
ಬೆಂಗಳೂರು: ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿ ಮೇಲೆ ಪತಿ ಗುಂಡು ಹಾರಿಸಿ, ಕೊಲೆ ಮಾಡಿದ್ದ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯ ಪಾತ್ರ ಇರುವುದು ಪೊಲೀಸ್ ತನಿಖೆ ವೇಳೆ ಪತ್ತೆಯಾಗಿದೆ.
ತಮಿಳುನಾಡಿನ ಸೇಲಂನ ಮೌಳೇಶ್ ಎಂಬುವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಬಾಲಮುರುಗನ್ ಅವರು ತಮ್ಮ ಪತ್ನಿ ಭುವನೇಶ್ವರಿ ಅವರನ್ನು ಕೊಲೆ ಮಾಡಲು ಪುಡಿ ರೌಡಿ ಮೌಳೇಶ್‌ಗೆ ಒಂದೂವರೆ ಲಕ್ಷ ರೂಪಾಯಿಗೆ ಸುಪಾರಿ ನೀಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.
ಏನಿದು ಪ್ರಕರಣ?: ‘ತಮಿಳುನಾಡಿನ ಬಾಲಮುರುಗನ್ ಹಾಗೂ ಭುವನೇಶ್ವರಿ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ 12 ವರ್ಷದ ಮಗ ಹಾಗೂ 4 ವರ್ಷದ ಮಗಳಿದ್ದಾಳೆ. ಭುವನೇಶ್ವರಿ ಅವರು ಬೇರೊಬ್ಬರ ಜತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿ ಬಾಲಮುರುಗನ್ ಶಂಕಿಸುತ್ತಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಇದರಿಂದ ಬೇಸತ್ತ ಪತ್ನಿ, ವಿಚ್ಛೇದನ ಪಡೆಯಲು ತೀರ್ಮಾನಿಸಿದ್ದರು. ಇದಕ್ಕೆ ಪತಿ ಒಪ್ಪಿರಲಿಲ್ಲ. ಪತ್ನಿಯಿಂದ ವಿಚ್ಛೇದನ ನೋಟಿಸ್ ಪಡೆದ ಬಳಿಕ ಬಾಲಮುರುಗನ್ ಅವರು ಕೊಲೆಗೆ ಸಂಚು ರೂಪಿಸಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಬಸವೇಶ್ವರ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಭುವನೇಶ್ವರಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ಬಾಲಮುರುಗನ್ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದರು. ಡಿಸೆಂಬರ್ 24ರ ಸಂಜೆ ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಭುವನೇಶ್ವರಿಯತ್ತ ಐದು ಸುತ್ತು ಗುಂಡು ಹಾರಿಸಿ ಕೊಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.
‘ಆರೋಪಿ ಬಂಧಿಸಿದ ಬಳಿಕ ವಿಚಾರಣೆ ನಡೆಸಲಾಗಿತ್ತು. ಪಿಸ್ತೂಲ್ ಎಲ್ಲಿ ಸಿಕ್ಕಿತ್ತು? ಕೊಲೆ ಮಾಡುವ ಸಂದರ್ಭದಲ್ಲಿ ಎಂಬುದನ್ನು ಪತ್ತೆ ಮಾಡಲಾಯಿತು. ಆಗ ಸುಪಾರಿ ನೀಡಿದ್ದು ಗೊತ್ತಾಯಿತು’ ಎಂದು ಪೊಲೀಸರು ಹೇಳಿದರು.
‘ಆನ್‌ಲೈನ್ ಮೂಲಕ ಮೌಳೇಶ್‌ನನ್ನು ಬಾಲಮುರುಗನ್ ಪರಿಚಯ ಮಾಡಿಕೊಂಡಿದ್ದರು. ಪತ್ನಿ ಕೊಲೆ ಮಾಡಲು ಒಂದೂವರೆ ಲಕ್ಷ ಹಣ ನೀಡಿದ್ದರು. ನಂತರ, ಕೃತ್ಯ ಎಸಗುವುದಕ್ಕಾಗಿ ತಮಿಳುನಾಡಿನಿಂದ ಬೆಂಗಳೂರಿಗೆ ಬಂದಿದ್ದ ಮೌಳೇಶ್ ಮೂರು ದಿನ ವಾಸ್ತವ್ಯ ಮಾಡಿದ್ದ. ಆದರೆ, ಕೃತ್ಯ ಎಸಗುವ ದಿನ ಆರೋಪಿ ತಮಿಳುನಾಡಿಗೆ ವಾಪಸ್ ಹೋಗಿದ್ದ’ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.