ADVERTISEMENT

ಸಚಿವ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಆಗ್ರಹ

ಕೆಪಿಸಿಸಿಯಿಂದ ದೂರು ದಾಖಲು, ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2021, 18:10 IST
Last Updated 11 ಆಗಸ್ಟ್ 2021, 18:10 IST
ಕೆಪಿಸಿಸಿ ವತಿಯಿಂದ ಹೈಗ್ರೌಂಡ್ಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಲಾಯಿತು. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು. 
ಕೆಪಿಸಿಸಿ ವತಿಯಿಂದ ಹೈಗ್ರೌಂಡ್ಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಲಾಯಿತು. ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.    

ಬೆಂಗಳೂರು:‘ಕಾಂಗ್ರೆಸ್‌ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ವತಿಯಿಂದ ಹೈಗ್ರೌಂಡ್ಸ್‌ ಠಾಣೆ ಎದುರು ಬುಧವಾರ ಪ್ರತಿಭಟನೆ ನಡೆಯಿತು.

ಕೆಪಿಸಿಸಿ ಕಾರ್ಯಾಧ್ಯಕ್ಷಈಶ್ವರ ಖಂಡ್ರೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರು ಭಾಗವಹಿಸಿದ್ದರು.

‘ಈಶ್ವರಪ್ಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವಾಗ ಕಾಂಗ್ರೆಸ್‌ ನಾಯಕರ ಬಗ್ಗೆ ಕೀಳುಮಟ್ಟದ ಪದಬಳಕೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಸವಾಲು ಹಾಕಿ ಬೆದರಿಸುವ ಹೇಳಿಕೆಗಳನ್ನು ನೀಡಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

‘ಈಶ್ವರಪ್ಪ ಅವರ ಹೇಳಿಕೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹಾಗೂ ಕೋಮುವಾದ ಸೃಷ್ಟಿಸುವಂತಿದೆ. ಇವು, ಹಿಂದುತ್ವದ ಸಂಘಟನೆಗಳಿಗೆ ಉತ್ತೇಜಿಸುವ ಪ್ರಚೋದನಕಾರಿ ಹೇಳಿಕೆಗಳಾಗಿವೆ. ಹಾಗಾಗಿ, ಈಶ್ವರಪ್ಪ ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿಯ ಬೆಂಗಳೂರು ಉತ್ತರ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ.ಟಿ.ನವೀನ್ ಚಂದ್ರ ಅವರು ಹೈಗ್ರೌಂಡ್ಸ್‌ ಠಾಣೆಗೆ ದೂರು ನೀಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಮನೋಹರ್, ಜಿ.ಕೃಷ್ಣಪ್ಪ, ಜಿ.ಶೇಖರ್, ಬಿ.ಟಿ.ಶ್ರೀನಿವಾಸ ಮೂರ್ತಿ, ಸಲೀಂ, ಜನಾರ್ದನ್, ಎ.ಆನಂದ್, ಎಲ್.ಜಯಸಿಂಹ, ಪುಟ್ಟರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.