ADVERTISEMENT

ಅಕ್ರಮಕ್ಕೆ ಯೂನಿಯನ್ ಬ್ಯಾಂಕ್ ಕಾರಣ| ನಿರ್ಮಲಾ ರಾಜೀನಾಮೆ ನೀಡಲಿ: ಸಿ.ಎಂ

‘ಅಕ್ರಮಕ್ಕೆ ಯೂನಿಯನ್ ಬ್ಯಾಂಕ್ ಕಾರಣ: ಕೇಂದ್ರ ಹೊಣೆ ಹೊರಲಿ’

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 16:23 IST
Last Updated 19 ಜುಲೈ 2024, 16:23 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಕೇಂದ್ರ ಸರ್ಕಾರದ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ನಲ್ಲಿರುವ ಖಾತೆಯಿಂದ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಹಗರಣದ ಹೊಣೆಯನ್ನು ಹೊತ್ತುಕೊಂಡು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ರಾಜೀನಾಮೆ ಕೊಡಲಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.

ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವ ಹಗರಣ ಕುರಿತು ವಿಧಾನಸಭೆಯಲ್ಲಿ ನಡೆದ ಚರ್ಚೆಗೆ ಶುಕ್ರವಾರ ಉತ್ತರ ನೀಡಿದ ಅವರು, ‘ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಅಧೀನದಲ್ಲಿದೆ. ಕೇಂದ್ರ ಹಣಕಾಸು ಸಚಿವರು ಈ ಹಗರಣದ ಹೊಣೆ ಹೊರುತ್ತಾರೆಯೇ’ ಎಂದು ಪ್ರಶ್ನಿಸಿದರು.

ವಿರೋಧ ಪಕ್ಷಗಳ ಸದಸ್ಯರ ಗದ್ದಲದ ಮಧ್ಯೆಯೇ ಉತ್ತರ ನೀಡಿದ ಸಿದ್ದರಾಮಯ್ಯ, ಲಿಖಿತ ಭಾಷಣವನ್ನು ಓದಿದರು. ಮಧ್ಯದಲ್ಲಿ ಕೆಲವೊಮ್ಮೆ ಏರು ದನಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ADVERTISEMENT

‘ಹಗರಣಕ್ಕೆ ಮುಖ್ಯಮಂತ್ರಿಯೇ ಹೊಣೆ ಎಂಬ ಬಿಜೆಪಿ ಆರೋಪದಲ್ಲಿ ಹುರುಳಿಲ್ಲ. ಆಯಾ ಇಲಾಖೆಗಳಿಗೆ ಅನುದಾನ ಬಿಡುಗಡೆ ಮಾಡುವುದಷ್ಟೇ ಹಣಕಾಸು ಇಲಾಖೆಯ ಕೆಲಸ. ಅಲ್ಲಿ ಅನುದಾನ ಬಳಕೆಯ ನಿರ್ಧಾರ ಕೈಗೊಳ್ಳುವುದು ನಿಗಮಗಳ ಮುಖ್ಯಸ್ಥರದ್ದೇ ಜವಾಬ್ದಾರಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆ ಬದಲಾವಣೆಗೆ ಮುನ್ನ ಹಣಕಾಸು ಇಲಾಖೆಯ ಅನುಮತಿಯನ್ನೂ ಪಡೆದಿರಲಿಲ್ಲ. ಈ ಅಕ್ರಮಕ್ಕೂ ನನಗೂ ಯಾವ ಸಂಬಂಧವೂ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧೀಕ್ಷಕ ಪಿ. ಚಂದ್ರಶೇಖರನ್‌ ಮೇ 26ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ಪ್ರಕರಣದ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ) ರಚಿಸಲಾಗಿತ್ತು. ಎಸ್‌ಐಟಿ ಈವರೆಗೆ 12 ಮಂದಿಯನ್ನು ಬಂಧಿಸಿದೆ. ₹85.25 ಕೋಟಿಯನ್ನು ವಶಕ್ಕೆ ಪಡೆದಿದೆ. ಇನ್ನು ಸ್ವಲ್ಪ ಮೊತ್ತ ಮಾತ್ರ ಬಾಕಿ ಇದೆ. ಹಗರಣದಲ್ಲಿ ಶಾಮೀಲಾದವರು ಎಷ್ಟೇ ದೊಡ್ಡವರಿದ್ದರೂ ಬಿಡುವುದಿಲ್ಲ. ಎಲ್ಲರನ್ನೂ ಬಂಧಿಸಿ ಜೈಲಿಗೆ ಅಟ್ಟಲಾಗುವುದು ಎಂದರು.

