ADVERTISEMENT

ಲೋಕೋಪಯೋಗಿ ದಾಖಲೆ, ಕಂಪ್ಯೂಟರ್ ಕಳ್ಳತನ

ತುರ್ತು ನಿರ್ಗಮನದಿಂದ ನುಗ್ಗಿ ಕೃತ್ಯ ಎಸಗಿರುವ ಕಳ್ಳರು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2022, 20:24 IST
Last Updated 15 ಡಿಸೆಂಬರ್ 2022, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು:‌ ವಿಧಾನಸೌಧ ಸಮೀಪದ ವಿಶ್ವೇಶ್ವರಯ್ಯ ಗೋಪುರದಲ್ಲಿರುವ (ವಿ.ವಿ.ಟವರ್) ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಕಳ್ಳತನವಾಗಿದ್ದು, ಕೆಲ ದಾಖಲೆ ಹಾಗೂ ಕಂಪ್ಯೂಟರ್‌ಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

‘ಲೋಕೋಪಯೋಗಿ ಇಲಾಖೆ ಕಟ್ಟಡಗಳ ಉಪವಿಭಾಗದ ನಂ. 1ರ ಕಚೇರಿಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬಿ. ಅನಂತ್ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ವಿಧಾನಸೌಧ ಪೊಲೀಸ್ ಮೂಲಗಳು ಹೇಳಿವೆ.

‘ಡಿ. 10ರಂದು ಎರಡನೇ ಶನಿವಾರ ಹಾಗೂ ಡಿ. 11ರಂದು ಭಾನುವಾರ ರಜೆ ಇತ್ತು. ವಿಶ್ವೇಶ್ವರಯ್ಯ ಗೋಪುರದ ನೆಲಮಹಡಿ
ಯಲ್ಲಿರುವ ಕಚೇರಿಗೆ ಶುಕ್ರವಾರ ಸಂಜೆಯೇ ಸಿಬ್ಬಂದಿ ಬೀಗ ಹಾಕಿಕೊಂಡು ಹೋಗಿದ್ದರು. ಡಿ. 12ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಎಂದಿನಂತೆ ಕಚೇರಿ ಬೀಗ ತೆಗೆಯಲು ಸಿಬ್ಬಂದಿ ಹೋಗಿದ್ದಾಗ ಕಳ್ಳತನ ಗಮನಕ್ಕೆ ಬಂದಿತ್ತು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ತುರ್ತು ನಿರ್ಗಮನದಿಂದ ನುಗ್ಗಿದ್ದ ಕಳ್ಳರು: ‘ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದ ವೇಳೆ ತುರ್ತು ನಿರ್ಗಮನಕ್ಕೆಂದು ಪ್ರತ್ಯೇಕ ಗಾಜಿನ ಬಾಗಿಲು ಇದೆ. ಇದೇ ಗಾಜಿನ
ಬಾಗಿಲು ಒಡೆದು ಕಳ್ಳರು ಒಳನುಗ್ಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕಚೇರಿಯ ಮೂರು ಮರದ ಕಬೋರ್ಡ್‌ಗಳ ಬಾಗಿಲು ತೆರೆದು, ಹಲವು ದಾಖಲೆಗಳನ್ನು ಚಿಲ್ಲಾಪಿಲ್ಲಿ ಮಾಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಕೆಲ ದಾಖಲೆ, ಮೂರು ಮಾನಿಟರ್ ಹಾಗೂ ಒಂದು ಸಿಪಿಯು ಕದ್ದುಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಮಾಹಿತಿ ಬರುತ್ತಿದ್ದಂತೆ
ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಜೊತೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ಕಚೇರಿಯಲ್ಲಿ ಕೆಲಸ
ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೇಳಿಕೆ ಸಹ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಯಾವ ದಾಖಲೆಗಳು ಕಳ್ಳತನವಾಗಿವೆ ಹಾಗೂ ಕಳ್ಳತನವಾಗಿರುವ ಸಿಪಿಯುನಲ್ಲಿ ಯಾವೆಲ್ಲ ದತ್ತಾಂಶವಿತ್ತು ಎಂಬುದನ್ನು ಅಧಿಕಾರಿಗಳಿಂದ ತಿಳಿದುಕೊಳ್ಳಬೇಕಿದೆ. ತುರ್ತು ನಿರ್ಗಮನ ಬಾಗಿಲು ಬಗ್ಗೆ ತಿಳಿದಿರುವ ವ್ಯಕ್ತಿಗಳೇ ಕೃತ್ಯ ಎಸಗಿರುವ ಅನುಮಾನವಿದೆ. ಇದು ಹೊರಗಿನವರ ಕೃತ್ಯವೋ ಅಥವಾ ಒಳಗಿನವರು ಯಾರಾದರೂ ಭಾಗಿಯಾಗಿದ್ದಾರೋ ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.