ADVERTISEMENT

ಪರಿಷತ್‌ ಚುನಾವಣೆ| ಗೆಲುವಿನ ಹೊಣೆ ಸಚಿವರಿಗೆ: ಕಾಂಗ್ರೆಸ್‌

ಜೂನ್ 3ರಂದು ಆರು ಕ್ಷೇತ್ರಗಳಿಗೆ ಚುನಾವಣೆ * ಪಕ್ಷಗಳಲ್ಲಿ ಗರಿಗೆದರಿದ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2024, 0:30 IST
Last Updated 13 ಮೇ 2024, 0:30 IST
<div class="paragraphs"><p>ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮರಿತಿಬ್ಬೇಗೌಡ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಭಾನುವಾರ ಬಿ ಫಾರ್ಮ್ ವಿತರಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್‌, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಮಧು ಬಂಗಾರಪ್ಪ ಜತೆಗಿದ್ದರು </p></div>

ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮರಿತಿಬ್ಬೇಗೌಡ ಅವರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಭಾನುವಾರ ಬಿ ಫಾರ್ಮ್ ವಿತರಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ತ್ಯಾಗರಾಜ್‌, ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಮಧು ಬಂಗಾರಪ್ಪ ಜತೆಗಿದ್ದರು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ವಿಧಾನ ಪರಿಷತ್‌ನ ಆರು ಕ್ಷೇತ್ರಗಳಿಗೆ ಜೂನ್‌ 3ರಂದು ನಡೆಯುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲುವಿನ ದಡ ಮುಟ್ಟಿಸುವ ಹೊಣೆಗಾರಿಕೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲು ಕಾಂಗ್ರೆಸ್‌ ನಿರ್ಧರಿಸಿದೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ವಿಧಾನ ಪರಿಷತ್‌ ಚುನಾವಣಾ ಸಿದ್ಧತೆ ಕುರಿತು ಪಕ್ಷದ ಅಭ್ಯರ್ಥಿಗಳು, ಸಚಿವರು, ಮುಖಂಡರ ಜತೆ ಭಾನುವಾರ ಸುದೀರ್ಘ ಸಭೆ ನಡೆಸಿದರು.

ಆಯಾ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಿಗೆ ಮುನ್ನಡೆ ದೊರಕಿಸುವ ಹೊಣೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ವಹಿಸುವುದಾಗಿ ಮುಖ್ಯಮಂತ್ರಿಯವರು ಈ ಸಭೆಯಲ್ಲಿ ಹೇಳಿದ್ದಾರೆ.

‘ವಿಧಾನ ಪರಿಷತ್‌ನ ಮೂರು ಪದವೀಧರರ ಕ್ಷೇತ್ರಗಳು ಮತ್ತು ಮೂರು ಶಿಕ್ಷಕರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಆರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲಲೇಬೇಕು. ಸಚಿವರು ಮತ್ತು ಶಾಸಕರು ತಮ್ಮ ಸ್ವಂತ ಚುನಾವಣೆ ಎದುರಿಸಿದಂತೆ ಈ ಚುನಾವಣೆಯಲ್ಲಿ ಕೆಲಸ ಮಾಡಬೇಕು’ ಎಂಬುದಾಗಿ ಸಿದ್ದರಾಮಯ್ಯ ಸಭೆಯಲ್ಲಿ ಸೂಚನೆ ನೀಡಿದರು ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ತಕ್ಷಣದಿಂದ ಎಲ್ಲ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ಆರಂಭಿಸಬೇಕು. ಪಕ್ಷದ ಅಭ್ಯರ್ಥಿಗಳು ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಮುನ್ನಡೆ ಪಡೆಯುವುದಕ್ಕೆ ಅನುಕೂಲವಾಗುವಂತೆ ಕಾರ್ಯತಂತ್ರ ರೂಪಿಸಬೇಕು. ಅಭ್ಯರ್ಥಿಗಳಿಗೆ ಹಿನ್ನಡೆಯಾದರೆ ಸಚಿವರು, ಶಾಸಕರನ್ನು ಹೊಣೆ ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು ಎಂದು ಮೂಲಗಳು ಹೇಳಿವೆ.

