ADVERTISEMENT

ಗ್ಯಾರಂಟಿ ಅನುಷ್ಠಾನದಲ್ಲಿ ಸರ್ಕಾರ ವಿಫಲ: ಎಚ್‌.ಡಿ. ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 15:42 IST
Last Updated 12 ನವೆಂಬರ್ 2023, 15:42 IST
<div class="paragraphs"><p>ಎಚ್‌.ಡಿ. ಕುಮಾರಸ್ವಾಮಿ</p></div>

ಎಚ್‌.ಡಿ. ಕುಮಾರಸ್ವಾಮಿ

   

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರ್ಕಾರವು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸಂಪೂರ್ಣ ವಿಫಲವಾಗಿದೆ. ಈಗ ಕಾಂಗ್ರೆಸ್‌ ಪಕ್ಷವು ಗ್ಯಾರಂಟಿಗಳ ಹೆಸರಿನಲ್ಲಿ ಐದು ರಾಜ್ಯಗಳ ಜನರಿಗೆ ಮಂಕುಬೂದಿ ಎರಚಲು ಹೊರಟಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೃಹ ಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ ಯೋಜನೆಗಳು ಗುರಿ ಮುಟ್ಟಿಲ್ಲ. ಯುವ ನಿಧಿ ಯೋಜನೆ ಇನ್ನೂ ಆರಂಭವೇ ಆಗಿಲ್ಲ. ಗ್ಯಾರಂಟಿ ಹೆಸರಿನಲ್ಲಿ ಕರ್ನಾಟಕದ ಜನರ ಕಿವಿಗೆ ಹೂ ಮುಡಿಸಿದ ಕಾಂಗ್ರೆಸ್, ಈಗ ಐದು ರಾಜ್ಯಗಳ ಜನರಿಗೂ ಕಿವಿಗೆ ಹೂ ಮುಡಿಸಲು ಹೊರಟಿದೆ’ ಎಂದರು.

ADVERTISEMENT

‘ಶಕ್ತಿ ಯೋಜನೆಯಡಿ ಸಂಚಾರಕ್ಕೆ ಬಸ್ಸುಗಳೇ ಇಲ್ಲ. ಶಾಲಾ ಮಕ್ಕಳು ಜೆಸಿಬಿ ಯಂತ್ರಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‌ ಹೆಸರಿನಲ್ಲೂ ಹಣ ಲೂಟಿ ಮಾಡುತ್ತಿದ್ದಾರೆ. ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯವನ್ನು ಸಂಕಷ್ಟಕ್ಕೆ ತಳ್ಳಿರುವ ಕಾಂಗ್ರೆಸ್‌ ಪಕ್ಷವು ಇದೇ ಮಾದರಿಯನ್ನು ಇಡೀ ರಾಷ್ಟ್ರಕ್ಕೆ ವಿಸ್ತರಿಸಲು ಹೊರಟಿದೆ’ ಎಂದು ಟೀಕಿಸಿದರು.

ನೈತಿಕತೆ ಇದೆಯೇ?

‘ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ₹2.45 ಲಕ್ಷ ಕೋಟಿ ಸಾಲ ಮಾಡಿದ್ದರು. ಈಗ ಮತ್ತೆ ₹85,815 ಕೋಟಿ ಸಾಲ ಮಾಡಲು ಹೊರಟಿದ್ದಾರೆ. ಸಾಲದ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದೆಯೇ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷವು ಐದು ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹಿಸಲು ಕರ್ನಾಟಕವನ್ನು ಬಳಸಿಕೊಳ್ಳುತ್ತಿದೆ. ಹಣ ಸಂಗ್ರಹಿಸಲು ಕಾಂಗ್ರೆಸ್ ಹೈಕಮಾಂಡ್‌ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಸಚಿವರಿಗೆ ಗುರಿ ನಿಗದಿಮಾಡಿದೆ. ಹಣ ಕೊಡದವರು ಸಂಪುಟದಲ್ಲಿ ಉಳಿಯುವುದಿಲ್ಲ. ಹಣ ಕೊಟ್ಟವರಷ್ಟೇ ಮಂತ್ರಿಗಳಾಗಿ ಉಳಿಯುತ್ತಾರೆ’ ಎಂದರು.

