ADVERTISEMENT

ಸಿಮೆಂಟ್‌ ಕಾರ್ಖಾನೆಗೆ ನಗರದ ಕಸ: ಬಿಎಸ್‌ಡಬ್ಲ್ಯುಎಂಎಲ್‌ ನಿರ್ಧಾರ

ಆಂಧ್ರಪ್ರದೇಶದ ಕಡಪದಲ್ಲಿರುವ ಕಾರ್ಖಾನೆಗೆ ಪ್ರತಿನಿತ್ಯ 300ರಿಂದ 350 ಟನ್‌ ಕಳಪೆ ಪ್ಯಾಸ್ಟಿಕ್‌ ರವಾನೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 19:33 IST
Last Updated 11 ಡಿಸೆಂಬರ್ 2025, 19:33 IST
<div class="paragraphs"><p>ಕಸ </p></div>

ಕಸ

   

ಬೆಂಗಳೂರು: ಆಂಧ್ರಪ್ರದೇಶದ ಕಡಪದಲ್ಲಿರುವ ಸಿಮೆಂಟ್‌ ಕಾರ್ಖಾನೆಗೆ ನಗರದಿಂದ ಪ್ರತಿನಿತ್ಯ 300ರಿಂದ 350 ಟನ್‌ ‘ಲೋ ವ್ಯಾಲ್ಯೂ ಪ್ಲಾಸ್ಟಿಕ್‌’ (ಎಲ್‌ವಿಪಿ) ಅನ್ನು ಸರಬರಾಜು ಮಾಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್‌ಡಬ್ಲ್ಯುಎಂಎಲ್‌) ನಿರ್ಧರಿಸಿದೆ.

ಕಡಪದಲ್ಲಿರುವ ದಾಲ್ಮಿಯಾ ಸಿಮೆಂಟ್ಸ್‌ ಲಿಮಿಟೆಡ್‌ ಸಿಮೆಂಟ್‌ ಕಾರ್ಖಾನೆಯ ಘಟಕದ ಕಾರ್ಯನಿರ್ವಹಣೆಗೆ ಕಡಿಮೆ ಮೌಲ್ಯದ ಪ್ಲಾಸ್ಟಿಕ್‌ ಸರಬರಾಜು ಮಾಡಲು ಕೋರಿದೆ. ಡಿ.15ರಿಂದ ಪ್ರತಿನಿತ್ಯವೂ ಪ್ಲಾಸ್ಟಿಕ್‌ ತ್ಯಾಜ್ಯ ಒದಗಿಸಬೇಕಾಗಿದೆ. ಇನ್ನೂ ಹಲವು ಸಿಮೆಂಟ್‌ ಕಾರ್ಖಾನೆಗಳೂ ಆಸಕ್ತಿ ತೋರಿವೆ. ಹೀಗಾಗಿ, ನಗರದಲ್ಲಿ ತ್ಯಾಜ್ಯ ವಿಂಗಡಣೆಯ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವಿದೆ. ಈ ತ್ಯಾಜ್ಯವನ್ನು ಅವರು ಇಂಧನವಾಗಿ ಕಾರ್ಖಾನೆಯಲ್ಲಿ ಬಳಸಲಿದ್ದಾರೆ ಎಂದು ಬಿಎಸ್‌ಡಬ್ಲ್ಯುಎಂಎಲ್‌ನ ಸಿಇಒ ಕರೀಗೌಡ ತಿಳಿಸಿದರು.

ADVERTISEMENT

ಬಿಡದಿಯಲ್ಲಿರುವ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆ ಘಟಕಕ್ಕೆ ಆರಂಭದಲ್ಲಿ 18 ಟನ್‌ ಅನ್ನು ನಾಲ್ಕು ಕಾಂಪ್ಯಾಕ್ಟರ್‌ಗಳಲ್ಲಿ ಕಳುಹಿಸಲಾಗುತ್ತಿತ್ತು. ಈಗ 60–70 ಕಾಂಪ್ಯಾಕ್ಟರ್‌ಗಳಲ್ಲಿ 300ರಿಂದ 350 ಟನ್‌ ಎಲ್‌ವಿಪಿ ಅನ್ನು ನಿತ್ಯ ವಿಲೇವಾರಿ ಮಾಡಲಾಗುತ್ತಿದೆ. ಅಕ್ಟೋಬರ್‌ನಲ್ಲಿ 11.99 ಲಕ್ಷ ಟನ್‌, ನವೆಂಬರ್‌ನಲ್ಲಿ 67.26 ಲಕ್ಷ ಟನ್‌ ವಿಲೇವಾರಿ ಮಾಡಲಾಗಿದೆ. ಇದರಿಂದ ಭೂಭರ್ತಿ ಪ್ರದೇಶಕ್ಕೆ ಕಳುಹಿಸಲಾಗುತ್ತಿದ್ದ 302 ಕಾಂಪ್ಯಾಕ್ಟರ್‌ಗಳ ತ್ಯಾಜ್ಯ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.

