ADVERTISEMENT

ಹೆಬ್ಬಾಳ ರಸ್ತೆ ವಿಸ್ತರಣೆಗೆ ಒತ್ತಾಯ: ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 19:50 IST
Last Updated 21 ನವೆಂಬರ್ 2022, 19:50 IST
ಹೆಬ್ಬಾಳ ರಸ್ತೆ ವಿಸ್ತರಣೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಎಸ್ಟೀಮ್ ಮಾಲ್ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು
ಹೆಬ್ಬಾಳ ರಸ್ತೆ ವಿಸ್ತರಣೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಎಸ್ಟೀಮ್ ಮಾಲ್ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು   

ಯಲಹಂಕ: ಹೆಬ್ಬಾಳ ರಸ್ತೆ ವಿಸ್ತರಣೆಗೆ ಒತ್ತಾಯಿಸಿ ಬ್ಯಾಟರಾಯನಪುರ, ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಕಾರ್ಯ ಕರ್ತರು ಎಸ್ಟೀಮ್ ಮಾಲ್ ಸಮೀಪ ಸೋಮವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಹಲವು ಬಡಾವಣೆಗಳ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಪದಾಧಿಕಾರಿಗಳು ಫಲಕಗಳನ್ನು ಹಿಡಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಕೂಡಲೇ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಬೇಕು ಎಂದು ಆಗ್ರಹಿಸಿದರು.

ಶಾಸಕ ಕೃಷ್ಣಬೈರೇಗೌಡ ಮಾತ ನಾಡಿ, ‘ಹೆಬ್ಬಾಳ– ಕೆ.ಆರ್.ಪುರ ಮೇಲ್ಸೇತುವೆ, ಸಿಲ್ಕ್ ಬೋರ್ಡ್‌, ಗೊರಗುಂಟೆಪಾಳ್ಯ ಜಂಕ್ಷನ್ ಸೇರಿ ಹಲವು ಪ್ರಮುಖ ಸ್ಥಳಗಳಲ್ಲಿ ಸಂಚಾರ ಒತ್ತಡದ ಸಮಸ್ಯೆಯಿಂದ ಜನರು ಹೈರಾಣಾಗಿದ್ದಾರೆ. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಂಗಳೂರಿಗೆ ಅಪಖ್ಯಾತಿ ಬಂದಿದೆ. ಇಲ್ಲಿಗೆ ಬರುವಂತಹ ಕಂಪನಿಗಳು ಹೈದರಾಬಾದ್, ಮದ್ರಾಸ್ ನಗರಗಳಿಗೆ ಹೋಗುತ್ತಿವೆ’ ಎಂದರು.

ADVERTISEMENT

ರಸ್ತೆಗಳಲ್ಲಿ ಗುಂಡಿಗಳು ಬಿದ್ದು, ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಈ ಎಲ್ಲಾ ಸಮಸ್ಯೆಗಳಿಂದ ಬೆಂಗಳೂರಿನ ಮರ್ಯಾದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತಿದ್ದರೂ ಸಹ, ಇಲ್ಲಿನ ಸರ್ಕಾರ ನಿದ್ರಾ
ವಸ್ಥೆಯಲ್ಲಿದೆ. ಕಮಿಷನ್ ರೂಪದಲ್ಲಿ ಶೇ 40ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ದೂರಿದರು.

ಒಂದು ಕಡೆಯಿಂದ ಮತ್ತೊಂದು ಕಡೆಗೆ ತರೆಳಬೇಕಾದರೆ ಅರ್ಧಗಂಟೆ ಕಾಲ ಸಂಚಾರದ ಒತ್ತಡದಲ್ಲಿ ಸಿಲುಕ ಬೇಕು. ಇದರಿಂದ ಕಚೇರಿ, ಶಾಲಾ-ಕಾಲೇಜು, ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ತೆರಳಬೇಕಾದ ಆಂಬುಲೆನ್ಸ್, ಕಾರ್ಖಾನೆಗಳಿಗೆ ತೆರಳುವ ಉದ್ಯೋಗಿ ಗಳು ಸಾಕಷ್ಟು ಸಮಸ್ಯೆ ಎದುರಿಸಬೇಕಾಗಿದೆ ಎಂದು ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ‘ಮೇಲ್ಸೇತುವೆ ಯಲ್ಲಿ ಸಂಚಾರ ಒತ್ತಡದ ಸಮಸ್ಯೆಯಿಂದ ಈ ಭಾಗದಲ್ಲಿ ನಿತ್ಯ ಸಂಚರಿಸುವ ಲಕ್ಷಾಂತರ ಜನರು ಹಲವಾರು ವರ್ಷಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ.

ಈ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತುಮಕೂರು ಮೇಲ್ಸೇತುವೆ ಸೇರಿ 15ಕ್ಕೂ ಹೆಚ್ಚು ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಉಕ್ಕಿನ ಸೇತುವೆ ನಿರ್ಮಿಸಲು ಮುಂದಾದಾಗ, ಬಿಜೆಪಿಯವರು ನ್ಯಾಯಾಲಯಕ್ಕೆ ಹೋಗಿ ಕಾಮಗಾರಿ ನಿಲ್ಲಿಸಿದ್ದರು. ಈಗ ಜನರು ಸಚಿವರಿಗೆ ಶಾಪ ಹಾಕುತ್ತಿದ್ದಾರೆ. ಕೂಡಲೇ ವಿಸ್ತರಣೆ ಕಾಮಗಾರಿ ಆರಂಭಿಸದಿದ್ದರೆ ಮುಂದಿನ ದಿನಗಳಲ್ಲಿ ರಸ್ತೆಗಿಳಿದು ಹೋರಾಟ ಮಾಡಲಾಗುವುದು’ ಎಂದು ಹೇಳಿದರು.

ಇಲ್ಲಿನ ಸಂಚಾರದ ದಟ್ಟಣೆಯಿಂದ ಹೆಬ್ಬಾಳ ಮತ್ತು ಬ್ಯಾಟರಾಯನಪುರ ಕ್ಷೇತ್ರಗಳಿಗೆ ಹೆಚ್ಚಿನ ಸಮಸ್ಯೆಯ ಆಗುತ್ತಿದೆ. ಸುಮಾರು 7 ವರ್ಷಗಳ ಹಿಂದೆಯೆ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಿಸಲಾಗಿತ್ತು. ಆದರೆ ಎರಡೂ ಕಡೆ ಕಾಂಗ್ರೆಸ್ ಶಾಸಕರಿರುವುದರಿಂದ ಸರ್ಕಾರ ಕಾಮಗಾರಿ ಸ್ಥಗಿತಗೊಳಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಶಾಸಕ ಬೈರತಿ ಸುರೇಶ್ ದೂರಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಬಿಬಿಎಂಪಿ ಮಾಜಿ ಉಪ ಮೇಯರ್ ಎಂ.ಆನಂದ್, ಮಾಜಿ ಸದಸ್ಯರಾದ ಪಿ.ವಿ.ಮಂಜುನಾಥಬಾಬು, ಎಂ.ಆನಂದಕುಮಾರ್, ಅಬ್ದುಲ್ ವಾಜಿದ್, ಮುಖಂಡರಾದ ಎಂ.ಹನುಮಂತೇಗೌಡ, ಎಂ.ಜಯಗೋಪಾಲಗೌಡ, ಎನ್.ಎನ್.ಶ್ರೀನಿವಾಸಯ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.