ಬೆಂಗಳೂರು: ಹಣ ವಾಪಸ್ ನೀಡುವಂತೆ ರಿಯಲ್ ಎಸ್ಟೇಟ್ ಕಂಪನಿ ‘ಕಾನ್ಫಿಡೆಂಟ್ ಗ್ರೂಪ್’ನ ಮುಖ್ಯಸ್ಥ ಸಿ.ಜೆ.ರಾಯ್ ಅವರ ಮೇಲೆ ಹೂಡಿಕೆದಾರರು ಒತ್ತಡ ಹೇರಿದ್ದರೇ ಎಂಬ ಅನುಮಾನ ವ್ಯಕ್ತವಾಗಿದ್ದು, ಆ ಆಯಾಮದಲ್ಲೂ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
‘ಹೂಡಿಕೆದಾರರು ಪದೇ ಪದೇ ಒತ್ತಡ ಹೇರಿದ್ದರಿಂದ ರಾಯ್ ಅವರು ಆತಂಕಕ್ಕೆ ಒಳಗಾಗಿದ್ದರು. ಇದೇ ವಿಚಾರದಿಂದ ರಾಯ್ ಅವರು ವಿಚಲಿತರಾಗಿದ್ದರು. ಆ ನಿಟ್ಟಿನಲ್ಲೂ ತನಿಖೆ ನಡೆಸಲಾಗುತ್ತಿದೆ. ಆದರೆ, ಅವರ ಆತ್ಮಹತ್ಯೆಗೆ ಕಾರಣ ನಿಗೂಢವಾಗಿದ್ದು, ತನಿಖೆ ನಡೆಯುತ್ತಿದೆ’ ಎಂದು ಎಸ್‌ಐಟಿ ಪೊಲೀಸರು ಹೇಳಿದರು.
ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ‘ಕಾನ್ಫಿಡೆಂಟ್ ಗ್ರೂಪ್’ನ ತಮ್ಮ ಕಚೇರಿಯಲ್ಲಿ ಜ.30ರಂದು ರಾಯ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ತನಿಖೆಗೆ ಪಶ್ಚಿಮ ವಲಯದ ಜಂಟಿ ಪೊಲೀಸ್ ಕಮಿಷನರ್ ಸಿ.ವಂಶಿಕೃಷ್ಣ ನೇತೃತ್ವದಲ್ಲಿ ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಎಸ್‌ಐಟಿ ರಚಿಸಿದ್ದು ತನಿಖೆ ನಡೆಯುತ್ತಿದೆ.
‘ರಾಯ್ ಅವರು ಬೆಂಗಳೂರು, ಕೋಲಾರ, ಕೇರಳ ಹಾಗೂ ದುಬೈನಲ್ಲಿ ರಿಯಲ್ ಎಸ್ಟೇಟ್, ರೆಸಾರ್ಟ್, ಹೋಟೆಲ್, ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದರು. ಕೇರಳದಲ್ಲಿ ಇತ್ತೀಚೆಗೆ ಕೆಲವು ಯೋಜನೆಗಳನ್ನು ಆರಂಭಿಸಿದ್ದರು. ರಾಯ್ ಅವರ ಯೋಜನೆಗಳಿಗೆ ರಾಜಕಾರಣಿಗಳು, ಸಿನಿಮಾ ಕ್ಷೇತ್ರದ ಗಣ್ಯರು ಹಾಗೂ ನಟ–ನಟಿಯರು ಹೂಡಿಕೆ ಮಾಡಿದ್ದರು. ಹೂಡಿಕೆದಾರರ ಪೈಕಿ ಕೆಲವು ರಾಜಕಾರಣಿಗಳು ಹಣ ವಾಪಸ್ ನೀಡುವಂತೆ ರಾಯ್ ಮೇಲೆ ಒತ್ತಡ ಹೇರುತ್ತಿದ್ದರು. ಹಣ ಹೊಂದಿಸುವ ಸವಾಲು ರಾಯ್ ಅವರಿಗೆ ಎದುರಾಗಿತ್ತು. ಒಮ್ಮೆಲೇ ದೊಡ್ಡ ಮೊತ್ತದ ಹಣ ಹೊಂದಿಸುವ ಒತ್ತಡದಲ್ಲಿ ರಾಯ್ ಇದ್ದರು ಎನ್ನಲಾಗಿದೆ. ಆ ನಿಟ್ಟಿನಲ್ಲೂ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
