ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಸಂಚಾರಿ ಕಾವೇರಿ, ಸರಳ ಕಾವೇರಿ’ಯಂತಹ ಯೋಜನೆಗಳ ಮೂಲಕ ಬೆಂಗಳೂರು ನಾಗರಿಕರಿಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಸುತ್ತಿದ್ದು, ಈಗ ಪುಲಿಕೇಶಿನಗರದಲ್ಲಿ 2.50 ಲಕ್ಷ ಜನರಿಗೆ ಹೆಚ್ಚಿನ ನೀರು ಸರಬರಾಜು ಮಾಡಲು ಜಲಾಗಾರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ’ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದರು.
ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಗಾಯಪುರಂ ವಾರ್ಡ್ ಪಿಳ್ಳಣ್ಣ ಗಾರ್ಡನ್‌ನಲ್ಲಿ ಬೆಂಗಳೂರು ಜಲಮಂಡಳಿ ನಿರ್ಮಿಸಲಿರುವ ₹27.45 ಕೋಟಿ ಅಂದಾಜು ವೆಚ್ಚದ 4 ಎಂಎಲ್‌ಡಿ ಸಾಮರ್ಥ್ಯದ ಜಲಾಗಾರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಅವರು ಮಾತನಾಡಿದರು.
‘ಈ ಯೋಜನೆಯಿಂದ ಪುಲಿಕೇಶಿನಗರದ 30 ಸಾವಿರ ಮನೆಗಳವರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ’ ಎಂದರು.
‘ಈ ಕ್ಷೇತ್ರದಲ್ಲಿ ರಸ್ತೆಗೆ ₹130 ಕೋಟಿ, ಮೇಲ್ಸೇತುವೆಗೆ ₹42 ಕೋಟಿ ಹಾಗೂ ವಾರ್ಡ್‌ಗಳ ಅಭಿವೃದ್ಧಿಗೆ ₹320 ಕೋಟಿ ವ್ಯಯಿಸಲಾಗುವುದು. ₹650 ಕೋಟಿ ವೆಚ್ಚದಲ್ಲಿ ಹೊಸ ಪ್ಲೈಓವರ್ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಕ್ಷೇತ್ರದಲ್ಲಿ ಶಾಸಕರು ಜಾಗ ಹುಡುಕಿಕೊಟ್ಟರೆ ಅಥವಾ ಹಳೆಯ ಶಾಲೆಗಳ ಜಾಗವಿದ್ದರೆ, ಅಲ್ಲಿ ಸುಸಜ್ಜಿತ ಶಾಲೆ ನಿರ್ಮಿಸಲು ಬದ್ಧನಾಗಿದ್ದೇನೆ. ಅಲ್ಲದೆ, ಆಸ್ಪತ್ರೆ ನಿರ್ಮಾಣಕ್ಕೂ ಪಾಲಿಕೆ ವತಿಯಿಂದ ಜಾಗ ಹುಡುಕಲಾಗುತ್ತಿದೆ’ ಎಂದು ಭರವಸೆ ನೀಡಿದರು.
ಈಗಾಗಲೇ ಈ ಕ್ಷೇತ್ರಕ್ಕೆ ₹1,055 ಕೋಟಿ ಅನುದಾನಗಳ ಕಾಮಗಾರಿಗೆ ಮಂಜೂರಾತಿ ನೀಡಿದ್ದೇವೆ. ಇಡೀ ಬೆಂಗಳೂರಿನ ತ್ಯಾಜ್ಯ ನಿರ್ವಹಣೆಗೆ ಒಂದು ವ್ಯವಸ್ಥಿತ ‘ಸ್ವಚ್ಛ ಬೆಂಗಳೂರು’ ಸಹಾಯವಾಣಿ ಸಂಖ್ಯೆ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಪುಲಿಕೇಶಿನಗರದ ಶಾಸಕ ಎ.ಸಿ ಶ್ರೀನಿವಾಸ್ ಮಾತನಾಡಿ, ‘ನಾಲ್ಕು ದಶಲಕ್ಷ ಲೀಟರ್ ಸಾಮರ್ಥ್ಯದ ಜಲಾಗಾರದಲ್ಲಿ ಎರಡು ಅಂತಸ್ತುಗಳು ಇರಲಿವೆ. ಮೊದಲ ಅಂತಸ್ತು 2.48 ದಶಲಕ್ಷ ಲೀಟರ್ ಹಾಗೂ ಎರಡನೇ ಅಂತಸ್ತು 1.52 ದಶಲಕ್ಷ ಲೀಟರ್ ಸಾಮರ್ಥ್ಯ ಹೊಂದಿರಲಿವೆ’ ಎಂದು ವಿವರಿಸಿದರು.
ಜಲಮಂಡಳಿ ಅಧ್ಯಕ್ಷ ವಿ.ರಾಮ್‌ಪ್ರಸಾತ್ ಮನೋಹರ್ ಮಾತನಾಡಿ, ‘ಪುಲಕೇಶಿನಗರ ವಿಧಾನಸಭಾ ಕ್ಷೇತ್ರಕ್ಕೆ ನಿತ್ಯ 20 ದಶಲಕ್ಷ ಲೀಟರ್ ನೀರು ಸರಬರಾಜು ಆಗುತ್ತಿದೆ. ಪ್ರತಿಯೊಬ್ಬರಿಗೂ ಸರಾಸರಿ 70 ಲೀಟರ್ ನೀರು ಲಭ್ಯವಾಗುತ್ತಿದೆ. ಹೊಸ ಜಲಾಗಾರ ಮತ್ತು ಹೊಸ ಕೊಳವೆ ಮಾರ್ಗದಿಂದ ಹೆಚ್ಚುವರಿಯಾಗಿ ನಿತ್ಯ 10 ದಶಲಕ್ಷ ಲೀಟರ್ ಶುದ್ದ ಕಾವೇರಿ ನೀರು ಲಭ್ಯವಾಗಲಿದೆ‘ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಆಯುಕ್ತ ಮಹೇಶ್ವರರಾವ್, ಶಾಸಕರಾದ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸದಸ್ಯರಾದ ನಾಗರಾಜ ಯಾದವ್, ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಸಂಪತ್‌ರಾಜ್ ಸೇರಿದಂತೆ ಸ್ಥಳೀಯ ನಾಯಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.