ADVERTISEMENT

ಜ್ಞಾನಭಾರತಿ: ಪುನುಗು ಬೆಕ್ಕು ಸಂರಕ್ಷಣೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 19:03 IST
Last Updated 17 ಮೇ 2021, 19:03 IST
ಗಾಯಗೊಂಡಿದ್ದ ಪುನುಗು ಬೆಕ್ಕು
ಗಾಯಗೊಂಡಿದ್ದ ಪುನುಗು ಬೆಕ್ಕು   

ಬೆಂಗಳೂರು: ಜ್ಞಾನಭಾರತಿ ಪ್ರಾಂಗಣದ ಬಳಿ ರಸ್ತೆ ಪಕ್ಕದಲ್ಲಿ ಗಾಯಗೊಂಡು ಬಿದ್ದಿದ್ದ ಪುನುಗು ಬೆಕ್ಕನ್ನು ಬಿಬಿಎಂಪಿಯ ವನ್ಯಜೀವಿ ಸಂರಕ್ಷಕರು ರಕ್ಷಿಸಿ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಒಪ್ಪಿಸಿದ್ದಾರೆ.

‘ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದ ಪೊದೆಯಲ್ಲಿ ಪುನುಗು ಬೆಕ್ಕು ಬಿದ್ದುಕೊಂಡಿತ್ತು. ವಾಯುವಿಹಾರಕ್ಕೆ ತೆರಳಿದ್ದವರೊಬ್ಬರು ಅದನ್ನು ನೋಡಿದ್ದರು. ಅವರು ನಮಗೆ ಮಾಹಿತಿ ನೀಡಿದರು. ಮುಂಗುಸಿ ಗಾಯಗೊಂಡಿದೆ ಎಂದು ಅವರು ತಿಳಿಸಿದ್ದರು. ನಾನು ಸ್ಥಳಕ್ಕೆ ಹೋಗಿ ನೋಡಿದಾಗ ಅದು ಹೆಣ್ಣು ಪುನುಗು ಬೆಕ್ಕು (ಸಿವೆಟ್‌ ಕ್ಯಾಟ್‌) ಎಂಬುದು ತಿಳಿಯಿತು’ ಎಂದು ವನ್ಯಜೀವಿ ಸಂರಕ್ಷಕ ಪ್ರಸನ್ನ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುನುಗು ಬೆಕ್ಕು ನಿಶಾಚರಿ ಪ್ರಾಣಿ. ಹಾಗಾಗಿ ಕಾಣಸಿಗುವುದು ಬಲು ಅಪರೂಪ. ಇವು ಪೊದೆ ಹಾಗೂ ಕಾಡು ಪ್ರದೇಶಗಳಲ್ಲಿ ವಾಸಿಸುತ್ತವೆ. ನಾವು ಸಂರಕ್ಷಿಸಿದ ಪುನುಗು ಬೆಕ್ಕಿನ ತಲೆ ಹಾಗೂ ಕಿವಿಯ ಭಾಗದಲ್ಲಿ ಗಾಯಗಳಿದ್ದವು. ಅದು ಗಾಬರಿಗೊಂಡಿತ್ತು. ತುಂಬಾ ಸಮಯದಿಂದ ಅಲ್ಲೇ ಬಿದ್ದು ಹೊರಳಾಡಿದಂತಿತ್ತು. ಇನ್ನೊಂದು ಪುನುಗು ಬೆಕ್ಕಿನ ಜೊತೆ ಜಗಳವಾಡಿ ಗಾಯಗೊಂಡಿರುವ ಸಾಧ್ಯತೆ ಇದೆ ಅಥವಾ ನಾಯಿಗಳ ಬಾಯಿಗೆ ಸಿಕ್ಕಿ ತಪ್ಪಿಸಿಕೊಂಡಿರಲಿಕ್ಕೂ ಸಾಕು’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಪುನುಗು ಬೆಕ್ಕುಗಳು ಹೆಚ್ಚೂ ಕಡಿಮೆ 15 ವರ್ಷ ಬದುಕುತ್ತವೆ. ಸಂರಕ್ಷಿಸಿದ ಬೆಕ್ಕು ನಾಲ್ಕರಿಂದ ಐದು ವರ್ಷದ್ದಾಗಿರಬಹುದು’ ಎಂದರು.

‘ಬೆಂಗಳೂರಿನಂತಹ ಮಹಾನಗರದಲ್ಲಿ ಪುನುಗು ಬೆಕ್ಕು ನೋಡಲು ಸಿಗುವುದು ವಿಶೇಷವೇ ಸರಿ. ನಾನು ಒಂದೂವರೆ ವರ್ಷದ ಹಿಂದೆ ಕನಕಪುರ ರಸ್ತೆ ಸಮೀಪ ಒಂದು ಪುನುಗು ಬೆಕ್ಕನ್ನು ಕಾಪಾಡಿದ್ದೆ. ಎರಡೂವರೆ ವರ್ಷಗಳ ಹಿಂದೆ ಮಾಗಡಿ ರಸ್ತೆಯ ತಾವರೆಕೆರೆ ಸಮೀಪ ಒಂದು ಪುನುಗು ಬೆಕ್ಕನ್ನು ಸಂರಕ್ಷಿಸಿದ್ದೆ. ಅದು ಬಿಟ್ಟರೆ ಇವುಗಳನ್ನು ನೋಡಿದ್ದು ಕಡಿಮೆ. ಒಂದೂವರೆ ತಿಂಗಳ ಹಿಂದೆ ಜ್ಞಾನಭಾರತಿ ಪ್ರಾಂಗಣದ ಉರ್ದು ಕಾಲೇಜಿನ ಸಮೀಪ ಪುನುಗು ಬೆಕ್ಕು ಅಡ್ಡಾಡುತ್ತಿದ್ದ ಹಾಗೂಕಸದ ತೊಟ್ಟಿಗೆ ಬಿಸಾಡಿದ್ದ ಬಾಳೆಹಣ್ಣಿನ ಸಿಪ್ಪೆ ತಿನ್ನುತ್ತಿದ್ದ ದೃಶ್ಯ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿತ್ತು’ ಎಂದು ಅವರು ಮಾಹಿತಿ ನೀಡಿದರು.

‘ಈ ಬೆಕ್ಕು ಸ್ರವಿಸುವ ಪುನುಗು ತುಂಬಾ ಪರಿಮಳದಿಂದ ಕೂಡಿರುತ್ತದೆ. ಸುಗಂಧ ದ್ರವ್ಯ ತಯಾರಿಸಲು ಈ ಪುನುಗು ಬಳಕೆ ಆಗುತ್ತದೆ. ಇದಕ್ಕೆ ಭಾರಿ ಬೇಡಿಕೆ ಇದೆ. ಈ ಕಾರಣಕ್ಕಾಗಿ ಈ ಬೆಕ್ಕುಗಳ ಕಳ್ಳಸಾಗಣೆಯೂ ನಡೆಯುತ್ತದೆ. ಇವುಗಳ ಸಂತತಿ ಅಪಾಯಕ್ಕೆ ಸಿಲುಕಿದೆ. ಇಂತಹ ಅಪೂರ್ವ ವನ್ಯಪ್ರಾಣಿಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.