾಸ ಪಡೆದಿದ್ದ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಕೆಲ ದಿನ ಬಿಟ್ಟು ಕಸ್ಟಮ್ಸ್ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಸ್ನೇಹಿತ ಆ್ಯಂಡ್ರಿ ವಿದೇಶದಿಂದ ಉಡುಗೊರೆ ಕಳುಹಿಸಿದ್ದಾರೆ. ಅದು ವಿಮಾನ ನಿಲ್ದಾಣದಲ್ಲಿ ಇದೆ. ಕೆಲ ಶುಲ್ಕಗಳನ್ನು ಪಾವತಿ ಮಾಡಿದರೆ ನಿಮ್ಮ ವಿಳಾಸಕ್ಕೆ ಕಳುಹಿಸುತ್ತೇವೆ’ ಎಂದಿದ್ದ. ಅದನ್ನು ನಂಬಿದ್ದ ಮಹಿಳೆ, ಆರೋಪಿ ಸೂಚಿಸಿದ್ದ ಖಾತೆಗೆ ಹಣ ಹಾಕಿದ್ದರು. ಇದೇ ರೀತಿಯಲ್ಲೇ ಹಲವು ಬಾರಿ ಆರೋಪಿ ಕರೆ ಮಾಡಿದ್ದ. ಅವಾಗಲೂ ಮಹಿಳೆ ಹಣ ಜಮೆ ಮಾಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ನಕಲಿ ಖಾತೆ, ಮೊಬೈಲ್ ಸ್ವಿಚ್ಡ್‌ ಆಫ್‌‘
‘ಆರೋಪಿ ಆ್ಯಂಡ್ರಿ, ಇನ್‌ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆದು ವಂಚಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಜೊತೆಗೆ, ಆತನ ಮೊಬೈಲ್ ನಂಬರ್ ಸಹ ಸ್ವಿಚ್ಡ್‌ ಆಫ್ ಆಗಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ. ‘ಉಡುಗೊರೆ ನೆಪದಲ್ಲಿ ವಂಚಿಸುತ್ತಿರುವವರು ಹೆಚ್ಚಾಗುತ್ತಿದ್ದಾರೆ. ಮಹಿಳೆಯರು ಜಾಗೃತರಾಗಿರಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.