‘ನಾಗರಿಕರು ವೈಜ್ಞಾನಿಕವಾಗಿ ತ್ಯಾಜ್ಯ ವಿಂಗಡಣೆ ಮಾಡಿ ವಿಲೇವಾರಿ ಮಾಡಿದಲ್ಲಿ, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸುಂದರ ಮತ್ತು ಸ್ವಚ್ಛವಾಗಿ ಕಾಪಾಡಿಕೊಂಡು ಪ್ರಕೃತಿಯ ಮೇಲೆ ಉಂಟಾಗುತ್ತಿರುವ ಹಾನಿಯನ್ನು ತಪ್ಪಿಸಬಹುದಾಗಿದೆ. ಅನಧಿಕೃತ ಪ್ರದೇಶಗಳಲ್ಲಿ ತ್ಯಾಜ್ಯವನ್ನು ಸುರಿಯದೆ, ಹಸಿ, ಒಣ ತ್ಯಾಜ್ಯವನ್ನು ವಿಂಗಡಿಸಿ ಕಸದ ವಾಹನಗಳಿಗೆ ನೀಡಬೇಕು’ ಎಂದ ಮನವಿ ಮಾಡಿದರು.

ಟನ್‌ಗೆ ₹1 ಸಾವಿರ ಲಾಭ: ಕರೀಗೌಡ

‘ಸಿಮೆಂಟ್ ಕಾರ್ಖಾನೆಗೆ ಎಲ್‌ವಿಪಿ ನೀಡುವುದರಿಂದ ಅವರು ನಮಗೆ ‘ಎಕ್ಸ್‌ಟೆನ್‌ಡೆಡ್‌ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ’ (ಇಪಿಆರ್‌) ಅನ್ನು ಬಿಎಸ್‌ಡಬ್ಲ್ಯುಎಂಎಲ್‌ಗೆ ನೀಡಲಿದ್ದಾರೆ. ಇದನ್ನು ತಂಪುಪಾನೀಯ ಸೇರಿದಂತೆ ಪ್ಲಾಸ್ಟಿಕ್‌ ಬಳಸುವ ಕಂಪನಿಗಳಿಗೆ ನಾವು ಮಾರಾಟ ಮಾಡಬಹುದು. ಪ್ರತಿ ಟನ್‌ಗೆ ₹1 ಸಾವಿರ ಲಾಭ ಬರುವ ನಿರೀಕ್ಷೆ ಇದೆ’ ಎಂದು ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ ಹೇಳಿದರು. ‘ಪ್ಲಾಸ್ಟಿಕ್‌ ಬಳಸುವ ಕಂಪನಿಗಳಿಗೆ ಅವುಗಳನ್ನು ಸಂಸ್ಕರಿಸುವ ಜವಾಬ್ದಾರಿಯೂ ಇರುತ್ತದೆ. ಅದನ್ನು ಅವರು ನೇರವಾಗಿ ಮಾಡದಿದ್ದರೂ ಇಪಿಆರ್‌ ಪಡೆದವರಿಂದ ಅದನ್ನು ಖರೀದಿಸಿ ಜವಾಬ್ದಾರಿ ನಿರ್ವಹಿಸಬಹುದು. ಕಟ್ಟಡಗಳ ಟಿಡಿಆರ್‌ನಂತೆ ನಾವು ಇಪಿಆರ್‌ ಅನ್ನು ಬಳಸಬಹುದು’ ಎಂದರು. ‘ಕಡಪಗೆ ನಾವು ತ್ಯಾಜ್ಯವನ್ನು ಸಾಗಿಸಲು ಪ್ರತಿ ಟನ್‌ಗೆ ₹1 ಸಾವಿರ ವೆಚ್ಚ ಮಾಡಬೇಕಾಗುತ್ತದೆ. ಬೃಹತ್‌ ಕಾಂಪ್ಯಾಕ್ಟರ್‌ಗಳನ್ನು ಬಳಸಲು ಟೆಂಡರ್‌ ಕರೆಯಲಾಗಿದೆ. ಲೋಡಿಂಗ್‌ ಮತ್ತು ಅನ್‌ಲೋಡಿಂಗ್‌ ಸಿಮೆಂಟ್‌ ಕಂಪನಿಯವರದ್ದೇ ಆಗಿದೆ. ನಮ್ಮ ನಗರದಿಂದ ಪ್ರತಿನಿತ್ಯ 300ರಿಂದ 350 ಟನ್‌ ತ್ಯಾಜ್ಯ ಹೊರಗೆ ಹೋಗಿ ಸಂಸ್ಕರಣೆಯಾಗುತ್ತದೆ’ ಎಂದು ಮಾಹಿತಿ ನೀಡಿದರು.

