ADVERTISEMENT

PV Web Exclusive | ಸಹಕಾರ ಸಂಘ: ಮತ್ತೊಂದು ಅಕ್ರಮ ಬಯಲಿಗೆ

ಮಂಜುನಾಥ್ ಹೆಬ್ಬಾರ್‌
Published 8 ಅಕ್ಟೋಬರ್ 2020, 11:48 IST
Last Updated 8 ಅಕ್ಟೋಬರ್ 2020, 11:48 IST
ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ  ಠೇವಣಿದಾರರು– ಸಂಗ್ರಹ ಚಿತ್ರ
ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನ ಆಡಳಿತ ಮಂಡಳಿ ವಿರುದ್ಧ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ  ಠೇವಣಿದಾರರು– ಸಂಗ್ರಹ ಚಿತ್ರ   

ಬೆಂಗಳೂರು: ನಗರದ ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ ಹಾಗೂ ಕಣ್ವ ಕೋ ಆಪರೇಟಿವ್‌ ಸೊಸೈಟಿಗಳ ಅಕ್ರಮದ ಬೆನ್ನಲ್ಲೇ ಮತ್ತೊಂದು ಸಹಕಾರ ಸಂಘದಲ್ಲೂ ಅವ್ಯವಹಾರ ನಡೆದಿರುವ ವಿಚಾರ ಮುನ್ನೆಲೆಗೆ ಬಂದಿದೆ.

ಗುರು ಸಾರ್ವಭೌಮ ಸಹಕಾರ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ್ದ 4 ಸಾವಿರಕ್ಕೂ ಅಧಿಕ ಮಂದಿ ವಂಚನೆಗೆ ಒಳಗಾಗಿದ್ದಾರೆ. ಬ್ಯಾಂಕ್‌ ಅಧ್ಯಕ್ಷರು ಹಾಗೂ ಇತರ ಕೆಲವು ಪದಾಧಿಕಾರಿಗಳು ತಲೆಮರೆಸಿಕೊಂಡಿದ್ದಾರೆ. ಬ್ಯಾಂಕ್‌ಗೆ ಆಡಳಿತಾಧಿಕಾರಿಯನ್ನು ಸಹಕಾರ ಇಲಾಖೆ ನೇಮಿಸಿದೆ. ಹಣ ಮರಳಿಸುವಂತೆ ಆಗ್ರಹಿಸಿ ಹಲವು ಪ್ರತಿಭಟನೆಗಳು ನಡೆದಿವೆ. ಅದರ ಬೆನ್ನಲ್ಲೇ, ಬೆಂಗಳೂರು ನಗರ ಜಿಲ್ಲೆಯ ಅತ್ತಿಬೆಲೆಯ ಜಯಭಾರತಿ ಶೈಕ್ಷಣಿಕ ಸಹಕಾರ ಸಂಘದಲ್ಲೂ ಅಕ್ರಮ ನಡೆದಿರುವ ದೂರು ಸಲ್ಲಿಕೆಯಾಗಿದ್ದು, 2017–18, 2018–19ನೇ ಸಾಲಿನ ಪರಿಶೋಧಿತ ಲೆಕ್ಕಪತ್ರಗಳನ್ನು ಮರು ಲೆಕ್ಕಪರಿಶೋಧನೆ ನಡೆಸುವಂತೆ ಸಹಕಾರ ಇಲಾಖೆ ಆದೇಶಿಸಿದೆ. ಇಲಾಖೆಯ ಸಹಾಯಕ ನಿರ್ದೇಶಕ ಸಿ.ಡಿ.ಚಂದ್ರಶೇಖರಯ್ಯ ಅವರನ್ನು ಇದಕ್ಕಾಗಿ ನೇಮಿಸಿದ್ದು, ನಿಗದಿತ ಕಾಲಮಿತಿಯಲ್ಲಿ ಲೆಕ್ಕಪರಿಶೋಧನೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಸಂಘದ ಲೆಕ್ಕಪರಿಶೋಧನೆಯ ವರದಿಯಲ್ಲಿ ಲೋಪಗಳಿವೆ ಎಂದು ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ಇಲಾಖೆಗೆ ವರದಿ ಸಲ್ಲಿಸಿದ್ದರು. ಅದರ ಆಧಾರದಲ್ಲಿ, ಮರು ಲೆಕ್ಕಪರಿಶೋಧನೆಗೆ ನಿರ್ದೇಶನ ನೀಡಲಾಗಿದೆ. ಅವರು ಬೊಟ್ಟು ಮಾಡಿರುವ ನ್ಯೂನ್ಯತೆಗಳು ಇಲ್ಲಿವೆ.

