ಬೆಂಗಳೂರು: ಮಹದೇವಪುರ ವಲಯ ವೈಟ್‌ಫೀಲ್ಡ್ ವಾರ್ಡ್‌ನ ಪಟ್ಟಂದೂರು ಅಗ್ರಹಾರ ಗ್ರಾಮದಲ್ಲಿ ಸುಮಾರು 503 ಚ.ಮೀ ವಿಸ್ತೀರ್ಣದ ₹5.35 ಕೋಟಿ ಮೌಲ್ಯದ ಸರ್ಕಾರಿ ಬಂಡಿದಾರಿ ಒತ್ತುವರಿಯನ್ನು ಬಿಬಿಎಂಪಿ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಐಟಿಪಿಎಲ್ ಮುಖ್ಯರಸ್ತೆಯಿಂದ ಬ್ರಿಗೇಡ್ ಟೆಕ್‌ಪಾರ್ಕ್ ರಸ್ತೆಗೆ ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ನಂ 134/5 ರಲ್ಲಿನ ಸರ್ಕಾರಿ ಬಂಡಿದಾರಿಯಲ್ಲಿ ವಾಹನಗಳು ಸಂಚರಿಸುತ್ತಿದ್ದವು. ಸರ್ವೆ ನಂ.134/5ರ ಮಾಲೀಕರಾದ ಬಿ. ರಾಮಚಂದ್ರ ನಾಯ್ಡು ಅವರು ರಸ್ತೆಯನ್ನು ಅತಿಕ್ರಮಿಸಿಕೊಂಡು ಕಬ್ಬಿಣದ ಬ್ಯಾರಿಕೇಡ್ ಅಳವಡಿಸಿದ್ದರು. ಸಾರ್ವಜನಿಕರು ಹಾಗೂ ಯಾವುದೇ ವಾಹನಗಳು ಸಂಚರಿಸದಂತೆ ಎರಡು ತಿಂಗಳಿಂದ ಅಡ್ಡಿಪಡಿಸಿದ್ದರು.
ಈ ರಸ್ತೆಯಲ್ಲಿಯೇ ಖಾಸಗಿ ಹೋಟೆಲ್ ನಡೆಸಲು ಜಾಗವನ್ನು ಬಾಡಿಗೆಗೆ ನೀಡಿದ್ದರು. ಬಿಬಿಎಂಪಿ ಮಹದೇವಪುರ ವಲಯದ ರಸ್ತೆ ಮೂಲಸೌಕರ್ಯ ವಿಭಾಗದ ಅಧಿಕಾರಿಗಳು, ಪೂರ್ವ ತಾಲ್ಲೂಕು ತಹಶೀಲ್ದಾರ್ ಕಚೇರಿಯ ಭೂಮಾಪಕರು, ರಾಜಸ್ವ ನಿರೀಕ್ಷಕರು ಹಾಗೂ ಸ್ಥಳೀಯ ವೈಟ್‌ಫೀಲ್ಡ್ ಠಾಣೆ ಪೊಲೀಸರ ಸಹಯೋಗದೊಂದಿಗೆ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಬಂಡಿದಾರಿ ಜಾಗವನ್ನು ವಶಪಡಿಸಿಕೊಳ್ಳಲಾಯಿತು. ಬಂಡಿದಾರಿಯನ್ನು ಅಭಿವೃದ್ಧಿಪಡಿಸಲು ವೆಟ್ ಮಿಕ್ಸ್ ಮಿಶ್ರಣವನ್ನು ಹಾಕಲಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಉದಯ್ ಚೌಗುಲೆ ತಿಳಿಸಿದ್ದಾರೆ.
ಬಿ. ರಾಮಚಂದ್ರ ನಾಯ್ಡು ಅವರು ಸರ್ಕಾರಿ ಬಂಡಿದಾರಿ, ಸರ್ಕಾರಿ ಬಿ ಕರಾಬು ಜಾಗದಲ್ಲಿ ಗೋಡೆ ನಿರ್ಮಿಸಿರುವುದು ಭೂ ಮಾಪಕರು ನೀಡಿರುವ ಸರ್ವೆ ನಕ್ಷೆಯಲ್ಲಿ ದೃಢಪಟ್ಟಿರುತ್ತದೆ. ಆದ್ದರಿಂದ, ಅವರಿಗೆ ನೋಟೀಸ್ ನೀಡಿ ಒತ್ತುವರಿ ತೆರವು ಆದೇಶ ಜಾರಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.