ಪ್ರತಿ ವಾರ್ಡ್‌ನಲ್ಲಿ ಒಣ ತ್ಯಾಜ್ಯ ಸಂಗ್ರಹ

ಕೇಂದ್ರ ಒಣ ತ್ಯಾಜ್ಯವನ್ನು ಆಯಾ ಪ್ರದೇಶಗಳಲ್ಲಿಯೇ ಸಂಗ್ರಹಿಸುವ ಕೇಂದ್ರಗಳನ್ನು ಪ್ರತಿ ವಾರ್ಡ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಖಾಸಗಿಯವರಿಂದ ಟೆಂಡರ್ ಆಹ್ವಾನಿಸಲಾಗಿದೆ. ತ್ಯಾಜ್ಯ ಆಯುವವರು/ ತ್ಯಾಜ್ಯ ಆಯುವವರ ಸಂಘಟನೆಗಳು/ ಸ್ವಸಹಾಯ ಗುಂಪು ಎನ್‌ಜಿಒ ಸಿಆ್ಯಂಡ್‌ಟಿ ಗುತ್ತಿಗೆದಾರರಿಂದ ಟೆಂಡರ್‌ ಆಹ್ವಾನಿಸಲಾಗಿದೆ. ಅವರು ಐದು ವರ್ಷದ ಅವಧಿಗೆ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ನಡೆಸಿ ನಿರ್ವಹಣೆ ಮಾಡಬೇಕು ಎಂದು ಬಿಎಸ್‌ಡಬ್ಲ್ಯುಎಂಎಲ್‌ ಸಿಇಒ ಕರೀಗೌಡ ತಿಳಿಸಿದರು. ‘ನಗರ ಪಾಲಿಕೆಗಳ ಜಾಗದಲ್ಲಿ ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಅವರು ಸ್ಥಾಪಿಸಿಕೊಳ್ಳಬಹುದು. ₹25 ಸಾವಿರದಿಂದ ₹1 ಲಕ್ಷದವರೆಗೆ ಬಾಡಿಗೆ ನಿಗದಿಪಡಿಸಲಾಗಿದೆ. ಈ ಕೇಂದ್ರಗಳಲ್ಲಿ ನಾಗರಿಕರು ಒಣ ತ್ಯಾಜ್ಯ ತಂದು ಕೊಟ್ಟರೆ ಅವರು ಖರೀದಿಸುತ್ತಾರೆ. ಇಲ್ಲಿ ವಿಂಗಡನೆ ಮಾಡಿ ಮರುಬಳಕೆ ಮಾಡುವುದನ್ನು ಕೇಂದ್ರದವರು ಮಾರಾಟ ಮಾಡಿಕೊಳ್ಳುತ್ತಾರೆ. ಉಳಿದ್ದನ್ನು ನಾವು ವಿದ್ಯುತ್‌ ಅಥವಾ ಸಿಮೆಂಟ್‌ ಕಾರ್ಖಾನೆ ಘಟಕಗಳಿಗೆ ತಲುಪಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.