ADVERTISEMENT

12 ಗಂಟೆ ವ್ಯಾಸಂಗ: ಕೊಟ್ಟಿತು ಫಲ

ಕಾಮೆಡ್‌ ಕೆ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್‌ ಅಭಿಮತ: ದೀಕ್ಷಾ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 27 ಮೇ 2019, 19:44 IST
Last Updated 27 ಮೇ 2019, 19:44 IST
   

ಬೆಂಗಳೂರು: ‘ಪ್ರತಿದಿನ ಸುಮಾರು 12 ಗಂಟೆಯಷ್ಟು ಹೊತ್ತು ವ್ಯಾಸಂಗದಲ್ಲಿ ತಲ್ಲೀನನಾಗಿರುತ್ತಿದ್ದೆ. ಎರಡು ವರ್ಷಗಳಿಂದ ಮೊಬೈಲ್‌ ಪೋನ್‌ ದೂರವೇ ಇಟ್ಟಿದ್ದೆ. ಏನೋ ಸಾಧಿಸಬೇಕು ಎಂಬ ಕನಸು ಕಂಡು ಓದಿದ್ದಕ್ಕೆ ಇಂದು ಫಲ ದೊರೆತಿದೆ...’

ಕಾಮೆಡ್‌ ಕೆ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್‌ ಆಗಿರುವ ರಿಷಬ್‌ ಅಡಿಗ ‘ಪ್ರಜಾವಾಣಿ’ಯೊಂದಿಗೆ ಖುಷಿ ಹಂಚಿಕೊಂಡಾಗ ಆಡಿದ ಮಾತುಗಳಿವು.

‘ನಾನು ಜೆಇಇ ಮೈನ್‌ ಪರೀಕ್ಷೆಗೆ ಸೋಮವಾರ ಹಾಜರಾಗಿದ್ದೇನೆ. ಅಲ್ಲೂ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ. ಹೀಗಾಗಿ ಐಐಟಿ ಮದ್ರಾಸ್‌ ಅಥವಾ ಎಂಐಟಿ ಪ್ರವೇಶ ಸಿಗಬಹುದು. ಪಿಲಾನಿಯ ಬಿಟ್ಸ್‌ ಸಂಸ್ಥೆಯನ್ನು ಸೇರಿಕೊಳ್ಳುವ ಬಯಕೆಯೂ ಇದೆ. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಮುಂದೆ ಹೆಚ್ಚಿನ ಅಧ್ಯಯನ ನಡೆಸಬೇಕೆಂದಿರುವೆ’ ಎಂದು ಅವರು ಹೇಳಿದರು.

ADVERTISEMENT

‘ದೀಕ್ಷಾ ಶಿಕ್ಷಣ ಸಂಸ್ಥೆ ನನ್ನಂತೆ ಮೂವರು ಟಾಪರ್‌ಗಳನ್ನು ರೂಪಿಸಿಕೊಟ್ಟಿದೆ’ ಎಂದು ಅವರು ಹೆಮ್ಮೆಯಿಂದ ಹೇಳಿದರು.

ರಾಜ್ಯಕ್ಕೆ ಎರಡನೇ ಟಾಪರ್‌ ಆಗಿರುವ ಗಗನ್‌ ಹೆಗಡೆ, ಮೂರನೇ ಟಾಪರ್‌ ಎಂ.ಅಲೋಕ್‌ ಕೃಷ್ಣ ಹಾಗೂ ನಾಲ್ಕನೇ ಟಾಪರ್‌ ಆಗಿರುವ ರಕ್ಷಿತ್‌ ಪಿ. ಅವರೂ ಸಹ ‘ಪ್ರಜಾವಾಣಿ’ ಜತೆಗೆ ತಮ್ಮ ಅನುಭವ ಹಂಚಿಕೊಂಡರು. ಈ ಪೈಕಿ ಅಲೋಕ್‌ ಕೃಷ್ಣ ಅವರು ಶ್ರೀ ಚೈತನ್ಯ ಸಂಸ್ಥೆಯಲ್ಲಿ ಪಿಯು ವ್ಯಾಸಂಗ ಮಾಡಿದವರು.

‘ನನಗೆ ಪಿಯು ಪರೀಕ್ಷೆಯ ಫಲಿತಾಂಶ ಬಂದಾಗ ಅಚ್ಚರಿ ಕಾದಿತ್ತು. ನನಗೆ ಕೇವಲ ಶೇ 84ರಷ್ಟು ಅಂಕ ಬಂದಿತ್ತು. ನಾನು ಪರೀಕ್ಷೆ ಬರೆದುದರಿಂದ ನನಗೆ ಹೆಚ್ಚಿನ ಅಂಕ ಸಿಕ್ಕೇ ಸಿಗಬೇಕಿತ್ತು. ಆದರೆ, ಮರು ಮೌಲ್ಯಮಾಪನಕ್ಕೆ ಸ್ಕ್ಯಾನ್ಡ್‌ ಕಾಪಿಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ನನಗಿರಲಿಲ್ಲ. ವಿಷಯ ಗೊತ್ತಾದಾಗ ಸಮಯ ಮೀರಿತ್ತು. ಆದರೆ, ನನಗೆ ಬೇಸರವಿಲ್ಲ. ನನಗೆ ಪಿಲಾನಿಯ ‘ಬಿಟ್ಸ್‌’ ಸಹಿತ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಸಿಗುವ ಅವಕಾಶ ಇದ್ದೇ ಇದೆ’ ಎಂದು ಗಗನ್‌ ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.