ADVERTISEMENT

ಕಾಂಗ್ರೆಸ್‌ ಪಕ್ಷ ದಲಿತರ ವಿರೋಧಿ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 20:52 IST
Last Updated 21 ಆಗಸ್ಟ್ 2021, 20:52 IST
ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ    

ಬೆಂಗಳೂರು: ‘ದಲಿತರ ಪರ ಕಾಳಜಿ, ಸಾಮಾಜಿಕ ನ್ಯಾಯ ಎಂಬುದು ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಬಾಯಿ ಮಾತಿಗೆ ಸೀಮಿತವಾದ ವಿಚಾರಗಳು. ವಾಸ್ತವದಲ್ಲಿ ಕಾಂಗ್ರೆಸ್‌ ಪಕ್ಷ ದಲಿತ ವಿರೋಧಿ’ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

‘ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ ಮತ್ತು ಆರ್‌. ಧ್ರುವನಾರಾಯಣ್‌ ಅವರು ಪಕ್ಷದಲ್ಲಿ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಬಿಜೆಪಿ ನಾಯಕರ ವಿರುದ್ಧ ಹೇಳಿಕೆಗಳನ್ನು ನೀಡಿ, ಪ್ರಚಾರ ಗಿಟ್ಟಿಸಲು ಯತ್ನಿಸುತ್ತಿದ್ದಾರೆ. ‘ಅಳಿಯನ ಕುರುಡು ಬೆಳಗಾದರೆ ಗೊತ್ತಾಗುತ್ತೆ’ ಎಂಬ ಗಾದೆ ಮಾತಿನಂತಾಗಿದೆ ಈ ಇಬ್ಬರ ಸ್ಥಿತಿ’ ಎಂದು ಅವರು ಟೀಕಿಸಿದ್ದಾರೆ.

‘ಕಾಂಗ್ರೆಸ್‌ ನಾಯಕರಿಗೆ ದಲಿತರ ಕಾಳಜಿ ಎಂಬುದು ಗಂಟಲಿನಿಂದ ಹೊರಗಿನ ವಿಚಾರವಾಗಿ ಎಂದೂ ಕಂಡಿಲ್ಲ. ಧ್ರುವನಾರಾಯಣ್‌ ಅವರು ಸಂಸದರಾಗಿದ್ದ ಅವಧಿಯಲ್ಲಿ ಶೋಷಿತ ಸಮುದಾಯಗಳ ಪರವಾಗಿ ಯಾವ ಕೆಲಸವನ್ನೂ ಮಾಡಿಲ್ಲ. ಅಧಿಕಾರದಲ್ಲಿ ಇದ್ದಾಗ ದಲಿತ ಸಮುದಾಯದ ಜನರ ಅಭಿವೃದ್ಧಿ ಕುರಿತು ತುಟಿ ಬಿಚ್ಚಿರಲಿಲ್ಲ. ಸೋತು ಸುಣ್ಣವಾದ ಬಳಿಕ ಅಧಿಕಾರಕ್ಕಾಗಿ ಮಾತನಾಡುತ್ತಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

‘ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಲು ಕಾಂಗ್ರೆಸ್‌ ಯಾವತ್ತೂ ಪ್ರಯತ್ನಿಸಿಲ್ಲ. ಜೆಡಿಎಸ್– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಂತಹ ಅವಕಾಶವಿದ್ದರೂ ಬಳಸಲಿಲ್ಲ. ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಎಲ್ಲ ನಾಯಕರೂ ಚಾತುರ್ವರ್ಣ ಪದ್ಧತಿಯ ಪ್ರತಿಪಾದಕರು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದಲ್ಲಿ ದಲಿತರಿಗೆ ಹೆಚ್ಚು ಪ್ರಾತಿನಿಧ್ಯ ನೀಡಿದ್ದಾರೆ. ಬಿಜೆಪಿಯನ್ನು ಟೀಕಿಸುವ ನೈತಿಕತೆ ಕಾಂಗ್ರೆಸ್‌ ನಾಯಕರಿಗೆ ಇಲ್ಲ’ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.