ADVERTISEMENT

‘ಸಮಸ್ಯೆ ಇತ್ಯರ್ಥಕ್ಕೆ ವಾರ್ಡ್‌ ಕಮಿಟಿ ಸಭೆಗೆ ಬನ್ನಿ’

‘ಜನಾಡಳಿತ’ ಕುರಿತು ಸರ್ಕಾರ, ಸರ್ಕಾರೇತರ ಸಂಸ್ಥೆಗಳ ಜೊತೆ ನಾಗರಿಕರ ಚರ್ಚೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 20:00 IST
Last Updated 4 ಆಗಸ್ಟ್ 2019, 20:00 IST
ಕಾರ್ಯಕ್ರಮವನ್ನು ಮೇಯರ್‌ ಗಂಗಾಂಬಿಕೆ ಉದ್ಘಾಟಿಸಿದರು. ಎನ್‌.ಮಂಜುಳಾ, ಎನ್. ಮಂಜುನಾಥ ಪ್ರಸಾದ್‌, ಅ.ನ. ಯಲ್ಲಪ್ಪ ರೆಡ್ಡಿ, ಆರ್.ಎಚ್. ಸಾವ್ಕಾರ್‌, ತಿಪ್ಪೇಸ್ವಾಮಿ ಇದ್ದಾರೆ
ಕಾರ್ಯಕ್ರಮವನ್ನು ಮೇಯರ್‌ ಗಂಗಾಂಬಿಕೆ ಉದ್ಘಾಟಿಸಿದರು. ಎನ್‌.ಮಂಜುಳಾ, ಎನ್. ಮಂಜುನಾಥ ಪ್ರಸಾದ್‌, ಅ.ನ. ಯಲ್ಲಪ್ಪ ರೆಡ್ಡಿ, ಆರ್.ಎಚ್. ಸಾವ್ಕಾರ್‌, ತಿಪ್ಪೇಸ್ವಾಮಿ ಇದ್ದಾರೆ   

ಬೆಂಗಳೂರು: ‘ನಗರವನ್ನು ಸುಂದರಗೊಳಿಸುವುದಕ್ಕೆ ಎಲ್ಲರ ಸಹಕಾರ ಅಗತ್ಯ. ಸ್ಥಳೀಯ ಸಮಸ್ಯೆ ನಿವಾರಣೆಗೆ 198 ವಾರ್ಡ್‌ಗಳಲ್ಲಿಯೂ ವಾರ್ಡ್ ಕಮಿಟಿಗಳನ್ನು ರಚಿಸಲಾಗಿದೆ. ವಾರ್ಡ್‌ ಕಮಿಟಿ ಸಭೆಗಳಿಗೆ ಬಂದು ಸಮಸ್ಯೆಗಳ ಬಗ್ಗೆ ಚರ್ಚಿಸಿ ಬಗೆಹರಿಸಿಕೊಳ್ಳಿ’ ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು.

ಕುಡಿಯುವ ನೀರು, ಕಸ, ಮೂಲಸೌಕರ್ಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಳಮಟ್ಟದಲ್ಲಿಯೇ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಮತ್ತು ಸಾರ್ವಜನಿಕರ ಸಹಭಾಗಿತ್ವ ಒದಗಿಸುವ ಉದ್ದೇಶದಿಂದ ವಂದೇ ಭಾರತಂ ಸಂಸ್ಥೆ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಜನಾಡಳಿತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಮ್ಮ ವಾರ್ಡ್‌ನಲ್ಲಿ ಸಮಸ್ಯೆ ಕಂಡು ಬಂದರೆನಾಗರಿಕರು, ಜನಪ್ರತಿನಿಧಿಗಳಿಗೆ ಕರೆ ಮಾಡಿ‌ ಸಮಸ್ಯೆ ತಿಳಿಸಿದರೆ ಸಮಸ್ಯೆ ಬಗೆಹರಿಸಲಾಗುವುದು, ಇಲ್ಲವೇ ಸಂದೇಶದ ಮೂಲಕವಾದರೂ ಮಾಹಿತಿ ತಿಳಿಸಿ’ ಎಂದರು.

