ಬೆಂಗಳೂರು: ಹಿಂದುಳಿದ ವರ್ಗದ ಏಳಿಗೆಯನ್ನು ಕಾಂಗ್ರೆಸ್ ಎಂದಿಗೂ ಸಹಿಸಿಲ್ಲ. ಹಾಗಾಗಿ ಸ್ವತಂತ್ರ ಭಾರತದಲ್ಲಿ ಒಂದು ಬಾರಿಯೂ ಜಾತಿ ಗಣತಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಿಂದಾಗಿ ಮೊದಲ ಬಾರಿಗೆ ಜನಗಣತಿಯೊಂದಿಗೆ ಜಾತಿ ಗಣತಿಯೂ ಆಗಲಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಹೇಳಿದರು.
ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ಕರ್ನಾಟಕ ಶನಿವಾರ ಹಮ್ಮಿಕೊಂಡಿದ್ದ ‘ಜಾತಿ ಜನಗಣತಿ: ಹಿನ್ನೋಟ-ಮುನ್ನೋಟ’ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಬರುವವರೆಗೆ ಹಿಂದುಳಿದವರ ಪರ ಯಾವುದೇ ಕಾರ್ಯಕ್ರಮ ರೂಪಿಸಿರಲಿಲ್ಲ. ಜನತಾ ಸರ್ಕಾರ ಬಂದಾಗ 1979ರಲ್ಲಿ ಮಂಡಲ್ ಆಯೋಗ ರಚಿಸಲಾಯಿತು. ಒಂದೇ ವರ್ಷದಲ್ಲಿ ಆಯೋಗ ವರದಿ ನೀಡಿತು. ಆನಂತರ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಿಂದ 10 ವರ್ಷ ಮಂಡಲ್ ವರದಿಯನ್ನು ಕಾಲಡಿ ಹಾಕಿ ಕೂತಿತ್ತು. ಬಿಜೆಪಿ ಬೆಂಬಲದೊಂದಿಗೆ ವಿ.ಪಿ. ಸಿಂಗ್ ಪ್ರಧಾನಿಯಾದಾಗ 1990ರಲ್ಲಿ ವರದಿ ಜಾರಿಯಾಯಿತು. ಇದರ ವಿರುದ್ಧ ರಾಜೀವ್‌ಗಾಂಧಿ ಸಂಸತ್ತಿನಲ್ಲಿಯೇ ಹೇಳಿಕೆ ನೀಡಿದ್ದರು ಎಂದರು.
ಕಾಂಗ್ರೆಸ್ ಯಾವ ರಾಜ್ಯದಲ್ಲಿ ಆಡಳಿತದಲ್ಲಿ ಇಲ್ಲವೋ ಅಲ್ಲೆಲ್ಲ ಹಿಂದುಳಿದವರಿಗಾಗಿ ಯೋಜನೆಗಳನ್ನು ರೂಪಿಸಿದ್ದರು. ಕರ್ನಾಟಕದಲ್ಲಿ ಸಿದ್ದರಾಮಯ್ಯ ಜಾತಿ ಸಮೀಕ್ಷೆಯನ್ನು ಮಾಡಿಸಿದ್ದರೂ ಕುಟುಂಬ ಪರಿವಾರದ ಸೂಚನೆಯಂತೆ ಅವರೂ ಕಾಂಗ್ರೆಸ್‌ನ ಹಳೇ ಮಾದರಿಯನ್ನು ಮುಂದುವರಿಸಿದರು. ವರದಿ 10 ವರ್ಷ ನನೆಗುದಿಗೆ ಬಿತ್ತು. ಹಿಂದುಳಿದವರ ಅಭಿವೃದ್ಧಿಯಾಗಬೇಕಿದ್ದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬಾರದು ಎಂದು ಹೇಳಿದರು.
