ಜಿ.ಜಗದೀಶ
ಬೆಂಗಳೂರು: ಪೌರಕಾರ್ಮಿಕರು ಸಿಂಧುತ್ವ ಪ್ರಮಾಣಪತ್ರ ಪಡೆಯಲು ಜಾತಿ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ ತಿಳಿಸಿದರು.
ಬಿಬಿಎಂಪಿಗೆ ಆಯ್ಕೆಯಾಗಿರುವ ಪೌರಕಾರ್ಮಿಕರಿಗೆ ಜಾತಿ ಸಿಂಧುತ್ವ ಪ್ರಮಾಣಪತ್ರ ವಿತರಿಸಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರ ಹುದ್ದೆಗೆ ಆಯ್ಕೆಯಾಗುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಅಕ್ಷರದ ಅರಿವು ಹೊಂದಿರಬೇಕು, ಹಾಗೂ ಸರ್ಕಾರದ ನಿಯಮಾನುಸಾರ ಎಲ್ಲ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದರು.
ಅಭ್ಯರ್ಥಿಗಳು ಸಿಂಧುತ್ವ ಪ್ರಮಾಣಪತ್ರ ನೀಡುವಾಗ ಜಾತಿ ಪ್ರಮಾಣಪತ್ರವನ್ನು ದೃಢೀಕರಿಸುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಿಂಧುತ್ವ ಪ್ರಮಾಣಪತ್ರಕ್ಕಾಗಿ ಹೆಚ್ಚಿನ ಅರ್ಜಿಗಳು ಬಂದಿದ್ದು, ಅಭ್ಯರ್ಥಿಗಳ ಸ್ಥಳೀಯ ವಿಚಾರಣೆ ನಡೆಸಿ, ನಕಲಿ ಜಾತಿ ಪ್ರಮಾಣಪತ್ರಗಳನ್ನು ಸಲ್ಲಿಸಿದವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಬಿಬಿಎಂಪಿಯ ವಿಶೇಷ ಆಯುಕ್ತ ಅಖಿಲೇಶ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಲಕ್ಷ್ಮಣ್ ರೆಡ್ಡಿ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಉಪ ನಿರ್ದೇಶಕ ಜುಂಜಯ್ಯ, ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್ ಶ್ರೀನಿವಾಸ್ ಹಾಗೂ ಬೆಂಗಳೂರು ಉತ್ತರ ತಾಲ್ಲೂಕು ತಹಶೀಲ್ದಾರ್ ವಿಜಯ್ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.