ADVERTISEMENT

ಆರು ತಿಂಗಳಲ್ಲಿ ಕಸ ಸಮಸ್ಯೆ ಇತ್ಯರ್ಥ: ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್‌, ‘ನಗರದ ಜನಸಂಖ್ಯೆ 1.30 ಕೋಟಿ ಆಗಿದೆ. ಪಾಲಿಕೆಗೆ ಪ್ರತಿ ವರ್ಷ ₹2 ಸಾವಿರ ಕೋಟಿ ತೆರಿಗೆ ಸಂಗ್ರಹವಾಗುತ್ತಿದೆ. ಆದರೆ, ಪಾಲಿಕೆ ಅಭಿವೃದ್ಧಿ ಕಾರ್ಯಗಳಿಗೆ ವರ್ಷಕ್ಕೆ ₹10 ಸಾವಿರ ಕೋಟಿ ವ್ಯಯಿಸುತ್ತಿದೆ’ ಎಂದರು.

‘ಪೌರಕಾರ್ಮಿಕರು ರಸ್ತೆಯನ್ನು ಸ್ವಚ್ಛಗೊಳಿಸಿದ ಬಳಿಕವೂ ನಾಗರಿಕರು ಕಸವನ್ನು ರಸ್ತೆಗಳಲ್ಲಿ ಬಿಸಾಡಿದರೆ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಾಗುವುದಿಲ್ಲ. ಎಲ್ಲರಲ್ಲೂ‌ ನಮ್ಮ ನಗರ, ನಮ್ಮ ಕಸ -ನಮ್ಮ ಜವಾಬ್ದಾರಿ ಎಂಬ ಅರಿವು ಮೂಡಿದಾಗ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ’ ಎಂದರು.

‘ನಾಗರಿಕರು ಕಸವನ್ನು ಸರಿಯಾಗಿ ವಿಂಗಡಿಸಿ ಕೊಟ್ಟರೆ, ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದರೆ ಕಸದ ಸಮಸ್ಯೆಯನ್ನು ಆರು ತಿಂಗಳಲ್ಲಿ ನಿವಾರಣೆ ಮಾಡಬಹುದು’ ಎಂದರು.

ಕುಡಿಯುವ ನೀರಿನ ಸಂರಕ್ಷಣೆ, ಸಮಸ್ಯೆ ಮತ್ತು ಸವಾಲುಗಳು ಮತ್ತು ಪರ್ಯಾಯ ಮಾರ್ಗಗಳ ಕುರಿತುಪರಿಸರ ತಜ್ಞ ಡಾ.ಅ.ನ. ಯಲ್ಲಪ್ಪ ರೆಡ್ಡಿ, ಎಟಿಆರ್‌ಇಇ ನಿರ್ದೇಶಕ ಡಾ. ಶರತ್‌ಚಂದ್ರ ಲೇಲೆ, ಐಐಎಸ್‌ಸಿ ವಿಜ್ಞಾನಿ ಡಾ. ಮೋಹನ್‌ಕುಮಾರ್‌, ಜಲಮಂಡಳಿಯ ನಿವೃತ್ತ ಮುಖ್ಯ ಎಂಜಿನಿಯರ್‌ ಡಾ. ತಿಪ್ಪೇಸ್ವಾಮಿ, ಭಾರತೀಯ ಭೂವಿಜ್ಞಾನ ಸೊಸೈಟಿ ಕಾರ್ಯದರ್ಶಿ ಆರ್.ಎಚ್. ಸಾವ್ಕಾರ್‌ ಮಾತನಾಡಿದರು.

ಕಸ ನಿರ್ವಹಣೆ, ಪರಿಸರ ಸಂರಕ್ಷಣೆ ಕುರಿತು ತಜ್ಞರು ಮಾಹಿತಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.