'ಸುಶಾಸನ ದಿವಸ' ಸಮಾರಂಭದಲ್ಲಿ ವಿಶ್ರಾಂತ ಕುಲಪತಿ ಪ್ರೊ. ಬಿ. ತಿಮ್ಮೇಗೌಡ, ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರಿಗೆ ‘ಅಟಲ್ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಕಾಂಗ್ರೆಸ್ ಅವಧಿಯಲ್ಲೇ 75 ಬಾರಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. ಯಾಕೆ ತಿದ್ದುಪಡಿ ಮಾಡಿದರು ಎಂಬುದನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದಲ್ಲಿ ಚರ್ಚೆ ಮಾಡಲಿ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸವಾಲು ಹಾಕಿದರು.
ನಾಡಪ್ರಭು ಕೆಂಪೇಗೌಡ ಜನಪರ ವೇದಿಕೆ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಗಿ ಬುಧವಾರ ಆಯೋಜಿಸಿದ್ದ ‘ಸುಶಾಸನ ದಿವಸ’ ಕಾರ್ಯಕ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ವಾಜಪೇಯಿ ಅವರ ಕಾಲದಲ್ಲಿ 14 ಬಾರಿ ಮಾತ್ರ ಸಂವಿಧಾನ ತಿದ್ದುಪಡಿಯಾಗಿದೆ. ಅದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ನೀಡುವುದೂ ಸೇರಿದಂತೆ ಹಲವು ಜನಹಿತ ಕಾರ್ಯಕ್ರಮಗಳಿಗಾಗಿ ತಿದ್ದುಪಡಿ ಮಾಡಲಾಗಿದೆ’ ಎಂದರು.
‘ಕಾಂಗ್ರೆಸ್‌ನವರು ಗಾಂಧಿ ಹೆಸರು ಹೇಳಿ 75 ವರ್ಷ ಕಳೆದರು. ಹಾಗೆಯೇ, ಸಂವಿಧಾನ ಬದಲಾಯಿಸುತ್ತಾರೆ ಎಂದು ಹೇಳಿಕೊಂಡು ಒಂದು ಚುನಾವಣೆಯನ್ನೇ ಮುಗಿಸಿದರು. ಗಾಂಧೀಜಿಯವರು ಅಂದೇ ತನ್ನ ಶಿಷ್ಯರ ಯೋಗ್ಯತೆ ಅರಿತುಕೊಂಡು ನಿರ್ಮೋಹದಿಂದ ಕಾಂಗ್ರೆಸ್ ವಿಸರ್ಜನೆ ಮಾಡುವುದಕ್ಕೆ ಹೇಳಿದ್ದರು. ಅಂಬೇಡ್ಕರ್ ಅವರು ಅಂದಿನ ಕಾಂಗ್ರೆಸ್ ಸರ್ಕಾರ ಮತ್ತು ನೆಹರೂ ಅವರೊಂದಿಗೆ ಿದ್ದ ಭಿನ್ನಾಭಿಪ್ರಾಯಗಳಿಂದ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು. ಅಂಬೇಡ್ಕರ್ ಅವರ ರಾಜೀನಾಮೆ ಪತ್ರ ಈಗಲೂ ರಾಷ್ಟ್ರಪತಿ ಭವನದಲ್ಲಿ ಇಲ್ಲ. ಬೆಳಗಾವಿಯ ಅಧಿವೇಶನದಲ್ಲಿ ಈ ವಿಷಯಗಳ ಬಗ್ಗೆ ಚರ್ಚಿಸಲಿ’ ಎಂದು ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಹಾಗೂ ವಿಶ್ರಾಂತ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಅವರಿಗೆ ‘ಅಟಲ್ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಪುರಸ್ಕಾರವು ₹1 ಲಕ್ಷ ನಗದು, ಫಲಕವನ್ನು ಒಳಗೊಂಡಿದೆ. ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿದ ಯಡಿಯೂರಪ್ಪ ಅವರು, ವಾಜಪೇಯಿ ಅವರ ಆಡಳಿತದ ವೈಖರಿಯನ್ನು ಸ್ಮರಿಸಿದರು. ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಪ್ರೊ. ಕೃಷ್ಣೇಗೌಡ ಮಾತನಾಡಿದರು.
ಶಾ ಹೇಳಿಕೆ ತಿರುಚಲಾಗಿದೆ: ದೇವೇಗೌಡ
‘ನಾನು ಆಳುವ ಪಕ್ಷದಲ್ಲಿದ್ದಾಗ ವಾಜಪೇಯಿ ವಿರೋಧ ಪಕ್ಷದಲ್ಲಿದ್ದರು. ವಿರೋಧ ಪಕ್ಷದ ನಾಯಕನಾಗಿ ಆ ಸ್ಥಾನದ ಗೌರವವನ್ನು ಎತ್ತಿ ಹಿಡಿದಿದ್ದರು. ಈಗ ಪ್ರಜಾಪ್ರಭುತ್ವದ ಹೆಸರಿನಲ್ಲಿ ಎದುರು(ವಿರೋಧ) ಪಕ್ಷಗಳು ಹೇಗೆ ನಡೆದುಕೊಳ್ಳುತ್ತಿದ್ದಾರೆ ನೋಡಿ. ದೇಶದ ಜನರು ತಲೆತಗ್ಗಿಸುವಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ರಾಜ್ಯಸಭಾ ಸದಸ್ಯೆ ಎಚ್.ಡಿ. ದೇವೇಗೌಡ ಬೇಸರ ವ್ಯಕ್ತಪಡಿಸಿದರು. ‘ಅಮಿತಾ ಶಾ ಭಾಷಣ ಮಾಡುವಾಗ ನಾನೂ ರಾಜ್ಯ ಸಭೆಯಲ್ಲಿದ್ದೆ. ಅವರ ಹೇಳಿಕೆಯನ್ನು ತಿರುಚಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.