‘ತೆಲಂಗಾಣ ಸರ್ಕಾರ ದಿನದ 24 ಗಂಟೆಯೂ  ಉಚಿತ ವಿದ್ಯುತ್‌ ಪೂರೈಸುತ್ತಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದಿನಕ್ಕೆ 5 ಗಂಟೆ ಉಚಿತ ವಿದ್ಯುತ್‌ ಪೂರೈಸುವುದಾಗಿ ನಮ್ಮ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆಶ್ವಾಸನೆ ನೀಡಿದ್ದಾರೆ. ಇಲ್ಲಿ ಕೊಟ್ಟ ಭರವಸೆ ಈಡೇರಿಸದವರ ಮಾತನ್ನು ತೆಲಂಗಾಣದ ಜನರು ನಂಬಬೇಕೆ’ ಎಂದು ಕೇಳಿದರು.

‘ಬರಗಾಲದಲ್ಲೂ ಸಿ.ಎಂ ಶೋಕಿ’

‘ರಾಜ್ಯವು ತೀವ್ರ ಬರಗಾಲದಿಂದ ಸಂಕಷ್ಟದಲ್ಲಿದೆ. ಸಮಾಜವಾದಿ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂತಹ ಸಂದರ್ಭದಲ್ಲಿ ಶೋಕಿಗಾಗಿ ಸರ್ಕಾರದ ಹಣ ವ್ಯಯಿಸುತ್ತಿದ್ದಾರೆ’ ಎಂದು ಕುಮಾರಸ್ವಾಮಿ ಟೀಕಿಸಿದರು. ‘ಮುಖ್ಯಮಂತ್ರಿ ನಿವಾಸದಲ್ಲಿ ₹ 3 ಕೋಟಿ ವೆಚ್ಚ ಮಾಡಿ ಹೊಸ ಸಭಾಂಗಣ ನಿರ್ಮಿಸಲಾಗಿದೆ. ಮುಖ್ಯಮಂತ್ರಿಯವರ ನಿವಾಸ ‘ಕಾವೇರಿ’ಯಲ್ಲಿ ₹ 1.90 ಕೋಟಿ ಮೌಲ್ಯದ ‘ಸ್ಟ್ಯಾನ್ಲಿ’ ವಿದೇಶಿ ಬ್ರ್ಯಾಂಡ್‌ನ ಸೋಫಾ ಮಂಚ ಹಾಕಲಾಗಿದೆ. ಅದಕ್ಕೆ ಸರ್ಕಾರದಿಂದ ಹಣ ಪಾವತಿಸಿಲ್ಲ. ಅದನ್ನು ಕೊಟ್ಟವರು ಯಾರು? ಐಷಾರಾಮಿ ಸೋಫಾ ಮಂಚ ಬಳಸುವವರು ಸಮಾಜವಾದಿಯೆ’ ಎಂದು ಪ್ರಶ್ನಿಸಿದರು. ‘ಸಚಿವರೊಬ್ಬರ ಕಡೆಯವರು ಸೋಫಾ ಮಂಚ ವ್ಯವಸ್ಥೆ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನೆಲ್ಲ ನೋಡುತ್ತಿದ್ದರೆ ಹ್ಯೂಬ್ಲೊ ವಾಚ್‌ನ ಮುಂದುವರಿದ ಭಾಗದಂತೆ ಕಾಣುತ್ತಿದೆ’ ಎಂದು ವಾಗ್ದಾಳಿ ನಡೆಸಿದರು. ಈ ಸರ್ಕಾರಕ್ಕೆ ಸಚಿವರ ಬಂಗಲೆ ನವೀಕರಣಕ್ಕೆ ಹೊಸ ಕಾರುಗಳ ಖರೀದಿಗೆ ಹಣವಿದೆ. ಆದರೆ ಬಡಪಾಯಿ ರೈತರಿಗೆ ಪರಿಹಾರ ನೀಡಲು ಹಣವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.