ಬೆಂಗಳೂರು: ‘ಪೌರ ಕಾರ್ಮಿಕರಿಗೆ ಸಮರ್ಪಕವಾಗಿ ಸಮವಸ್ತ್ರ ಕೊಟ್ಟಿಲ್ಲ. ಇದು ಶೋಚನಿಯ ವಿಷಯ. ಪೌರ ಕಾರ್ಮಿಕರು ಸ್ವಚ್ಛತಾ ಸೇನಾನಿಗಳು. ಅವರ ಆರೋಗ್ಯದ ಕಡೆ ಗಮನಹರಿಸದೇ ನಗರದ ಸ್ವಚ್ಛತೆ ಮಾಡುತ್ತಿದ್ದಾರೆ’ ಎಂದು ಉಪ ಲೋಕಾಯುಕ್ತ, ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದರು.
ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ನವೀಕೃತಗೊಂಡಿರುವ ‘ಬಸವ ಸಭಾಂಗಣ’ ಉದ್ಘಾಟನೆ ಹಾಗೂ ‘ಶ್ರೀಗೌರಿ– ಗಣಪತಿ ಉತ್ಸವ’ ಆಚರಣೆ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದರು.
‘ಕಸ ವಿಲೇವಾರಿ ಸಮರ್ಪಕವಾಗಿ ಮಾಡಬೇಕು. ಬಿಬಿಎಂಪಿ ಅಧಿಕಾರಿಗಳು ಮನಸ್ಸು ಮಾಡಿದರೆ ‘ಗಾರ್ಡನ್ ಸಿಟಿ’ ನಿರ್ಮಾಣ ಮಾಡಬಹುದು. ಗುಂಡಿಯಲ್ಲಿ ಬಿದ್ದು ಹಲವರು ಮೃತಪಟ್ಟಿದ್ದಾರೆ. ತಲೆಗೆ ಹೆಲ್ಮೆಟ್ ಹಾಕದೇ ಇರುವುದೂ ಇದಕ್ಕೆ ಒಂದು ಕಾರಣ’ ಎಂದು ಹೇಳಿದರು.
‘ನಾವು ಸೇವಾಮನೋಭಾವದಿಂದ ಕೆಲಸ ಮಾಡಬೇಕು. ಸಮಾಜದಲ್ಲಿ ಉತ್ತಮ ಅಧಿಕಾರಿಗಳು, ನೌಕರರು ಇದ್ದಾರೆ. ನಿಷ್ಠಾವಂತರಾಗಿ ಬಾಳಿ, ಬಸವ ತತ್ವದಲ್ಲಿ ಎಲ್ಲರೂ ಸಾಗಿದಾಗ ಸಮಾಜದ ಅಭಿವೃದ್ದಿ ಸಾಧ್ಯ’ ಎಂದರು.
‘ಸಾರ್ವಜನಿಕರ ಸಹಕಾರವಿದ್ದಾಗ ಸಮಸ್ಯೆಗಳು ಪರಿಹಾರವಾಗುತ್ತದೆ. ಬಿಬಿಎಂಪಿಯ ಅಧಿಕಾರಿ, ನೌಕರರ ಜೊತೆಯಲ್ಲಿ ಸಾಮರಸ್ಯದಿಂದ ಜನರು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಆರ್. ದೇವದಾಸ್ ಸಲಹೆ ನೀಡಿದರು.
ಅಧಿಕಾರಿ ಮತ್ತು ನೌಕರರ ಸಂಘಟನೆ ಮತ್ತು ಸಮಸ್ಯೆಗಳ ಕುರಿತು ಚರ್ಚೆ ಮಾಡಲು ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.
ಬಿಬಿಎಂಪಿ ವಿಶೇಷ ಆಯುಕ್ತ ಡಾ.ಅವಿನಾಶ್ ಮೆನನ್, ಪೂರ್ವ ವಲಯ ಆಯುಕ್ತೆ ಸ್ನೇಹಲ್, ಉಪ ಆಯುಕ್ತ ಮಂಜುನಾಥ್ ಸ್ವಾಮಿ, ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
‘ಬಿಬಿಎಂಪಿಯಲ್ಲಿ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡುವ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಕೆಲವೊಂದು ಪ್ರಕ್ರಿಯೆಗಳಿಗೆ ಆಡಳಿತ ವಿಭಾಗದ ವಿಶೇಷ ಆಯುಕ್ತರು ವಿವರಣೆ ಕೇಳಿದ್ದರು. ಮಾಹಿತಿ ನೀಡಲಾಗಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು. ಪೌರ ಕಾರ್ಮಿಕರಿಗೆ ಸಮವಸ್ತ್ರ ಸೇರಿದಂತೆ ಸುರಕ್ಷಾ ಉಪಕರಣಗಳನ್ನು ನೀಡಲಾಗುತ್ತಿದೆ. ಸೇವೆ ಕಾಯಂ ಆಗದ ಪೌರ ಕಾರ್ಮಿಕರಿಗೆ ಸವಲತ್ತು ಒದಗಿಸಲು ಒಂದಷ್ಟು ಸಮಸ್ಯೆಯಾಗುತ್ತಿದ್ದು ಅದನ್ನು ಕೂಡಲೇ ಪರಿಹರಿಸಲಾಗುವುದು ಎಂದು ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.