₹187 ಕೋಟಿ ಮೊತ್ತದ ಹಗರಣ ನಡೆದಿದೆ ಎಂಬ ಆರೋ‍ಪದಲ್ಲಿ ಹುರುಳಿಲ್ಲ. ನಿಗಮದ ಬ್ಯಾಂಕ್‌ ಖಾತೆಗೆ ಅಷ್ಟು ಮೊತ್ತ ವರ್ಗಾವಣೆ ಆಗಿತ್ತು. ಅಲ್ಲಿಂದ ಹೈದರಾಬಾದ್‌ನ ಬ್ಯಾಂಕ್‌ ಖಾತೆಗಳಿಗೆ ₹94.63 ಕೋಟಿ ವರ್ಗಾವಣೆ ಆಗಿತ್ತು. ಅದರಲ್ಲಿ ₹5 ಕೋಟಿ ವಾಪಸ್‌ ಬಂದಿತ್ತು. ಬಿಜೆಪಿಯವರು ಜನರನ್ನು ದಿಕ್ಕು ತಪ್ಪಿಸಲು ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇ.ಡಿ ದುರ್ಬಳಕೆ: ಬಿಜೆಪಿ ಸರ್ಕಾರದ ಅವಧಿಯಲ್ಲಿನ 21 ಹಗರಣಗಳ ಪಟ್ಟಿಯನ್ನು ಸದನದಲ್ಲಿ ಓದಿದ ಮುಖ್ಯಮಂತ್ರಿ, ‘ಹಿಂದೆಯೂ ಇಲ್ಲಿ ಹಗರಣಗಳು ನಡೆದಿದ್ದವು. ಯಾವತ್ತೂ ಜಾರಿ ನಿರ್ದೇಶನಾಲಯ ಸ್ವಯಂಪ್ರೇರಿತವಾಗಿ ತನಿಖೆಗೆ ಬಂದಿರಲಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ಇ.ಡಿ ಅಧಿಕಾರಿಗಳು ಸ್ವಯಂಪ್ರೇರಿತ ತನಿಖೆ ಆರಂಭಿಸಿದ್ದಾರೆ. ಇ.ಡಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ’ ಎಂದು ಆರೋಪಿಸಿದರು.

‘ಶಾಸಕ ಬಿ. ನಾಗೇಂದ್ರ ಅವರನ್ನು ಬಂಧಿಸಿರುವ ಇ.ಡಿ ಅಧಿಕಾರಿಗಳು, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಹೆಸರು ಹೇಳುವಂತೆ ಒತ್ತಡ ಹೇರುತ್ತಿರುವ ಮಾಹಿತಿ ಇದೆ. ಇ.ಡಿ ಭಯ ನಮಗಿಲ್ಲ. ಬಿಜೆಪಿ ಅವಧಿಯ ಎಲ್ಲ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ. ಸಾರ್ವಜನಿಕ ಹಣ ನುಂಗಿದವರನ್ನು ಬಂಧಿಸಿ ಜೈಲಿಗೆ ಕಳುಹಿಸುತ್ತೇವೆ’ ಎಂದು ಹೇಳಿದರು.

₹ 25 ಲಕ್ಷ ಪರಿಹಾರ ಘೋಷಣೆ

ವಾಲ್ಮೀಕಿ ಅಭಿವೃದ್ಧಿ ನಿಗಮದ ಲೆಕ್ಕಾಧೀಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವ ಪಿ. ಚಂದ್ರಶೇಖರನ್‌ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ₹25 ಲಕ್ಷ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಚಂದ್ರಶೇಖರನ್‌ ಪತ್ನಿ ಕವಿತಾ ಅವರು ಡೇಟಾ ಎಂಟ್ರಿ ಆಪರೇಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಶಿಕ್ಷಣ ವೆಚ್ಚ ಭರಿಸಲು ಕಷ್ಟವಾಗಿದೆ ಎಂಬುದಾಗಿ ಮನವಿ ಮಾಡಿದ್ದರು. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ₹25 ಲಕ್ಷ ಪರಿಹಾರ ನೀಡಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.