ADVERTISEMENT

ಸಿವಿಲ್ ಕಾನ್‌ಸ್ಟೆಬಲ್ ಲಿಖಿತ ಪರೀಕ್ಷೆಗೂ ನಕಲಿ ಅಭ್ಯರ್ಥಿ!

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 20:17 IST
Last Updated 23 ಮಾರ್ಚ್ 2021, 20:17 IST
ಬಸವರಾಜ್ ಹೊನಕುಪ್ಪಿ
ಬಸವರಾಜ್ ಹೊನಕುಪ್ಪಿ   

ಬೆಂಗಳೂರು: ಬೆಂಗಳೂರು ನಗರ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಗಾಗಿ ನಡೆದ ಲಿಖಿತ ಪರೀಕ್ಷೆಗೂ ನಕಲಿ ಅಭ್ಯರ್ಥಿ ಹಾಜರಾಗಿದ್ದ ಸಂಗತಿ ತನಿಖೆಯಿಂದ ಹೊರಬಿದ್ದಿದ್ದು, ಈ ಸಂಬಂಧ ಅಭ್ಯರ್ಥಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದ ಕೆಲ ಅಸಲಿ ಅಭ್ಯರ್ಥಿಗಳ ಪರವಾಗಿ, ನಕಲಿ ಅಭ್ಯರ್ಥಿಗಳು ಲಿಖಿತ ಹಾಗೂ ದೈಹಿಕ ಪರೀಕ್ಷೆಗೆ ಹಾಜರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ತನಿಖೆ ನಡೆಸಿದಾಗ ಲಿಖಿತ ಪರೀಕ್ಷೆಗೆ ನಕಲಿ ಅಭ್ಯರ್ಥಿ ಹಾಜರಾಗಿದ್ದು ಪತ್ತೆಯಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘2020ರ ಸೆಪ್ಟೆಂಬರ್ 20ರಂದು ನಡೆದಿದ್ದ ಪರೀಕ್ಷೆಗೆ ಅಸಲಿ ಅಭ್ಯರ್ಥಿ ಕಾಶಪ್ಪ ಎಮ್ಮಿನವರ್ ಪರವಾಗಿ ನಕಲಿ ಅಭ್ಯರ್ಥಿ ಕಾಶಿನಾಥ್ ತೆಲಸಂಗ್ ಎಂಬಾತ ಹಾಜರಾಗಿದ್ದ. ಯಾರಿಗೂ ಅನುಮಾನ ಬಾರದಂತೆ ಪರೀಕ್ಷೆಯನ್ನೂ ಬರೆದಿದ್ದ. ಅಸಲಿ ಅಭ್ಯರ್ಥಿ ಕಾಶಪ್ಪ, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ದೈಹಿಕ ಪರೀಕ್ಷೆಗೆ ಅರ್ಹತೆ ಪಡೆದುಕೊಂಡಿದ್ದ’ ಎಂದೂ ತಿಳಿಸಿದರು.

ADVERTISEMENT

‘ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲ್ಕಿಯ ಕಾಶಪ್ಪನನ್ನು ಬಂಧಿಸಲಾಗಿದ್ದು, ಆತನ ಪರ ಪರೀಕ್ಷೆ ಬರೆದಿದ್ದ ಬಾಗಲಕೋಟೆ ಜಿಲ್ಲೆಯ ಕಾಶಿ
ನಾಥ್ ತಲೆಮರೆಸಿಕೊಂಡಿದ್ದಾನೆ. ಇವರಿಬ್ಬರ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದೂ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ದೈಹಿಕ ಪರೀಕ್ಷೆಯಲ್ಲೂ ನಕಲಿ: ‘ಸಿವಿಲ್ ಕಾನ್‌ಸ್ಟೆಬಲ್ ದೈಹಿಕ ಪರೀಕ್ಷೆಗೆ ನಕಲಿ ಅಭ್ಯರ್ಥಿ ಕಳುಹಿಸಿದ್ದ ಅಸಲಿ ಅಭ್ಯರ್ಥಿ ಬಸವರಾಜ್ ಹೊನಕುಪ್ಪಿ ಎಂಬಾತನನ್ನು ಮಂಗಳವಾರ ಬಂಧಿಸಲಾಗಿದೆ. ಆತನ ಪರ ಪರೀಕ್ಷೆಗೆ ಹಾಜರಾಗಿದ್ದ ನಕಲಿ ಅಭ್ಯರ್ಥಿ ಸೌರಭ್ ತಲೆಮರೆಸಿಕೊಂಡಿದ್ದಾನೆ’ ಎಂದು ಅಧಿಕಾರಿ ಹೇಳಿದರು.

‘ಗೋಕಾಕ್ ತಾಲ್ಲೂಕಿನ ಬಸವರಾಜ್, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಸ್ನೇಹಿತನೇ ಆದ ಬೆಳಗಾವಿ ಜಿಲ್ಲೆಯ ಸ್ನೇಹಿತ ಸೌರಭ್‌ನನ್ನು ತನ್ನ ಪರವಾಗಿ ದೈಹಿಕ ಪರೀಕ್ಷೆಗೆ ಕಳುಹಿಸಿದ್ದ’ ಎಂದು ಅಧಿಕಾರಿ ತಿಳಿಸಿದರು.

ವಿಡಿಯೊ ಪರಿಶೀಲನೆಗೆ ಸಮಿತಿ ರಚನೆ

ಕೆಎಸ್‌ಆರ್‌ಪಿ ಕಾನ್‌ಸ್ಟೆಬಲ್ ನೇಮಕಾತಿ ಪ್ರಕ್ರಿಯೆಯಲ್ಲಿ ಹಾಜರಾಗಿದ್ದ ನಕಲಿ ಅಭ್ಯರ್ಥಿಗಳನ್ನು ಪೊಲೀಸರು ಇತ್ತೀಚೆಗಷ್ಟೇ ಬಂಧಿಸಿದ್ದಾರೆ. ಇದೀಗ, ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ನೇಮಕಾತಿಯಲ್ಲೂ ನಕಲಿ ಅಭ್ಯರ್ಥಿಗಳು ಕಂಡುಬಂದಿದ್ದಾರೆ.

ಪರೀಕ್ಷೆಗೆ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ಅಭ್ಯರ್ಥಿಗಳು ಹಾಜರಾಗಿರುವ ಮಾಹಿತಿ ಲಭ್ಯವಾಗಿರುವುದರಿಂದ, ನೇಮಕಾತಿ ಪ್ರಕ್ರಿಯೆಯ ವಿಡಿಯೊ ಪರಿಶೀಲನೆಗಾಗಿ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌. ಅನುಚೇತ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ಸದಸ್ಯರು, ಪರೀಕ್ಷೆಗಳ ವಿಡಿಯೊ ವೀಕ್ಷಿಸಿ ನಕಲಿ ಅಭ್ಯರ್ಥಿಗಳನ್ನು ಪತ್ತೆ ಮಾಡುತ್ತಿದ್ದಾರೆ.

‘ಹಣಕ್ಕಾಗಿ ಕೆಲಸ’

‘ಪದವಿ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಆರೋಪಿಗಳು, ಹಣಕ್ಕಾಗಿ ನಕಲಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ಹಾಜರಾಗಿದ್ದರು. ಈ ಬಗ್ಗೆ ಅವರೇ ಹೇಳಿಕೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.