ಬೆಂಗಳೂರು: ಸಾರಿಗೆ ನಿಗಮಗಳ ನೌಕರರು ದಕ್ಷತೆಯಿಂದ ಮತ್ತು ಮಾನವೀಯವಾಗಿ ಕೆಲಸ ಮಾಡಲು ಬೇಕಾದ ಸೌಕರ್ಯ ಒದಗಿಸಲು, ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಆ್ಯಂಡ್ ವರ್ಕರ್ಸ್ ಫೆಡರೇಶನ್ ಬೇಸರ ವ್ಯಕ್ತಪಡಿಸಿದೆ.
ಕೆಎಸ್‌ಆರ್‌ಟಿಸಿ ತನ್ನ 66 ವರ್ಷಗಳ ಸುದೀರ್ಘ ಪ್ರಯಾಣದಲ್ಲಿ ಅನೇಕ ಸಾಧನೆಗಳನ್ನು ಮಾಡಿದೆ. ಜೊತೆ ಜೊತೆಗೆ ಏಳುಬೀಳುಗಳನ್ನು ಕಂಡಿದೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳೆಯರು ಆರ್ಥಿಕ ಹೊರೆ ಇಲ್ಲದೇ 400 ಕೋಟಿ ಬಾರಿ ಪ್ರಯಾಣಿಸಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಉಳಿದವರೂ ಹೊರ ಬರುವಂತೆ ಮಾಡಿದೆ. ಸರ್ಕಾರವನ್ನು ಹೊರತುಪಡಿಸಿದರೆ ಅತಿ ಹೆಚ್ಚು ಉದ್ಯೋಗವನ್ನು ಸಾರಿಗೆ ನಿಗಮಗಳು ನೀಡಿವೆ. ಆದರೆ, ನೌಕರ ವರ್ಗಗಳಲ್ಲಿ ಸಮಾಧಾನ ತರುವ ಕೆಲಸವಾಗಿಲ್ಲ ಎಂದು ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ನಿಗಮಗಳ ಕಾರ್ಯಕ್ಷಮತೆ, ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಲವು ಸಮಿತಿಗಳು ರಚನೆಯಾಗಿ ಅನೇಕ ವರದಿ, ಶಿಫಾರಸುಗಳನ್ನು ನೀಡಿದ್ದರೂ ಅವುಗಳು ಜಾರಿಯಾಗಿಲ್ಲ. ಸಂಸ್ಥೆ ನಮ್ಮದು ಎಂಬ ಪ್ರಜ್ಞೆಯಿಂದ ಕೆಲಸ ಮಾಡುವ ಪ್ರಯತ್ನಗಳಾಗಿಲ್ಲ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.