ADVERTISEMENT

2017–18ನೇ ಸಾಲಿನ ಲೋಪಗಳು

*ಸಂಘದ ಜಮೀನಿನ ವಿಚಾರವಾಗಿ ನ್ಯಾಯಾಲಯದಲ್ಲಿ ಪ್ರಕರಣವಿದೆ. ಅದರ ಕಾನೂನು ವೆಚ್ಚ ₹61.71 ಲಕ್ಷವನ್ನು ನಗದಿನ ರೂಪದಲ್ಲಿ ಪಾವತಿಸಲಾಗಿದೆಯೇ, ಈ ಅವಧಿಯಲ್ಲಿ ನಡೆದಿರುವ ವಿಚಾರಣಾ ದಿನಾಂಕ, ವಕೀಲರ ವಿವರ, ಅವರ ಸಂಭಾವನೆ ನಿಗದಿಪಡಿಸಿರುವ ಆಡಳಿತ ಮಂಡಳಿಯ ತೀರ್ಮಾನ ಮತ್ತಿತರ ಅಂಶಗಳು ಲೆಕ್ಕಪರಿಶೋಧನಾ ವರದಿಯಲ್ಲಿ ಇಲ್ಲ.

*2017–18ನೇ ಸಾಲಿನಲ್ಲಿ ₹75 ಸಾವಿರವನ್ನು ಲಾಭ ನಷ್ಟದ ಖಾತೆಗೆ ಹಾಕಿದ್ದು, ಇದರ ಕ್ರಮಬದ್ಧತೆಯನ್ನು ಪರಿಶೀಲಿಸಬೇಕಿದೆ. ಸಂಘದ ಕಾರ್ಯವ್ಯಾಪ್ತಿ ಮೀರಿ ಸದಸ್ಯತ್ವ ಮಾಡಿಕೊಂಡಿರುವ ಆಪಾದನೆ ಇದ್ದು, ಅದರ ಪರಿಶೀಲನೆ ನಡೆಸಬೇಕು.

*ಅನಾವಶ್ಯಕವಾಗಿ ಕಟ್ಟಡ ದುರಸ್ತಿ, ಕಿರಿಯ ಕಾಲೇಜು ಶೌಚಾಲಯ ದುರಸ್ತಿಗೆ ₹2.15 ಲಕ್ಷ, ಕೊಠಡಿ ನಿರ್ಮಾಣಕ್ಕೆ ₹5.77 ಲಕ್ಷ ಹಾಗೂ ಕಟ್ಟಡ ರಿಪೇರಿಗೆ ₹32.92 ಲಕ್ಷ ಖರ್ಚು ಮಾಡಿದ್ದು, ಅದರ ಕ್ರಮಬದ್ಧತೆ ಬಗ್ಗೆ ಪರಿಶೀಲಿಸಬೇಕು.

2018–19ನೇ ಸಾಲಿನ ಲೋಪಗಳು

*ಸಂಘದ ವಾಣಿಜ್ಯ ಮಳಿಗೆ ನಿರ್ಮಾಣದಲ್ಲಿ ಅವ್ಯವಹಾರವಾಗಿದೆ. 2012ರಲ್ಲಿ ₹2.55 ಕೋಟಿ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು ಎಂದು ತಿಳಿಸಲಾಗಿತ್ತು. ಆದರೆ, ಪರಿಶೀಲನಾ ವರದಿ ಪ್ರಕಾರ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್‌ ವಿಭಾಗದಿಂದ 2014ರಲ್ಲಿ ಅನುಮೋದನೆ ಪಡೆಯಲಾಗಿದೆ. ಕಟ್ಟಡ ನಿರ್ಮಾಣದ ಪ್ರಾರಂಭ, ಮುಕ್ತಾಯದ ದಿನಾಂಕ, ಅನುಮೋದನೆ ಪಡೆದ ದಿನಾಂಕ, ಈ ವ್ಯವಹಾರದ ಬಗ್ಗೆ ಪ್ರತ್ಯೇಕ ಲೆಕ್ಕ ನಿರ್ವಹಿಸಿರುವ ಬಗ್ಗೆ ಪರಿಶೀಲಿಸಬೇಕು.

*ಕಟ್ಟಡ ನಿರ್ಮಾಣಕ್ಕೆ ಟೆಂಡರ್‌ ಕರೆಯದೆ ಆಡಳಿತ ಮಂಡಳಿಯವರೇ ನಿರ್ಮಿಸಿದ್ದು, ಇದು ಸಮಂಜಸವಲ್ಲ. ಇದನ್ನೂ ಸಹ ಪರಿಶೀಲನೆ ನಡೆಸಬೇಕು.

*ಶಾಲಾ ಕಟ್ಟಡ ನಿರ್ಮಾಣ ಹಾಗೂ ಆಟದ ಮೈದಾನದ ನಿರ್ಮಾಣದ ಲೆಕ್ಕಪತ್ರ ಇರುವ ವಿಚಾರದಲ್ಲೂ ಲೋಪ ಆಗಿದೆ.

*ಸಂಘಕ್ಕೆ ಸಂಬಂಧಪಡದವರನ್ನು ಸಂಘದ ಸದಸ್ಯರನ್ನಾಗಿ ಮಾಡಿರುವ ಬಗ್ಗೆಯೂ ಪರಿಶೀಲನೆ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.