ADVERTISEMENT

ಬೆಂಗಳೂರು: ಎಲಿವೇಟೆಡ್‌ ಕಾರಿಡಾರ್‌ ಗುಮ್ಮ

ಸಿಎಂಪಿಯಲ್ಲಿ ಈ ಯೋಜನೆ ಮತ್ತೆ ಪ್ರಸ್ತಾಪ * ಸಂಘಟನೆಗಳ ವಿರೋಧ

ಪ್ರವೀಣ ಕುಮಾರ್ ಪಿ.ವಿ.
Published 14 ಡಿಸೆಂಬರ್ 2019, 22:09 IST
Last Updated 14 ಡಿಸೆಂಬರ್ 2019, 22:09 IST
   

ಬೆಂಗಳೂರು: ‘ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ’ ಎಂಬ ಗಾದೆಯಂತಾಗಿದೆ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಲಿವೇಟೆಡ್‌ ಕಾರಿಡಾರ್‌ ಯೋಜನೆಯ ಕತೆ.

‘ಸರ್ಕಾರ ಈ ಯೋಜನೆಯನ್ನು ಕೈಬಿಟ್ಟಿದೆ’ ಎಂದು ಈ ಯೋಜನೆಯ ವಿರುದ್ಧ ಹೋರಾಟ ನಡೆಸಿದ ವಿವಿಧ ಸಂಘಟನೆಗಳು ನಿಟ್ಟುಸಿರು ಬಿಡುತ್ತಿರುವಾಗಲೇ, ಈ ಪ್ರಸ್ತಾವ ಇನ್ನೂ ಜೀವಂತವಾಗಿದೆ ಎಂದು ನೆನಪಿಸಿಕೊಟ್ಟಿದೆ ಸಮಗ್ರ ಸಂಚಾರ ಯೋಜನೆಯ (ಸಿಎಂಪಿ) ಕರಡು.

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್‌) ವೆಬ್‌ಸೈಟ್‌ನಲ್ಲಿ (kannada.bmrc.co.in) ಪ್ರಕಟಿಸಿರುವ ಸಿಎಂಪಿ ಕರಡಿನಲ್ಲಿ ಈ ಯೋಜನೆ ಬಗ್ಗೆ ಮತ್ತೆ ಉಲ್ಲೇಖಿಸಲಾಗಿದೆ. ನಗರದ ಸಂಚಾರ ಸುಧಾರಣೆ ಸಲುವಾಗಿ ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ) ಹಾಗೂ ಹೊರ ವರ್ತುಲ ರಸ್ತೆ (ಒಆರ್‌ಆರ್‌) ಆಚೆಗೂ ರಸ್ತೆಗಳ ಸಾಮರ್ಥ್ಯ ಹೆಚ್ಚಿಸಬೇಕಿದೆ. ಹೊರವಲಯದಲ್ಲಿ ನೆಲ ಮಟ್ಟದಲ್ಲಿ ರಸ್ತೆ ವಿಸ್ತರಣೆಗೆ ಅವಕಾಶ ಇದೆ. ಆದರೆ, ಕೇಂದ್ರ ಪ್ರದೇಶಗಳಲ್ಲಿ (ಎ–ಯೋಜನಾ ಪ್ರದೇಶ) ಭೂಸ್ವಾಧೀನಕ್ಕೆ ತೊಡಕು ಇದೆ. ಹಾಗಾಗಿ ಎತ್ತರಿಸಿದ ರಸ್ತೆಗಳನ್ನು ನಿರ್ಮಿಸಬೇಕಿದೆ ಎಂದು ಸಿಎಂಪಿಯಲ್ಲಿ ಹೇಳಲಾಗಿದೆ.

ADVERTISEMENT

ಒಟ್ಟು 88 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವ ಪ್ರಸ್ತಾವ ಇದೆ. ಅದರಲ್ಲಿ ಉತ್ತರ–ದಕ್ಷಿಣ ಕಾರಿಡಾರ್‌, ಸೆಂಟ್ರಲ್‌–ರಿಂಗ್‌ ರಸ್ತೆ ಕಾರಿಡಾರ್‌ ಹಾಗೂ ಪೂರ್ವ–ಪಶ್ಚಿಮ ಕಾರಿಡಾರ್‌ಗಳಲ್ಲಿ ಮೆಟ್ರೊ ಕಾರಿಡಾರ್‌ಗಳೂ ಇರಲಿವೆ. ಹಾಗಾಗಿ ಈ ಮೂರು ಕಾರಿಡಾರ್‌ಗಳನ್ನು ಮರುಪರಿಶೀಲಿಸಬಹುದು ಎಂದು ಸಿಎಂಪಿಯಲ್ಲಿ ಸಲಹೆ ನೀಡಲಾಗಿದೆ.

