ಬೆಂಗಳೂರು: ಕಾಲೇಜು ಪುನರಾರಂಭದ ಮೊದಲ ದಿನವಾದ ಮಂಗಳವಾರ ಬಿಬಿಎಂಪಿಯು 360 ಕಾಲೇಜುಗಳಲ್ಲಿ 11,574 ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಗೆ ಪರೀಕ್ಷೆ ನಡೆಸಿದ್ದು, ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಲೇಜುಗಳಲ್ಲಿ ಬಿಬಿಎಂಪಿಯ 222 ತಂಡಗಳು ಪರೀಕ್ಷೆ ನಡೆಸಿವೆ. ಅಂದಾಜು 75,163 ವಿದ್ಯಾರ್ಥಿಗಳು ಮತ್ತು ಬೋಧಕ ಸಿಬ್ಬಂದಿಯ ಪೈಕಿ ಶೇ 15ರಷ್ಟು ಜನರಿಗೆ ಮಂಗಳವಾರ ಈ ತಂಡಗಳು ಕೋವಿಡ್ ಪರೀಕ್ಷೆ ಮಾಡಿದವು.
‘ಆಯಾ ಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿರ್ದಿಷ್ಟ ಕಾಲೇಜುಗಳ ಜೊತೆ ಸಂಯೋಜನೆಗೊಳಿಸಿದ್ದೇವೆ. ಅಲ್ಲದೆ, ಸಂಚಾರಿ ತಪಾಸಣಾ ಘಟಕಗಳನ್ನು ರೂಪಿಸಲಾಗಿದೆ. ಆಯಾ ಕಾಲೇಜಿನವರು ಬಯಸಿದರೆ, ಈ ತಂಡಗಳು ಕಾಲೇಜಿಗೇ ತೆರಳಿ ವಿದ್ಯಾರ್ಥಿಗಳ, ಉಪನ್ಯಾಸಕರ ಗಂಟಲು ದ್ರವದ ಮಾದರಿ ಸಂಗ್ರಹಿಸಲಿದ್ದಾರೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದರು.
‘ಕೋವಿಡ್ ಪರೀಕ್ಷೆ ಮಾಡಲೆಂದೇ 468 ತಂಡಗಳನ್ನು ರಚಿಸಲಾಗಿದೆ. ಆದರೆ, ಮಂಗಳವಾರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದುದರಿಂದ 222 ತಂಡಗಳಷ್ಟೇ ಈ ಕಾರ್ಯದಲ್ಲಿ ತೊಡಗಿದ್ದವು’ ಎಂದು ಅವರು ಹೇಳಿದರು.
‘ಕೋವಿಡ್ ಪರೀಕ್ಷೆ ನಡೆಸಲು ಸಿಬ್ಬಂದಿ ಕೊರತೆ ಇಲ್ಲ. ಮಂಗಳವಾರ ಒಂದೇ ದಿನ 666 ಜನರನ್ನು ಕಾಲೇಜುಗಳಲ್ಲಿ ಈ ಕಾರ್ಯಕ್ಕಾಗಿ ನಿಯೋಜಿಸಲಾಗಿತ್ತು’ ಎಂದು ಕೋವಿಡ್ ಪರೀಕ್ಷೆಗಾಗಿನ ಬಿಬಿಎಂಪಿ ನೋಡಲ್ ಅಧಿಕಾರಿ ರಾಜೇಂದ್ರ ಚೋಳನ್ ಹೇಳಿದರು.
ಪಶ್ಚಿಮ ವಲಯದ ಗೋವಿಂದರಾಜ ನಗರ ವ್ಯಾಪ್ತಿಯಲ್ಲಿ 300 ಜನರಿಗೆ ಪರೀಕ್ಷೆ ಮಾಡಲಾಗಿದ್ದು, ಇದರಲ್ಲಿ ಇಬ್ಬರಿಗೆ ಕೊರೊನಾ ಪಾಸಿಟಿವ್ ವರದಿ ಬಂದಿದೆ.
ಮೊದಲ ದಿನ ನಡೆದ ಪರೀಕ್ಷೆ ವಿವರ
ವಲಯ; ಕಾಲೇಜು; ಪರೀಕ್ಷಾ ಸಂಖ್ಯೆ
ಪಶ್ಚಿಮ ವಲಯ;51;3,430
ದಾಸರಹಳ್ಳಿ;21;65
ಬೊಮ್ಮನಹಳ್ಳಿ;19;751
ಮಹದೇವಪುರ;31;150
ಆರ್.ಆರ್. ನಗರ;66;917
ಯಲಹಂಕ;35;1,444
ಪೂರ್ವ ವಲಯ;63;303
ದಕ್ಷಿಣ ವಲಯ;74;1,514
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.