ADVERTISEMENT

ಸಮುದಾಯ ಸಾಂಸ್ಕೃತಿಕ ಸಂಘಟನೆಗೆ ಸುವರ್ಣ ಸಂಭ್ರಮ: ಹೋರಾಟದ ಹಾದಿಯ ಅವಲೋಕನ

ಸಮುದಾಯ ಸಾಂಸ್ಕೃತಿಕ ಸಂಘಟನೆ ಹಮ್ಮಿಕೊಂಡಿದ್ದ ‘ಮನುಷ್ಯತ್ವದೆಡೆಗೆ ಸಮುದಾಯ 50’ ಜಾಥಾಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 16:02 IST
Last Updated 24 ಆಗಸ್ಟ್ 2025, 16:02 IST
<div class="paragraphs"><p>ಕೌದಿ ಎಳೆಯುವ ಮೂಲಕ ಬರಗೂರು ರಾಮಚಂದ್ರಪ್ಪ ಅವರು ಸಮಾರಂಭ ಉದ್ಘಾಟಿಸಿದರು. ಎಚ್. ಜನಾರ್ದನ್, ಎಚ್.ಎನ್. ನಾಗಮೋಹನದಾಸ್, ರಂಗಕರ್ಮಿ ಪ್ರಸನ್ನ, ಅಗ್ರಹಾರ ಕೃಷ್ಣಮೂರ್ತಿ, ಸಾಹಿತಿ&nbsp;ಬಂಜಗೆರೆ ಜಯಪ್ರಕಾಶ್, ವಿಜಯಾ ಮತ್ತು ಸಮುದಾಯ ಸಂಘಟನೆಯ ರಾಜ್ಯ ಸಂಚಾಲಕ ರವೀಂದ್ರನಾಥ್ ಸಿರಿವರ ಉಪಸ್ಥಿತರಿದ್ದರು</p></div>

ಕೌದಿ ಎಳೆಯುವ ಮೂಲಕ ಬರಗೂರು ರಾಮಚಂದ್ರಪ್ಪ ಅವರು ಸಮಾರಂಭ ಉದ್ಘಾಟಿಸಿದರು. ಎಚ್. ಜನಾರ್ದನ್, ಎಚ್.ಎನ್. ನಾಗಮೋಹನದಾಸ್, ರಂಗಕರ್ಮಿ ಪ್ರಸನ್ನ, ಅಗ್ರಹಾರ ಕೃಷ್ಣಮೂರ್ತಿ, ಸಾಹಿತಿ ಬಂಜಗೆರೆ ಜಯಪ್ರಕಾಶ್, ವಿಜಯಾ ಮತ್ತು ಸಮುದಾಯ ಸಂಘಟನೆಯ ರಾಜ್ಯ ಸಂಚಾಲಕ ರವೀಂದ್ರನಾಥ್ ಸಿರಿವರ ಉಪಸ್ಥಿತರಿದ್ದರು

   

ಪ್ರಜಾವಾಣಿ ಚಿತ್ರ 

ಬೆಂಗಳೂರು: ಸಮುದಾಯ ಸಾಂಸ್ಕೃತಿಕ ಸಂಘಟನೆಯ ಸುವರ್ಣ ಸಂಭ್ರಮದ ಸಮಾರಂಭವು, ಸಂಘಟನೆಯ ಹೋರಾಟದ ಹಾದಿಯ ಅವಲೋಕನದ ಜತೆಗೆ ಪ್ರಸ್ತುತ ಸಂದರ್ಭದಲ್ಲಿ ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚಿಂತನ ಮಂಥನಕ್ಕೆ ವೇದಿಕೆ ಕಲ್ಪಿಸಿತು.

ADVERTISEMENT

ಸಂಘಟನೆಯು 50 ವರ್ಷಗಳ ಪಯಣದ ಪ್ರಯುಕ್ತ ‘ಮನುಷ್ಯತ್ವದೆಡೆಗೆ ಸಮುದಾಯ 50’ ಜಾಥಾ ಹಮ್ಮಿಕೊಂಡಿದೆ. ಸುವರ್ಣ ಸಂಭ್ರಮದ ಪ್ರಯುಕ್ತ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಈ ಜಾಥಾಕ್ಕೆ ಚಾಲನೆ ನೀಡಿದರು. ಈ ಜಾಥಾ ಕಾರ್ಯಕ್ರಮ ರಾಜ್ಯದಾದ್ಯಂತ ವರ್ಷಪೂರ್ತಿ ನಡೆಯಲಿದೆ.

