ADVERTISEMENT

ಬೆಂಗಳೂರು: ಬಾಗಿಲು ಹಾಕಲಿದೆ ಮಲ್ಲೇಶ್ವರದ ‘ನ್ಯೂ ಕೃಷ್ಣಭವನ’

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2023, 21:20 IST
Last Updated 30 ನವೆಂಬರ್ 2023, 21:20 IST
ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ನ್ಯೂ ಕೃಷ್ಣಭವನ್‌ ಹೋಟೆಲ್‌
ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ನ್ಯೂ ಕೃಷ್ಣಭವನ್‌ ಹೋಟೆಲ್‌   

ಬೆಂಗಳೂರು: ನಗರದ  ಹೆಗ್ಗುರುತಾಗಿರುವ ಹಳೆಯ ಹೋಟೆಲ್‌ಗಳಲ್ಲಿ ಒಂದೆನಿಸಿರುವ ಮಲ್ಲೇಶ್ವರದ ನ್ಯೂಕ್ಯೃಷ್ಣ ಭವನ್ (ಎನ್‌ಕೆಬಿ) ಡಿಸೆಂಬರ್‌ 6ರಂದು ಶಾಶ್ವತವಾಗಿ ಬಾಗಿಲು ಮುಚ್ಚಲಿದೆ. ರುಚಿಯಾದ ತಿಂಡಿಗಳ ಜೊತೆ ಈ ಹೋಟೆಲ್ ಬಟನ್ ಇಡ್ಲಿ, ಮಸಾಲೆ ದೋಸೆಗೆ ಹೆಸರಾಗಿತ್ತು.

ಮಲ್ಲೇಶ್ವರದ ಸಂಪಿಗೆ ಚಿತ್ರಮಂದಿರ ಎದುರಿನ ‘ನ್ಯೂ ಕೃಷ್ಣ ಭವನ್‌’ ಮುಚ್ಚುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಈಗ  ಚರ್ಚೆಯಾಗುತ್ತಿದೆ. 

‘1974ರಲ್ಲಿ ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ, ಇದೇ ಹೋಟೆಲ್‌ನಲ್ಲೇ ತಿಂಡಿ ತಿಂದಿದ್ದು. ಬಟನ್‌ ಇಡ್ಲಿ–ಸಾಂಬಾರ್ ರುಚಿ ಅದ್ಭುತವಾಗಿತ್ತು‘ ಎಂದು ಒಬ್ಬರು ಸ್ಮರಿಸಿಕೊಂಡರೆ, ‘ಈ ಹೋಟೆಲ್‌ನ ಕಾಫಿ ರುಚಿಯ ಸ್ವಾದವೇ ಚಂದ‘ ಎಂದು ಮತ್ತೊಬ್ಬರು ನೆನಪಿಸಿಕೊಂಡಿದ್ದಾರೆ. ಕೆಲವರು ಹೋಟೆಲ್‌ ಸಿಬ್ಬಂದಿಯೊಂದಿಗಿನ ಒಡನಾಟವನ್ನೂ ಮೆಲುಕು ಹಾಕಿದ್ದಾರೆ.

ADVERTISEMENT

ಮಲ್ಲೇಶ್ವರದ ಅತ್ಯಂತ ಹಳೆಯ ಹೋಟೆಲ್‌ಗಳಲ್ಲಿ ನ್ಯೂ ಕೃಷ್ಣಭವನ್ ಕೂಡ ಒಂದು. 1954 ರಲ್ಲಿ ಗೋಪಿನಾಥ ಪ್ರಭು ಅವರು ಈ ಹೋಟೆಲ್ ಆರಂಭಿಸಿದರು. ಈ ಹೋಟೆಲ್‌ನಲ್ಲಿ ಬಟನ್ ಇಡ್ಲಿ, ಮಂಗಳೂರು ನೀರು ದೋಸೆ, ಸೇಲಂ ಸಾಂಬಾರ ವಡ, ಗ್ರೀನ್‌ ಮಸಾಲಾ ಇಡ್ಲಿ, ಉಡುಪಿ ಬನ್ಸ್ ಮತ್ತು ಉಡುಪಿ ಗುಳಿಯಪ್ಪ, ಮಂಡ್ಯ ರಾಗಿ ದೋಸೆ, ಓಪನ್ ಬಟರ್ ಮಸಾಲೆ ದೋಸೆ ಬಹಳ ಹೆಸರುವಾಸಿ.

ಆರಂಭದಲ್ಲಿ ಹೋಟೆಲ್‌ ಜೊತೆಗೆ ಲಾಡ್ಜ್‌ ಕೂಡ ಇತ್ತು. ವೈದ್ಯರು, ಜ್ಯೋತಿಷಿಗಳು ಇಲ್ಲಿನ ಕಾಯಂ ಗ್ರಾಹಕರು. ಇವರೆಲ್ಲ ಈ‌ ಲಾಡ್ಜ್‌ನಲ್ಲೇ ಕನ್ಸಲ್ಟೇಷನ್ ಮಾಡುತ್ತಿದ್ದರು‘ ಎಂದು ನೆನಪಿಸಿಕೊಳ್ಳುತ್ತಾರೆ ಮಲ್ಲೇಶ್ವರಂ ಸ್ವಾಭಿಮಾನ್ ಇನಿಶಿಯೇಟಿವ್‌ನ ಕಾರ್ಯದರ್ಶಿ ವಿ.ಆರ್. ಮಹೇಶ್.

ನ್ಯೂ ಕೃಷ್ಣಭವನ್‌ ‘ಶೂನ್ಯ ತ್ಯಾಜ್ಯ’ ಪರಿಕಲ್ಪನೆಯನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಳಿಸಿದ ಮೊದಲ ಹೋಟೆಲ್‌ ಎಂದು ವಿದ್ಯಾರ್ಥಿ ಭವನದ ಮ್ಯಾನೇಜಿಂಗ್ ಪಾರ್ಟನರ್‌ ಅರುಣ್ ಅಡಿಗ ನೆನಪಿಸಿಕೊಳ್ಳುತ್ತಾರೆ.

‘ಆಗ ಬೆಂಗಳೂರಿನ ಪ್ರಮುಖ ಭಾಗವಾಗಿದ್ದ ಇಲ್ಲಿ ದಕ್ಷಿಣ ಭಾರತ ಶೈಲಿಯ ಊಟವನ್ನು ಗ್ರಾಹಕರಿಗೆ ಬಡಿಸುತ್ತಿದ್ದ ಮೊದಲ ಹೋಟೆಲ್ ಇದಾಗಿತ್ತು’ ಎಂದು ನೆನಪಿಸುತ್ತಾರೆ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.