ADVERTISEMENT

ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರ ಸಭೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 17:12 IST
Last Updated 24 ಜನವರಿ 2021, 17:12 IST

ರಾಜರಾಜೇಶ್ವರಿನಗರ: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮಾಲೋಚನಾ ಸಭೆ ಮತ್ತು ವಿಧಾನಸಭೆಯ ಉಪಚುನಾವಣೆ ಸೋಲಿನ ಪರಾಮರ್ಶೆ ಸಭೆ ಯಶವಂತಪುರದಲ್ಲಿ ನಡೆಯಿತು.

ಸಂಸದ ಡಿ.ಕೆ.ಸುರೇಶ್, ಶಾಸಕ ಕೃಷ್ಣಬೈರೇಗೌಡ, ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್‍ಕುಮಾರ್, ವಿಧಾನಪರಿಷತ್ ಸದಸ್ಯ ಎಸ್.ರವಿ, ಉಪಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಚ್. ಕುಸುಮಾ ಅವರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಕಾರ್ಯಕರ್ತರ ಅಭಿಪ್ರಾಯಗಳನ್ನು ಕೇಳಿದರು.

ಸಂಸದ ಡಿ.ಕೆ.ಸುರೇಶ್, ‘ಬಿಜೆಪಿ ಪಕ್ಷದಿಂದ ಬೆದರಿಕೆ, ಆಮಿಷವೊಡ್ಡಿದರೂ ನಿಷ್ಠಾವಂತ ಕಾರ್ಯಕರ್ತರು ಪಕ್ಷದ ಬೆನ್ನೆಲುಬಾಗಿ ನಿಂತರು. ಆದರೆ, ಪಕ್ಷದಿಂದ ಅಧಿಕಾರ ಅನುಭವಿಸಿದ್ದರೂ ಕೇವಲ ಅಧಿಕಾರದ ಮೇಲಿನ ಆಸೆಗಾಗಿ ಕೆಲವರು ಪಕ್ಷಕ್ಕೆ ಮೋಸ ಮಾಡಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಆಶೀರ್ವಾದದಿಂದ ಮತ್ತೆ ಕಾಂಗ್ರೆಸ್ ಶಾಸಕರು ಆಯ್ಕೆಯಾಗುವುದು ಖಚಿತ’ ಎಂದರು.

ADVERTISEMENT

ಕುಸುಮಾ, ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಬಡವರು, ರೈತರು, ಕಾರ್ಮಿಕರು, ನೊಂದವರ ಪರವಾಗಿ ದುಡಿಯುತ್ತಿರುವ ಕಾಂಗ್ರೆಸ್ ಪಕ್ಷದಿಂದ ಮಾತ್ರ ಅಭಿವೃದ್ಧಿ ಸಾಧ್ಯ’ ಎಂದರು.

ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ರಾಜ್‍ಕುಮಾರ್, ‘ಅಭಿವೃದ್ಧಿ ಮಾಡುತ್ತೇವೆ, ಬೆಲೆ ಏರಿಕೆ ಕಡಿಮೆ ಮಾಡುತ್ತೇವೆ, ಯುವಜನಾಂಗಕ್ಕೆ ಉದ್ಯೋಗ ನೀಡುತ್ತೇವೆ, ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದು ನಾಗರಿಕರಿಗೆ ಮಂಕುಬೂದಿ ಎರಚಿ ಅಧಿಕಾರಕ್ಕೆ ಬಂದ ಬಿಜೆಪಿ, ಕೃಷಿ ವಿರೋಧಿ ಕಾಯ್ದೆ ಜಾರಿಗೆ ತರುವ ಮೂಲಕ ರೈತರಿಗೆ ಮೋಸ ಮಾಡುತ್ತಿದೆ. ಯುವ ಜನಾಂಗದ ಉದೋಗದ ಕುತ್ತು ತಂದಿದೆ’ ಎಂದರು.

ಶಾಸಕ ಎಸ್.ರವಿ, ಕಾಂಗ್ರೆಸ್ ಮುಖಂಡರಾದ ಹನುಮಂತರಾಯಪ್ಪ ಎ, ಅಮರ್‍ನಾಥ್, ಎಂ.ತಿಬ್ಬೇಗೌಡ, ಲಗ್ಗೆರೆ ಬೆಟ್ಟಸ್ವಾಮಿಗೌಡ, ಪಾರ್ಥ, ಮುನಿಸ್ವಾಮಿ, ಗೋಪಾಲ್, ನವೀನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.