ಮೂರು ಕಿರು ವೇದಿಕೆಗಳಲ್ಲಿ ಜನಾರ್ದನ (ಜನ್ನಿ), ಜೋಗಿಲ ಸಿದ್ದರಾಜು ಮತ್ತು ಸಿ.ಎಂ. ನರಸಿಂಹಮೂರ್ತಿ ಅವರು ಸಂವೇದನಾ ಗೀತೆಗಳನ್ನು ಹಾಡಿದರೆ, ಸಮುದಾಯ 50 ಜಾಥಾ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅವರು ಸಮುದಾಯ ಸಂಘಟನೆ ನಡೆದು ಬಂದ ಹಾದಿಯನ್ನು ವಿವರಿಸಿದರು. 

ಕೌದಿ ಎಳೆಯುವ ಮೂಲಕ ಸಮಾರಂಭ ಉದ್ಘಾಟಿಸಿದ ಬರಗೂರು ರಾಮಚಂದ್ರಪ್ಪ, ‘ರೋಚಕತೆ, ರೋಮಾಂಚನ ಉಂಟು ಮಾಡುತ್ತಿದ್ದ ಕಾಲದಲ್ಲಿ ಸೈದ್ಧಾಂತಿಕ ಸಂಚಲನವನ್ನು ಉಂಟುಮಾಡಿದ ಹೆಮ್ಮೆ ಸಮುದಾಯ ಸಂಘಟನೆಯದ್ದಾಗಿದೆ. ಇದು ಆದ್ಯತೆಗಳು ಪಲ್ಲಟವಾಗುತ್ತಿರುವ, ಸಂಘಟನೆಗಳು ವಿಘಟನೆಗೊಂಡಿರುವ ಕಾಲವಾಗಿದೆ. ಇಂತಹ ಸಂದರ್ಭದಲ್ಲಿ ಸಮುದಾಯ ಸಂಘಟನೆ ಏಳು ಬೀಳುಗಳನ್ನು ಕಂಡರೂ ಸ್ಪಷ್ಟ ಸೈದ್ಧಾಂತಿಕತೆಯನ್ನು ಜತನವಾಗಿ ಕಾಪಾಡಿಕೊಂಡಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಸಾಮಾಜಿಕ ಶ್ರೇಣೀಕರಣ, ಧಾರ್ಮಿಕ ಧ್ರುವೀಕರಣ ಹಾಗೂ ಆರ್ಥಿಕ ಕೇಂದ್ರೀಕರಣದ ಕಾಲ ಇದಾಗಿದೆ. ಮಾನವೀಯತೆಯ ಜಾಗದಲ್ಲಿ ಮತೀಯತೆ ಹಾಗೂ ಮಠೀಯತೆ ಆಕ್ರಮಿಸಿಕೊಂಡಿದೆ. ಮನುಷ್ಯತ್ವದ ಮೌಲ್ಯದ ಮೇಲೆ ಅತ್ಯಾಚಾರ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಮನುಷ್ಯತ್ವದ ಎರಡು ಕಣ್ಣುಗಳಾದ ಸೌಹಾರ್ದ ಹಾಗೂ ಸಮಾನತೆಯನ್ನು ಕಾಪಾಡಬೇಕಿದೆ’ ಎಂದು ಹೇಳಿದರು.

ಸಮುದಾಯ 50ರ ಗೌರವಾಧ್ಯಕ್ಷರೂ ಆಗಿರುವ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್, ‘ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ನಮ್ಮ ರಾಜ್ಯದಲ್ಲಿ ಸೌಹಾರ್ದ ವಾತಾವರಣ ನೆಲೆಸುವ ನಿಟ್ಟಿನಲ್ಲಿ ಸಮುದಾಯ ಕೊಟ್ಟ ಕೊಡುಗೆ ಅಪಾರ. ಇಂತಹ ಸಾಂಸ್ಕೃತಿಕ ಎಚ್ಚರದ ಸಂಘಟನೆಯೊಂದಿಗೆ ಎಲ್ಲರೂ ಕೈ ಜೋಡಿಸಬೇಕು’ ಎಂದರು.

ಈ ಸುವರ್ಣ ಸಂಭ್ರಮದ ಭಾಗವಾಗಿ ಬೆಳಿಗ್ಗೆ ‘ಮನುಷ್ಯತ್ವದೆಡೆಗೆ ಸಮುದಾಯ’ ಕಲಾ ಶಿಬಿರ ನಡೆಯಿತು. ಇದನ್ನು ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷ ಪ.ಸ. ಕುಮಾರ್ ಉದ್ಘಾಟಿಸಿದರು. ಈ ಶಿಬಿರದಲ್ಲಿ ರಚಿಸಲಾದ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.