ADVERTISEMENT

ಭೂಸ್ವಾಧೀನ ವಿವಾದ | ಹೋರಾಟ ಮುಂದುವರಿಸಲು ನಿರ್ಧಾರ: ಜುಲೈ 4ರಂದು ಸಿಎಂ ಸಭೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 16:59 IST
Last Updated 26 ಜೂನ್ 2025, 16:59 IST
   

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿ ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ರೈತ ಹೋರಾಟದ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಚರ್ಚೆ ನಡೆಸಿದರು. ಸಮಗ್ರ ಸಭೆ ನಡೆಸಲು ದಿನ ನಿಗದಿ ಮಾಡಿದ್ದಾರೆ. ಆದರೆ, ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವವರೆಗೆ ಪ್ರತಿಭಟನೆ ಮುಂದುವರಿಸಲು ಹೋರಾಟಗಾರರು ನಿರ್ಧರಿಸಿದ್ದಾರೆ.

ಚನ್ನರಾಯಪಟ್ಟಣದ 13 ಹಳ್ಳಿಗಳ  1,777 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ಮುಂದಾಗಿರುವುದನ್ನು ವಿರೋಧಿಸಿ ಮೂರು ವರ್ಷಗಳಿಂದ ರೈತರು ಹೋರಾಟ ಮಾಡಿಕೊಂಡು ಬಂದಿದ್ದರು. ಸಂಯುಕ್ತ ಹೋರಾಟ–ಕರ್ನಾಟಕ ಬೆಂಬಲ ನೀಡಿದ್ದರಿಂದ ಬುಧವಾರ ಹೋರಾಟಕ್ಕೆ ಸಾವಿರಾರು ಜನರು ಬಂದಿದ್ದರು. 

ಪೊಲೀಸರು ಬುಧವಾರ ಸಂಜೆ ಪ್ರತಿಭಟನಕಾರರನ್ನು ಬಂಧಿಸಿದ್ದರು. ಈ ಕಾರಣದಿಂದ ನಾಗರಿಕರು ಮತ್ತು ಸಮಾನ ಮನಸ್ಕರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ‘ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್‌’ಗಾಗಿ ಜಮೀನು ವಶಪಡಿಸಿಕೊಳ್ಳುವ ಯೋಜನೆಯನ್ನೇ ಕೈಬಿಡಬೇಕು ಎಂದು ಆಗ್ರಹಿಸಿದರು. ಜುಲೈ 4ರಂದು ಬೆಳಿಗ್ಗೆ 11ಕ್ಕೆ ರೈತ ಹೋರಾಟದ ಪ್ರತಿನಿಧಿಗಳೊಂದಿಗೆ ರೈತರ ಸಮಸ್ಯೆ ಮತ್ತು ಬೇಡಿಕೆ ಕುರಿತು ಸಮಗ್ರ ಚರ್ಚೆ ನಡೆಸುವುದಾಗಿ ಸಿದ್ದರಾಮಯ್ಯ ನಿಯೋಗಕ್ಕೆ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.