ADVERTISEMENT

ಯುವ ವರ್ಗಕ್ಕೆ ತುರ್ತಾಗಿ ಲಸಿಕೆ ನೀಡಿ– ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 1 ಮೇ 2021, 21:32 IST
Last Updated 1 ಮೇ 2021, 21:32 IST
ಪ್ರಜಾವಾಣಿ ವಿಶೇಷ ಸಂದರ್ಶನ......ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ -ಪ್ರಜಾವಾಣಿ ಚಿತ್ರ/ ರಂಜು ಪಿ
ಪ್ರಜಾವಾಣಿ ವಿಶೇಷ ಸಂದರ್ಶನ......ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ -ಪ್ರಜಾವಾಣಿ ಚಿತ್ರ/ ರಂಜು ಪಿ   

ಬೆಂಗಳೂರು: ‘ಯುವ ವರ್ಗಕ್ಕೆ ಆದ್ಯತೆಯ ಮೇಲೆ ಕೋವಿಡ್ ಲಸಿಕೆ ನೀಡಬೇಕು. ಈ ಕಾರ್ಯಕ್ರಮವನ್ನು ಆಂದೋಲನವಾಗಿ ಹಮ್ಮಿಕೊಳ್ಳಬೇಕು’ ಎಂದು ಆಗ್ರಹಿಸಿ ಮುಖ್ಯಮಂತ್ರಿಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

‘ರಾಜ್ಯದಲ್ಲಿ ಶೇ 70ಕ್ಕಿಂತ ಹೆಚ್ಚು ಮಂದಿ ಬಡವರು ಮತ್ತು ದುಡಿಯುವ ವರ್ಗದ ಜನರಿದ್ದಾರೆ. ಆನ್‍ಲೈನ್‍ನಲ್ಲಿ ಹೆಸರು ನೋಂದಾಯಿಸಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿ, ಸ್ಥಳದಲ್ಲಿಯೇ ನೋಂದಾಯಿಸಿ ಲಸಿಕೆ ನೀಡಬೇಕು. ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ ಲಸಿಕೆ ನೀಡಬೇಕು’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಕೋವ್ಯಾಕ್ಸಿನ್ ಲಸಿಕೆಯ ಪೇಟೆಂಟ್ ಐಸಿಎಂಆರ್ ನಿಯಂತ್ರಣದಲ್ಲಿರುವ ವೈರಾಲಜಿ ಇನ್‌ಸ್ಟಿಟ್ಯೂಟ್‍ನವರ ಕೈಯಲ್ಲಿದೆ. ಈ ಸಂಸ್ಥೆ ಸಿದ್ಧಪಡಿಸಿರುವ ಕೋವ್ಯಾಕ್ಸಿನ್ ಲಸಿಕೆ ಉತ್ಪಾದನೆಯ ಪ್ರೋಟೋಕಾಲ್‍ನ್ನು ಇತರೆ ಕಂಪನಿಗಳಿಗೆ ನೀಡಿ, ಅಗತ್ಯ ಪ್ರಮಾಣದ ಪರೀಕ್ಷೆ ನಡೆಸಿ, ಉತ್ಪಾದನೆಗೆ ಅವಕಾಶ ನೀಡಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ತಜ್ಞರ ಪ್ರಕಾರ ಲಸಿಕೆ ಪಡೆದವರಲ್ಲಿ ಸೋಂಕು ನಿರೋಧಕ ಶಕ್ತಿ ಬರುತ್ತದೆ. ಆದರೆ, ಕೇಂದ್ರ ಸರ್ಕಾರ ವಿದೇಶಗಳಿಗೆ ಲಸಿಕೆ ರಫ್ತು ಮಾಡಲು ಅವಕಾಶ ನೀಡಿ ಖಾಸಗಿಯವರಿಗೆ ಹಣ ದೋಚಲು ಅನುವು ಮಾಡಿಕೊಟ್ಟಿದೆ. ಕಾರ್ಪೊರೇಟ್ ದಣಿಗಳ ಕೈಗೆ ದೇಶವನ್ನು ಒಪ್ಪಿಸಿ ಜನರನ್ನು ಬೀದಿಬೀದಿಯಲ್ಲಿ ನರಳಿ ಸಾಯುವಂತೆ ಪ್ರಧಾನಿ ಮಾಡಿದ್ದಾರೆ. ಕೂಲಿ ಕಾರ್ಮಿಕ ವರ್ಗ ₹ 1,200 ನೀಡಿ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವೇ’ ಎಂದೂ ಪತ್ರದಲ್ಲಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.