ಕಾಂಗ್ರೆಸ್ ಸಂವಿಧಾನದ ಬಗ್ಗೆ ಮಾತನಾಡುತ್ತದೆ. ಜೇಬಲ್ಲಿಯೂ ಇಟ್ಟುಕೊಳ್ಳುತ್ತದೆ. ಆದರೆ, ಸಂವಿಧಾನವನ್ನು ಜಾರಿ ಮಾಡುವುದಿಲ್ಲ. ನಮಗೆ ಸಂವಿಧಾನವೇ ಆತ್ಮ. ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಜನಗಣತಿಯೊಂದಿಗೆ ಜಾತಿ ಗಣತಿಯನ್ನು ಮಾಡಲಾಗುತ್ತಿದೆ ಎಂದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಕೆ. ಭಕ್ತವತ್ಸಲ ಮಾತನಾಡಿ, ‘ಸಮೀಕ್ಷೆ ವೈಜ್ಞಾನಿಕವಾಗಿ, ಸರಿಯಾಗಿ ನಡೆಯಬೇಕು. ಬಹಳಷ್ಟು ಬಾರಿ ಗಣತಿದಾರರು ಬಂದಾಗ ಮನೆಯ ಬಾಗಿಲೇ ತೆರೆಯುವುದಿಲ್ಲ. ಬಾಗಿಲು ತೆರೆದರೂ ಮಾಹಿತಿ ಕೊಡದೇ ವಾಪಸ್ ಕಳುಹಿಸುತ್ತಾರೆ. ಎಷ್ಟೋ ಸಮುದಾಯಗಳಿಗೆ ಇಂದಿಗೂ ಪ್ರಾತಿನಿಧ್ಯ ಸಿಕ್ಕಿಲ್ಲ. ಅದಕ್ಕಾಗಿ ಎಲ್ಲರೂ ಗಣತಿಯಲ್ಲಿ ಪಾಲ್ಗೊಂಡು ಸರಿಯಾದ ಮಾಹಿತಿ ನೀಡಬೇಕು. ಶಿಕ್ಷಣದಲ್ಲಿ ಮೀಸಲಾತಿ ಇದ್ದರೆ ಸಾಲದು, ಉದ್ಯೋಗದಲ್ಲಿಯೂ ಎಲ್ಲರಿಗೂ ಅವಕಾಶ ಸಿಗಬೇಕು’ ಎಂದು ಪ್ರತಿಪಾದಿಸಿದರು.
ವೇದಿಕೆಯ ಮುಖಂಡ ಕೆ. ಮುಕುಡಪ್ಪ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗದ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.
‘ರಾಜ್ಯದ ಜಾತಿವಾರು ಸಮೀಕ್ಷೆಗೆ ಮಾನ್ಯತೆ ಇಲ್ಲ’
‘ರಾಜ್ಯ ಸರ್ಕಾರದ ಸಮೀಕ್ಷೆಗೆ ಸಂವಿಧಾನದಲ್ಲಿ ಮಾನ್ಯತೆ ಇಲ್ಲ’ ಎಂದು ಭೂಪೇಂದರ್ ಯಾದವ್ ಹೇಳಿದರು. ಸಂವಾದದಲ್ಲಿ ಪ್ರೇಕ್ಷಕರೊಬ್ಬರು ರಾಜ್ಯ ಮೂರು ತಿಂಗಳಲ್ಲಿ ನಡೆಸಲಿರುವ ಜಾತಿವಾರು ಸಮೀಕ್ಷೆಗೂ ಜಾತಿ ಗಣತಿಗೂ ಏನು ವ್ಯತ್ಯಾಸ ಎಂದು ಕೇಳಿದಾಗ ಸಚಿವರು ಹೀಗೆ ಉತ್ತರಿಸಿದರು. ಎಲ್ಲ ಜಾತಿಗಳ ಅಂಕಿಸಂಖ್ಯೆ ಸಿಕ್ಕಿದ ಮೇಲೆ ಜನಸಂಖ್ಯೆವಾರು ಮೀಸಲಾತಿ ನೀಡುತ್ತೀರಾ ಎಂಬ ಪ್ರಶ್ನೆಗೆ ‘ಸಂವಿಧಾನದ ಆಧಾರದಲ್ಲಿಯೇ ಮೀಸಲಾತಿ ಇರುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.