ಸಚಿವ ಕೆ.ಎನ್.ರಾಜಣ್ಣ ಅವರು ಶ್ರೀವಾಲ್ಮಿಕಿ ಜನಕಲ್ಯಾಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟಿಸಿದರು.
ಕೆ.ಆರ್.ಪುರ: ‘ಯಾವುದೇ ಸಮುದಾಯ ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಆ ಸಮುದಾಯದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗಬೇಕು’ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಕೆ.ಆರ್.ಪುರದಲ್ಲಿ ಶ್ರೀ ವಾಲ್ಮೀಕಿ ಜನಕಲ್ಯಾಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸಂಘಟನೆಗೆ ಹೆಚ್ಚು ಒತ್ತು ನೀಡಿದರೆ ಸಮುದಾಯ ಅಭಿವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು’ ಎಂದರು.
‘ಸಹಕಾರ ಬ್ಯಾಂಕ್ ಸ್ಥಾಪಿಸುವುದು ಸುಲಭ. ಆದರೆ, ಅದನ್ನು ಮುನ್ನಡೆಸಿಕೊಂಡು ಹೋಗುವುದೇ ದೊಡ್ಡ ಸವಾಲು’ ಎಂದು ಹೇಳಿದರು.
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ‘ಒಳ್ಳೆಯ ಉದ್ದೇಶಕ್ಕಾಗಿ ಸಹಕಾರ ಸಂಘ ಸ್ಥಾಪನೆ ಮಾಡಿದ್ದೀರಿ. ಈ ಸಹಕಾರ ಬೆಂಗಳೂರಿಗೆ ಸೀಮಿತವಾಗದೆ, ಉತ್ತರ ಕರ್ನಾಟಕಕ್ಕೂ ವಿಸ್ತರಣೆಯಾಗಲಿ. ಆ ಭಾಗದ ಜನರಿಗೆ ಸಹಕಾರ ಸಂಘದ ಲಾಭ ಸಿಗಲಿ’ ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಬೈರತಿ ಬಸವರಾಜ, ಸೊಸೈಟಿ ಉಪಾಧ್ಯಕ್ಷ ಅರ್ಜುನ್ ನಾಗೇಂದ್ರ, ಎಲ್.ಮುನಿಸ್ವಾಮಿ, ಜಿ.ಕೆ.ನಾಗೇಶ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.