ಬೆಂಗಳೂರು: ‘ಕರ್ನಾಟಕ ಚಿತ್ರಕಲಾ ಪರಿಷತ್ತು ಹಾಗೂ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ ಮೇ 28ರಿಂದ ಜೂನ್ 1ರವರೆಗೆ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಪ್ರಥಮ ಬಾರಿಗೆ ನಮ್ಮ ಆರ್ಟ್ ಬೆಂಗಳೂರು ರಾಷ್ಟ್ರೀಯ ಕಲಾ ಉತ್ಸವ ಆಯೋಜಿಸಲಾಗುತ್ತಿದೆ’ ಎಂದು ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಿಶ್ವ ಕಲಾ ಸಂಗಮ ಧ್ಯೇಯ ವಾಕ್ಯದ ಅಡಿಯಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ಇದರಲ್ಲಿ ದೇಶದ 100 ಆಹ್ವಾನಿತ ಉದಯೋನ್ಮುಖ ಹಾಗೂ ಹಿರಿಯ ವೃತ್ತಿನಿರತ ಕಲಾವಿದರು ತಮ್ಮ ಕಲಾಕೃತಿಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಿದ್ದಾರೆ. ಈ ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರು ₹25 ಸಾವಿರ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ಪರಿಷತ್ತಿನ ಆವರಣದಲ್ಲಿ ಮಳಿಗೆಗಳನ್ನು ನೀಡಲಾಗುತ್ತದೆ. ಇಲ್ಲಿ ಮಾರಾಟವಾಗುವ ಕಲಾಕೃತಿಗಳ ವಹಿವಾಟಿನ ಮೇಲೆ ಯಾವುದೇ ಕಮಿಷನ್ ಪಡೆಯುವುದಿಲ್ಲ’ ಎಂದು ಮಾಹಿತಿ ನೀಡಿದರು.
‘ಕರ್ನಾಟಕ ಚಿತ್ರಕಲಾ ಪರಿಷತ್ತಿನ ಒಂದು ಪ್ರದರ್ಶನ ಗ್ಯಾಲರಿಯಲ್ಲಿ ಪರಿಷತ್ತಿನ ಸಂಗ್ರಹದಲ್ಲಿರುವ ಹಾಗೂ ಕರ್ನಾಟಕದ ಹಿರಿಯ ಮತ್ತು ಹೆಸರಾಂತ ಕಲಾವಿದರು ರಚಿಸಿರುವ ಅಪರೂಪದ ಅಪೂರ್ವ ಕಲಾಕೃತಿಗಳ ಪ್ರದರ್ಶನವೂ ಇರಲಿದೆ. ಉತ್ಸವಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ. ಭಾರತ ಸೇವಾದಳದ ಆವರಣದಲ್ಲಿ ಹಾಗೂ ಕ್ರೆಸೆಂಟ್ ರಸ್ತೆಯ ಒಂದು ಬದಿಯಲ್ಲಿ ಕಲಾವಿದರು ಹಾಗೂ ಕಲಾಸಕ್ತರು ಶುಲ್ಕ ಪಾವತಿಸಿ, ವಾಹನಗಳನ್ನು ನಿಲುಗಡೆ ಮಾಡಬಹುದು. ಉತ್ಸವದಲ್ಲಿ ಆಹಾರ ಮಳಿಗೆಗಳ ವ್ಯವಸ್ಥೆಯೂ ಇರಲಿದೆ’ ಎಂದು ಹೇಳಿದರು.
‘ಮೇ 28ರಂದು ಸಂಜೆ 4.30ಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಅತಿಥಿಗಳಾಗಿ ಕರ್ನಾಟಕ ಚಿತ್ರಕಲಾ ಪರಿಷತ್ ಟ್ರಸ್ಟ್‌ನ ಅಧ್ಯಕ್ಷ ಎಸ್.ಎನ್. ಅಗರವಾಲ್ ಭಾಗವಹಿಸಲಿದ್ದಾರೆ. ಮೇ 29ರಿಂದ ಪ್ರತಿದಿನ ಬೆಳಿಗ್ಗೆ 10.30ರಿಂದ ಸಂಜೆ 7.30ರವರೆಗೆ ಪ್ರದರ್ಶನ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.