ಲೋಕಸಭೆ ಚುನಾವಣೆಯ ಮಾದರಿ: ಸಭೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಶಿವಕುಮಾರ್‌, ‘ಶಿಕ್ಷಕರ ಹಾಗು ಪದವೀಧರ ಕ್ಷೇತ್ರಗಳ ಚುನಾವಣೆಯನ್ನು ಲೋಕಸಭಾ ಚುನಾವಣೆ ಮಾದರಿಯಲ್ಲೇ ಎದುರಿಸುತ್ತೇವೆ’ ಎಂದರು.

‘ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಂದ ಆರಂಭವಾಗಿ ಪಕ್ಷದ ಎಲ್ಲ ಮುಖಂಡರು ಸೇರಿ ಈ ಚುನಾವಣೆ ಎದುರಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ. ಪಕ್ಷದ ಅಭ್ಯರ್ಥಿಗಳಿಗೆ ಬಿ ಫಾರ್ಮ್‌ ವಿತರಣೆ ಮಾಡಲಾಗಿದೆ’ ಎಂದು ತಿಳಿಸಿದರು.

ಪರಿಷತ್ ಚುನಾವಣೆಯಲ್ಲೂ ಬಿಜೆಪಿ– ಜೆಡಿಎಸ್ ಮೈತ್ರಿ ಮುಂದುವರಿದಿರುವ ಬಗ್ಗೆ ಕೇಳಿದಾಗ, ‘ಅವರು ಶಾಶ್ವತವಾಗಿ ಮೈತ್ರಿ ಮಾಡಿಕೊಳ್ಳಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಮೈತ್ರಿಯಾದರೂ ಮಾಡಿಕೊಳ್ಳಲಿ, ವಿಲೀನವಾದರೂ ಮಾಡಿಕೊಳ್ಳಲಿ. ಅದು ಅವರ ಪಕ್ಷಗಳ ತೀರ್ಮಾನ. ಯಾರ ಭಾವಚಿತ್ರವನ್ನಾದರೂ ಹಾಕಿಕೊಂಡು ಮತ ಕೇಳಲಿ. ನಮಗೂ ಅದಕ್ಕೂ ಸಂಬಂಧವಿಲ್ಲ’ ಎಂದರು.

ಸಚಿವರಾದ ಕೆ.ಎನ್‌.ರಾಜಣ್ಣ, ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ.ಚಂದ್ರಶೇಖರ್‌, ತನ್ವೀರ್‌ ಸೇಠ್‌, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್, ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿದ್ದರು.

ಮರಿತಿಬ್ಬೇಗೌಡ ‘ಕೈ’ ಅಭ್ಯರ್ಥಿ: ವಿಧಾನ ಪರಿಷತ್‌ನ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್‌ನ ಮಾಜಿ ಸದಸ್ಯ ಮರಿತಿಬ್ಬೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ‘ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯನ್ನಾಗಿ ಮರಿತಿಬ್ಬೇಗೌಡ ಅವರನ್ನು ಆಯ್ಕೆಮಾಡುವ ಪ್ರಸ್ತಾವಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನುಮೋದನೆ ನೀಡಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮರಿತಿಬ್ಬೇಗೌಡ ಅವರು 2000ನೇ ವರ್ಷದಿಂದ ಸತತ ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಒಂದು ಬಾರಿ ಕಾಂಗ್ರೆಸ್‌ನಿಂದ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಹಾಗೂ ಎರಡು ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಲೋಕಸಭಾ ಚುನಾವಣೆಗೂ ಮುನ್ನ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರು. ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾಗಿರುವ ಮರಿತಿಬ್ಬೇಗೌಡ ಕೆ.ಕೆ. ಮಂಜುನಾಥ್‌ ಕುಮಾರ್‌ ಆಯನೂರು ಮಂಜುನಾಥ್‌ ಮತ್ತು ಚಂದ್ರಶೇಖರ ಪಾಟೀಲ ಅವರಿಗೆ ಭಾನುವಾರ ಬಿ ಫಾರ್ಮ್‌ ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.