ADVERTISEMENT

ಬೆಂಗಳೂರು | ಬಡಾವಣೆ ನಿರ್ಮಾಣ ಯೋಜನೆ: ₹21.16 ಕೋಟಿ ದುರುಪಯೋಗ, ಎಫ್‌ಐಆರ್‌ ದಾಖಲು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 23:30 IST
Last Updated 12 ನವೆಂಬರ್ 2023, 23:30 IST
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)
ಎಫ್‌ಐಆರ್‌ (ಪ್ರಾತಿನಿಧಿಕ ಚಿತ್ರ)   

ಬೆಂಗಳೂರು: ಬಡಾವಣೆ ನಿರ್ಮಾಣ ಯೋಜನೆಯಲ್ಲಿ ₹ 21.16 ಕೋಟಿ ದುರ್ಬಳಕೆ ಆರೋಪದಡಿ ಕಾಫಿ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಹಾಲಿ, ಮಾಜಿ ನಿರ್ದೇಶಕರು ಸೇರಿದಂತೆ 17 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಸಹಕಾರ ಸಂಘಗಳ ಬೆಂಗಳೂರು ನಗರ ಜಿಲ್ಲೆ ಉಪ ನಿಬಂಧಕರ ಕಚೇರಿಯ (4ನೇ ವಲಯ) ಸಹಕಾರ ಅಭಿವೃದ್ಧಿ ಅಧಿಕಾರಿ ಎನ್‌. ಚಂದ್ರಶೇಖರ್ ಅವರು ಹಣ ದುರ್ಬಳಕೆ ಬಗ್ಗೆ ದೂರು ನೀಡಿದ್ದಾರೆ’ ಎಂದು ವಿಧಾನಸೌಧ ಠಾಣೆ ಪೊಲೀಸ್ ಮೂಲಗಳು ಹೇಳಿವೆ.

‘ಹಾಲಿ ಹಾಗೂ ಮಾಜಿ ನಿರ್ದೇಶಕರಾದ ಸಿ.ಚನ್ನೇಗೌಡ, ರಜನಿ ಶೇಖರ್, ಬಿ.ಎಂ.ರಾಜಣ್ಣ, ಎಚ್‌.ವಿ.ವಿನೋದ್, ಅರವಿಂದ್ ವೈದ್ಯ, ಜಿ.ರವಿಕುಮಾರ್, ಕೆ.ರಾಜಮ್ಮ, ಎಚ್‌.ಬಿ.ಸುರೇಂದ್ರಸ್ವಾಮಿ, ಪಿ.ಎಸ್.ಪ್ರೇಮಕುಮಾರಿ, ಎಚ್‌.ರವಿಚಂದ್ರನ್, ಡಿ.ಆರ್ಮುಗಂ, ಬಿ.ಬಿ.ಮಾಚಮ್ಮ, ಕೆ.ಸುಭಾಷ್, ಟಿ.ವಿ.ನೀಲಕಂಠನ್, ಕಾರ್ಯದರ್ಶಿ ಎನ್.ಜಯರಾಮ್ ಹಾಗೂ ಭೂ ಅಭಿವೃದ್ಧಿದಾರರಾದ ಬಿ.ಎಸ್. ಹೇಮಂತ್‌ಕುಮಾರ್, ಆರ್‌. ಸುರೇಶ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ‘ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ನಗರದ ಮೀಸಗಾನಹಳ್ಳಿ ಹಾಗೂ ಬೈನಹಳ್ಳಿ ಬಳಿ ಬಡಾವಣೆ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿತ್ತು. 2007ರಿಂದ 2022ನೇ ಸಾಲಿನವರೆಗೆ ಭೂ ಅಭಿವೃದ್ಧಿಗೆ ಹೆಚ್ಚುವರಿಯಾಗಿ ₹ 21.16 ಕೋಟಿ ಪಾವತಿಸಲಾಗಿತ್ತು. ಈ ಮೂಲಕ ಸಂಘದ ಹಣವನ್ನು ಆರೋಪಿಗಳು ದುರ್ಬಳಕೆ ಮಾಡಿರುವುದು ಆಂತರಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿವೆ.

‘ಹಣ ದುರುಪಯೋಗಕ್ಕೆ ಸಂಬಂಧಪಟ್ಟಂತೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಿ, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.