ADVERTISEMENT

ಲಕ್ಷಾಂತರ ರೂಪಾಯಿ ವಂಚನೆ: ’ಟ್ರಿಲಿಯನೇರ್ ಮೈಂಡ್ಜ್‌’ ಸಂಸ್ಥಾಪಕ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜನವರಿ 2021, 17:44 IST
Last Updated 8 ಜನವರಿ 2021, 17:44 IST
ಸಂದೇಶ್ ಕುಮಾರ್ ಶೆಟ್ಟಿ
ಸಂದೇಶ್ ಕುಮಾರ್ ಶೆಟ್ಟಿ    

ಬೆಂಗಳೂರು: ಉತ್ಪನ್ನ ಮಾರಾಟದಿಂದ ಅಧಿಕ ಲಾಭ ಬರುವುದಾಗಿ ಆಮಿಷವೊಡ್ಡಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ಆರೋಪದಡಿ ಸಂದೇಶ್ ಕುಮಾರ್ ಶೆಟ್ಟಿ ಎಂಬುವರನ್ನು ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಸಂದೇಶ್, ಟ್ರಿಲಿಯನೇರ್ ಮೈಂಡ್ಜ್‌ ಹೆಸರಿನ ಕಂಪನಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ. ಜನರಿಂದ ಹಣ ಪಡೆದು ಪರಾರಿಯಾಗಿದ್ದ ಅವರನ್ನು ಶುಕ್ರವಾರ ನಗರದಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿರುವ ಕಂಪನಿ ಕಚೇರಿಗೂ ಹೋಗಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅವುಗಳನ್ನು ಪರಿಶೀಲನೆ ಮಾಡಲಾಗುತ್ತಿದೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

ಸಾವಿರಾರು ಜನರಿಗೆ ವಂಚನೆ: ‘2018ರಲ್ಲಿ ಕಂಪನಿ ಸ್ಥಾಪಿಸಿದ್ದ ಸಂದೇಶ್, ಚೈನ್ ಲಿಂಕ್ ಮೂಲಕ ಉತ್ಪನ್ನಗಳ ಮಾರಾಟ ಮಾಡುವ ಯೋಜನೆ ರೂಪಿಸಿದ್ದರು. ಉತ್ಪನ್ನಗಳನ್ನು ಖರೀದಿಸಿ, ಪರಿಚಯಸ್ಥರು ಹಾಗೂ ಸ್ನೇಹಿತರಿಗೆ ಮಾರಾಟ ಮಾಡಿದರೆ ಅಧಿಕ ಲಾಭ ನೀಡುವುದಾಗಿಯೂ ಘೋಷಿಸಿದ್ದರು. ಒಬ್ಬರಿಂದ ಒಬ್ಬರಿಗೆ ಮಾರಾಟ ಮಾಡುತ್ತ ಹೋದರೆ, ಕಮಿಷನ್ ರೂಪದಲ್ಲಿ ಮತ್ತಷ್ಟು ಲಾಭ ಬರುವುದಾಗಿಯೂ ಹೇಳಿದ್ದರು. ಅದನ್ನು ನಂಬಿದ್ದ ಸಾವಿರಾರು ಮಂದಿ ಹಣ ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಹಣ ಪಡೆದಿದ್ದ ಆರೋಪಿ, ಹಲವರಿಗೆ ಯಾವುದೇ ಉತ್ಪನ್ನ ನೀಡಿರಲಿಲ್ಲ. ಹಣವನ್ನೂ ವಾಪಸು ಕೊಟ್ಟಿರಲಿಲ್ಲ. ಇದರ ನಡುವೆ ಕಂಪನಿ ಕಚೇರಿ ಬಂದ್ ಮಾಡಿಕೊಂಡು ಆರೋಪಿ ತಲೆಮರೆಸಿಕೊಂಡಿದ್ದರು. ನೊಂದವರು ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.