ಸರ್ಕಾರ102 ಕಿ.ಮೀ ಉದ್ದದ ಎಲಿವೇಟೆಡ್‌ ಕಾರಿಡಾರ್‌ ಅನ್ನು ಒಟ್ಟು₹ 25,500 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಮುಂದಾಗಿತ್ತು. ಈ ಯೋಜನೆಯ ಅನುಷ್ಠಾನದ ಹೊಣೆಯನ್ನು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್‌) ವಹಿಸಲಾಗಿತ್ತು. ಈ ಯೋಜನೆಗೆ ಭಾರಿ ಜನವಿರೋಧ ವ್ಯಕ್ತವಾಗಿತ್ತು.

ಯೋಜನೆಯ ಮೊದಲ ಹಂತದಲ್ಲಿ 21.54 ಕಿ.ಮೀ ಉದ್ದದ ಉತ್ತರ –ದಕ್ಷಿಣ ಕಾರಿಡಾರ್‌ ಅನ್ನು ₹6,855 ಕೋಟಿ ಮೊತ್ತದಲ್ಲಿ ನಿರ್ಮಿಸುವ ಮೂರು ಪ್ಯಾಕೇಜ್‌ಗಳ ಕಾಮಗಾರಿಗೆ ನಿಗಮವು 2019ರ ಮಾರ್ಚ್‌ನಲ್ಲಿ ಟೆಂಡರ್‌ ಆಹ್ವಾನಿಸಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ಟೆಂಡರ್‌ ರದ್ದುಪಡಿಸಿ ಸೆಪ್ಟೆಂಬರ್‌ನಲ್ಲಿ ಆದೇಶ ಹೊರಡಿಸಿದ್ದರು.

ಟೆಂಡರ್‌ ರದ್ದಾದ ಬಳಿಕ ಹೋರಾಟಗಾರರು ಪ್ರತಿಭಟನೆಯನ್ನು ಕೈಬಿಟ್ಟಿದ್ದರು. ಆದರೆ, ಸಮಗ್ರ ಸಂಚಾರ ಯೋಜನೆಯ ಕರಡಿನಲ್ಲಿ ಮತ್ತೆ ಈ ಯೋಜನೆಯ ಪ್ರಸ್ತಾವ ಇರುವುದು ಹೋರಾಟಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

‘ಮೇಲ್ಸೇತುವೆಗಳಿಗೆ ರಜೆ ನೀಡಲಿ’
‘ನಗರದ ಸಮಗ್ರ ಸಂಚಾರ ಯೋಜನೆ ರೂಪಿಸುವಾಗ ಹೊಸ ಎಲಿವೇಟೆಡ್‌ ಕಾರಿಡಾರ್‌ ಬಗ್ಗೆ ಪ್ರಸ್ತಾಪಿಸುವುದಲ್ಲ. ಅದರ ಬದಲು ಈಗಿರುವ ಮೇಲ್ಸೇತುವೆಗಳ ಬಳಕೆಗೆ ರಜೆ ನೀಡಬೇಕು’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಸಹಸಂಚಾಲಕ ಶ್ರೀನಿವಾಸ ಅಲವಿಲ್ಲಿ ಸಲಹೆ ನೀಡಿದರು.

‘20 ವರ್ಷಗಳಲ್ಲಿ ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡದ ಕಾರಣ ನಗರದಲ್ಲಿ ಸಂಚಾರ ದಟ್ಟಣೆ ಸ್ಥಿತಿ ಅಧೋಗತಿಗೆ ಇಳಿದಿದೆ. ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿದರೆ ಸಮಸ್ಯೆ ಬಗೆಹರಿಯಲಿದೆ. ಬಸ್‌ಗಳಿಗೆ ಪ್ರತ್ಯೇಕ ಪಥ ಕಾಯ್ದಿರಿಸುವುದು ಒಂದು ಸ್ವಾಗತಾರ್ಹ ಹೆಜ್ಜೆ. ಸಂಚಾರ ವ್ಯವಸ್ಥೆ ಸುಧಾರಣೆಗೆ ಇಂತಹ ಕ್ರಮಗಳ ಅಗತ್ಯವಿದೆಯೇ ಹೊರತು, ಜನರ ಹಣ ಲೂಟಿ ಹೊಡೆಯುವ ಎಲಿವೇಟೆಡ್‌ ಕಾರಿಡಾರ್‌ಗಳಲ್ಲ’ ಎಂದು ಅವರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.