
ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ಜಾತ್ಯತೀತತೆಯ ರಕ್ಷಣಾ ಕೇಂದ್ರ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯಲ್ಲಿ ಘೋಷಣೆಗಳನ್ನು ಕೂಗಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ವಿಶ್ವ ಆರ್ಥಿಕತೆಯ ಬಿಕ್ಕಟ್ಟಿನಿಂದಾಗಿ ಪ್ರಪಂಚದಾದ್ಯಂತ ಮಾನವ ಹಕ್ಕುಗಳನ್ನು ನಿರಂತರವಾಗಿ ಉಲ್ಲಂಘನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಭಾರತವೂ ಹೊರತಾಗಿಲ್ಲ’ ಎಂದು ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ಜಾತ್ಯತೀತತೆಯ ರಕ್ಷಣಾ ಕೇಂದ್ರ ರಾಜ್ಯ ಸಂಚಾಲಕ ಎಂ.ಎನ್. ಶ್ರೀರಾಮ್ ಹೇಳಿದರು.
ಪ್ರಜಾಪ್ರಭುತ್ವ ಹಕ್ಕುಗಳ ಮತ್ತು ಜಾತ್ಯತೀತತೆಯ ರಕ್ಷಣಾ ಕೇಂದ್ರವು (ಸಿಎಫ್‌ಡಿಆರ್‌ಎಸ್) ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹಲವು ದೇಶಗಳಲ್ಲಿ ಯುದ್ಧದ ವಾತಾವರಣ ಈಗಲೂ ಮುಂದುವರಿದಿದೆ. ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯೂ ಆಗುತ್ತಿದೆ. ಸಾಮ್ರಾಜ್ಯಶಾಹಿ ಮನಃಸ್ಥಿತಿ ಹೆಚ್ಚಿದೆ. ಯುದ್ದ ನಿಲ್ಲಿಸಿ ಮಾನವ ಹಕ್ಕುಗಳನ್ನು ರಕ್ಷಿಸುವ ಗಂಭೀರ ಪ್ರಯತ್ನಗಳು ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಭಾರತದಲ್ಲೂ ಜನರ ಹಕ್ಕುಗಳನ್ನು ನಿಗ್ರಹಿಸುವ ಪ್ರಯತ್ನಗಳು ಹಲವು ರೂಪಗಳಲ್ಲಿ ನಡೆದಿವೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲಕ ಜನರ ಮತದಾನದ ಹಕ್ಕನ್ನು ನಿರಾಕರಿಸುವ ಪ್ರಯತ್ನಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ’ ಎಂದರು.
ವಕೀಲ ಸುರೇಂದ್ರಬಾಬು ಮಾತನಾಡಿ, ‘ನಾಗರಿಕ ಹೋರಾಟಗಳಿಂದ ಮಾತ್ರ ಮಾನವ ಹಕ್ಕುಗಳ ಮರು ಸ್ಥಾಪನೆ ಸಾಧ್ಯ. ಇದನ್ನು ಹಲವು ದೇಶಗಳು ಮಾಡಿ ತೋರಿಸಿವೆ. ಇದು ನಮಗೂ ಮಾದರಿಯಾಗಬೇಕು’ ಎಂದು ತಿಳಿಸಿದರು.
ಕೇಂದ್ರದ ರಾಜ್ಯ ಸಂಘಟಕ ಎನ್.ರವಿ ಮಾತನಾಡಿ, ‘ದಶಕಗಳ ಹಿಂದೆ ಬ್ರಿಟಿಷ್ ವಸಾಹತುಶಾಹಿಗಳೊಂದಿಗೆ ಹೋರಾಟ ನಡೆಸಿ ಪ್ರಜಾಪ್ರಭುತ್ವ ಸ್ಥಾಪಿಸಿಕೊಂಡೆವು. ಈಗ ಪ್ರಜಾಪ್ರಭುತ್ವ ಎನ್ನುವುದು ಶ್ರೀಮಂತರ ಆಳ್ವಿಕೆಯಾಗಿದ್ದು, ಜನಸಾಮಾನ್ಯರು ಬದುಕಲು ಹೆಣಗಾಡುವ ಸನ್ನಿವೇಶವಿದೆ. ನಮ್ಮ ಹೋರಾಟ ಇನ್ನಷ್ಟು ಪ್ರಬಲಗೊಳಿಸುವ ಅನಿವಾರ್ಯ ಎದುರಾಗಿದೆ’ ಎಂದರು.
ರಾಜ್ಯ ಸಂಘಟಕರಾದ ಟಿ.ವಿ.ಎಸ್.ರಾಜು ಮತ್ತು ಸೋಮಶೇಖರ್ ಗೌಡ ಮಾತನಾಡಿದರು. ಕಾನೂನು ಕಾಲೇಜು ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.