‘ತುರ್ತಾಗಿ ಹಣ ಹೊಂದಿಸುವ ಒತ್ತಡದಲ್ಲಿದ್ದರಿಂದ ರಾಯ್ ಅವರು ಮನೋವೈದ್ಯರನ್ನು ಆಗಾಗ್ಗೆ ಭೇಟಿ ಮಾಡುತ್ತಿದ್ದರು. ಜಯನಗರದ 8ನೇ ಬ್ಲಾಕ್‌ನಲ್ಲಿರುವ ಮನೋವೈದ್ಯಕೀಯ ಆಸ್ಪತ್ರೆಯ ಮನೋವೈದ್ಯರನ್ನು ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನ ಮೊದಲು ರಾಯ್ ಭೇಟಿ ಮಾಡಿ ಒತ್ತಡ ನಿವಾರಣೆ ಸಂಬಂಧ ಚಿಕಿತ್ಸೆ, ಕೌನ್ಸೆಲಿಂಗ್ ಪಡೆದುಕೊಂಡಿದ್ದರು. ಅವರು ಚಿಕಿತ್ಸೆ ಪಡೆದುಕೊಂಡಿದ್ದ ಮನೋವೈದ್ಯರಿಂದಲೂ ಮಾಹಿತಿ ಪಡೆದುಕೊಳ್ಳಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಸಾಲ ಪಡೆಯದೇ ಉದ್ಯಮ ನಡೆಸುತ್ತಿರುವುದಾಗಿ ಅನೇಕ ಸಂದರ್ಶನಗಳಲ್ಲಿ ರಾಯ್ ಹೇಳಿಕೊಂಡಿದ್ದರು. ಹಾಗಿದ್ದರೆ ಅಷ್ಟೊಂದು ದೊಡ್ಡ ಯೋಜನೆಗಳಿಗೆ ಹೇಗೆ ಹಣ ಹೊಂದಿಸುತ್ತಿದ್ದರು ಎಂಬ ಆಯಾಮದಲ್ಲಿಯೂ ತನಿಖೆ ಸಾಗುತ್ತಿದೆ’ ಎಂದು ಎಸ್‌ಐಟಿ ಮೂಲಗಳು ಹೇಳಿವೆ.
‘ಜಪ್ತಿ ಮಾಡಿರುವ ಎರಡೂ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರಾಯ್ ಅವರ ದೂರವಾಣಿ ಕರೆಗಳ ಮಾಹಿತಿ(ಸಿಡಿಆರ್) ಬಂದ ಮೇಲೆ ಅವರು ಯಾರೊಂದಿಗೆ ಹೆಚ್ಚು ಮಾತನಾಡಿದ್ದರು ಎಂಬುದೂ ಸೇರಿದಂತೆ ಹಲವು ಸಂಗತಿಗಳು ಬಯಲಾಗಲಿವೆ. ರಿಯಲ್ ಎಸ್ಟೇಟ್ ಉದ್ಯಮ, ವೈಯಕ್ತಿಕ ಜೀವನ ಹಾಗೂ ಆದಾಯ ತೆರಿಗೆ ಇಲಾಖೆಯ ದಾಳಿಯನ್ನು ಕೇಂದ್ರೀಕರಿಸಿ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಕಾರಣ ಪತ್ತೆ:
ಎಸ್ಐಟಿಗೂ ಸವಾಲು ‘ರಾಯ್ ಅವರು ಆತ್ಮಹತ್ಯೆ ಮಾಡಿಕೊಂಡು ಏಳು ದಿನಗಳು ಕಳೆದಿವೆ. ಆರು ದಿನಗಳಿಂದ ಎಸ್‌ಐಟಿ ತನಿಖೆ ನಡೆಸುತ್ತಿದೆ. ರಾಯ್ ಅವರ ಆತ್ಮಹತ್ಯೆಗೆ ಕಾರಣ ಪತ್ತೆಹಚ್ಚುವುದು ಎಸ್‌ಐಟಿಗೂ ಸವಾಲಾಗಿದೆ. ಕಾನ್ಫಿಡೆಂಟ್ ಗ್ರೂಪ್ ಕಚೇರಿ ಹಾಗೂ ಕಾನ್ರಾಡ್ ಹೋಟೆಲ್‌ನಲ್ಲಿ ಯಾವುದೇ ಮರಣ ಪತ್ರ ಸಿಕ್ಕಿಲ್ಲ. ಈಗ ಸಿಕ್ಕಿರುವ 2026ರ ಡೈರಿಯಲ್ಲಿ ಉದ್ಯಮಕ್ಕೆ ಸಂಬಂಧಿಸಿದ ಮಾಹಿತಿಯಷ್ಟೇ ಇದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.