ADVERTISEMENT

ಪಿಆರ್‌ಆರ್‌ ವಿಳಂಬವಾದರೆ ಅನ್ಯ ಇಲಾಖೆಗೆ: ಸಿಎಂ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 16:25 IST
Last Updated 23 ಜನವರಿ 2023, 16:25 IST
   

ಬೆಂಗಳೂರು: ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಯೋಜನೆ ಅನುಷ್ಠಾನವನ್ನು ಕ್ಷಿಪ್ರಗೊಳಿಸದಿದ್ದರೆ ಯೋಜನೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಹಿಂಪಡೆದು ಅನ್ಯ ಇಲಾಖೆಗೆ ವರ್ಗಾಯಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ.

ಪಿಆರ್‌ಆರ್‌ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಿಡಿಎ ಅಧ್ಯಕ್ಷ ಎಸ್‌.ಆರ್‌. ವಿಶ್ವನಾಥ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಸೇರಿದಂತೆ ಹಿರಿಯ ಅಧಿಕಾರಿಗಳ ಜತೆ ಸೋಮವಾರ ಸಭೆ ನಡೆಸಿದ ಅವರು, ಯೋಜನೆಯ ಪ್ರಗತಿ ಕುಂಠಿತವಾಗಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

65 ಕಿ.ಮೀ. ಉದ್ದದ ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವುದು ವಿಳಂಬವಾಗುತ್ತಿದೆ. ಈ ಕುರಿತು ಸರಿಯಾದ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡದಿರುವುದಕ್ಕೆ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯೋಜನೆ ಅನುಷ್ಠಾನದ ಹೊಣೆಯನ್ನು ಬೇರೊಂದು ಇಲಾಖೆಗೆ ವರ್ಗಾಯಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಪಿಆರ್‌ಆರ್‌ ಅನುಷ್ಠಾನದ ವಿಚಾರದಲ್ಲಿ ಬಿಡಿಎ ಅಧಿಕಾರಿಗಳ ಧೋರಣೆ ಬಗ್ಗೆ ಬೊಮ್ಮಾಯಿ ಅಸಮಾಧಾನ ಹೊರಹಾಕಿದ್ದಾರೆ. ಯೋಜನೆಯನ್ನು ಲೋಕೋಪಯೋಗಿ ಇಲಾಖೆ, ಮೂಸೌಕರ್ಯ ಅಭಿವೃದ್ಧಿ ಇಲಾಖೆ ಅಥವಾ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಪುನಃ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಸರ್ಕಾರಿ– ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರ ನಿರ್ಧರಿಸಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕು ಉಂಟಾಗಿದೆ. ಭೂಸ್ವಾಧೀನಕ್ಕೆ ಅಗತ್ಯವಿರುವ ಹಣದ ಕುರಿತು ಬಿಡಿಎ ಇನ್ನೂ ನಿಖರವಾಗಿ ಅಂದಾಜು ಮಾಡಿಲ್ಲ. ಯೋಜನೆ ಅನುಷ್ಠಾನಕ್ಕೆ ಗುತ್ತಿಗೆದಾರರನ್ನು ನೇಮಿಸಲು ಎರಡು ಬಾರಿ ಟೆಂಡರ್‌ ಪ್ರಕ್ರಿಯೆ ನಡೆಸಿದರೂ ಯಾರಿಂದಲೂ ಆಸಕ್ತಿ ವ್ಯಕ್ತವಾಗಿಲ್ಲ.

ಸಭೆ ಬಳಿಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ವಿಶ್ವನಾಥ್‌, ‘ಪಿಆರ್‌ಆರ್‌ ನಿರ್ಮಾಣಕ್ಕೆ ನಡೆಸುವ ಭೂಸ್ವಾಧೀನ ಪ್ರಕ್ರಿಯೆ 2013ರ ಭೂಸ್ವಾಧೀನ ಮತ್ತು ಪರಿಹಾರ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಆದರೆ, ಜಮೀನುಗಳ ಮಾಲೀಕರು ಹಳೆಯ ಭೂಸ್ವಾಧೀನ ಕಾಯ್ದೆಯಡಿ ಜಮೀನು ಬಿಟ್ಟುಕೊಡಲು ಒಪ್ಪುತ್ತಿಲ್ಲ’ ಎಂದರು.

‘ರೈತರಿಗೆ ಹೆಚ್ಚಿನ ಮೊತ್ತದ ಪರಿಹಾರ ನೀಡುವುದಕ್ಕೆ ಪೂರಕವಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಇದರಿಂದ ಸರ್ಕಾರಕ್ಕೂ ಉತ್ತಮ ಹೆಸರು ಬರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.