ADVERTISEMENT

ಬೀದಿಬದಿ ವ್ಯಾಪಾರ: ಸುಳಿಯದ ಗ್ರಾಹಕರು

ಆರೋಗ್ಯಾಧಿಕಾರಿಗಳಿಂದಲೂ ಅಸಹಕಾರ: ವರ್ತಕರ ಆರೋಪ, ಒಂದು ಹೊತ್ತಿನ ಊಟಕ್ಕೂ ಸಂಕಷ್ಟ

ಮನೋಹರ್ ಎಂ.
Published 15 ಜೂನ್ 2020, 20:41 IST
Last Updated 15 ಜೂನ್ 2020, 20:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಲಾಕ್‍ಡೌನ್ ಬಳಿಕ ಸರ್ಕಾರದ ಅನುಮತಿ ಮೇರೆಗೆ ಕಾರ್ಯಾ ರಂಭಗೊಂಡ ಬೀದಿಬದಿ ವ್ಯಾಪಾರ ನಿರೀಕ್ಷಿತ ಗ್ರಾಹಕರಿಲ್ಲದೆ ನೆಲಕಚ್ಚಿದೆ. ದಿನವಿಡೀ ಅಂಗಡಿ ತೆರೆದರೂ ಗ್ರಾಹಕರು ಖರೀದಿಗೆ ಬರುತ್ತಿಲ್ಲ ಎಂಬ ಅಳಲು ವ್ಯಾಪಾರಿಗಳದು.

ನಗರದಲ್ಲಿ ಬೀದಿಬದಿಯಲ್ಲಿ ಮಾರಾಟ ಮಾಡಲಾಗುತ್ತಿರುವ ಬಟ್ಟೆ, ಚಪ್ಪಲಿ, ಬ್ಯಾಗ್, ಗೃಹೋಪಯೋಗಿ ವಸ್ತುಗಳ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದಾರೆ. ಒಂದು ಹೊತ್ತಿನ ಊಟಕ್ಕೆ ಆಗುವಷ್ಟೂ ವ್ಯಾಪಾರ ನಡೆಯುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಾರೆ.

‘ನಗರದ ಪ್ರಮುಖ ರಸ್ತೆಗಳಲ್ಲಿ ನಿತ್ಯ ಬಿಕರಿ ವಸ್ತುಗಳನ್ನು ಹರಡಿಕೊಂಡು ಮಾರಾಟಕ್ಕೆ ಅಣಿಯಾಗುತ್ತೇವೆ. ಸಂಜೆವರೆಗೂ ಬಿಸಿಲಿನಲ್ಲೇ ಅಂಗಡಿ ತೆರೆದು ನಿಂತಿರುತ್ತೇವೆ. ಮೊದಲು ವಸ್ತುಗಳ ಬಗ್ಗೆ, ಬೆಲೆ ಬಗ್ಗೆ ವಿಚಾರಿಸುತ್ತಿದ್ದರು. ಈಗ ಅಂಗಡಿಗಳ ಬಳಿ ಸುಳಿಯುತ್ತಿಲ್ಲ. 15 ದಿನಗಳಿಂದ ಕಾಯುವುದೇ ಕೆಲಸವಾಗಿದೆ’ ಎಂದು ಮೆಜೆಸ್ಟಿಕ್ ಬಳಿ ಬಟ್ಟೆ ಮಾರಾಟ ಮಾಡುವ ನಿರಂಜನ್ ಬೇಸರ
ವ್ಯಕ್ತಪಡಿಸಿದರು.

ADVERTISEMENT

‘ಬೀದಿಬದಿ ವ್ಯಾಪಾರಿಗಳಿಗೆ ದಿನದ ಆದಾಯವೇ ಆಧಾರ. ವ್ಯಾಪಾರ ಮಾಡಿದರಷ್ಟೇ ಮೂರೂ ಹೊತ್ತಿನ ಊಟ. ಈಗಿನ ಪರಿಸ್ಥಿತಿಯಲ್ಲಿ ಅಂಗಡಿಗೆ ಒಬ್ಬರು ಗ್ರಾಹಕರು ಬಂದರೂ ಸಾಕು ಎನ್ನುವಂತಾಗಿದೆ. ಕೊರೊನಾ ಸೋಂಕು ಭೀತಿಯಿಂದ ಜನರು ಖರೀದಿಯಿಂದ ದೂರವೇ ಉಳಿದಿ ದ್ದಾರೆ. ವ್ಯಾಪಾರವಿಲ್ಲದೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.

‘ಮೊದಲು, ಖರ್ಚು ಕಳೆದು ದಿನಕ್ಕೆ ₹ 500ರಿಂದ ₹ 800 ಕೈಸೇರುತ್ತಿತ್ತು. ಈಗ ₹100 ವ್ಯಾಪಾರ ನಡೆದರೆ ಅದೇ ಹೆಚ್ಚು ಎನ್ನುವಂತಾಗಿದೆ. ಕೆಲವು ದಿನ ಬರಿಗೈಯಲ್ಲೇ ಮನೆಗೆ ತೆರಳಿದ್ದೇನೆ. ಲಾಕ್‍ಡೌನ್‍ನಿಂದ ಎರಡು ತಿಂಗಳವರೆಗೆ ವ್ಯಾಪಾರ ನಿಂತು ಹೋಗಿತ್ತು.ಸಾಲ ಮಾಡಿ ಸಂಸಾರ ಸಾಗಿಸುವ ಪರಿಸ್ಥಿತಿ ಇದೆ. ಬೀದಿ ಬದಿ ವ್ಯಾಪಾರಿಗಳ ಬದುಕು ಬೀದಿಗೆ ಬಿದ್ದಿದೆ’ ಎಂದು ಪಾನಿಪುರಿ ವ್ಯಾಪಾರಿ ವಿನಾಯಕ್‌ ತಮ್ಮ ಅಳಲು ತೋಡಿಕೊಂಡರು.

ಅಂಕಿಅಂಶ

24,650
ನಗರದಲ್ಲಿರುವ ಅಧಿಕೃತ ಬೀದಿಬದಿ ಅಂಗಡಿಗಳು

80 ಸಾವಿರ
ವ್ಯಾಪಾರದಲ್ಲಿ ತೊಡಗಿರುವ ಕೆಲಸಗಾರರು ಹಾಗೂ ವ್ಯಾಪಾರಿಗಳು (ಅಂದಾಜು)

ಆಸ್ತಿ ಮಾರಾಟ ಮಾಡಲು ಅನುಮತಿ ನೀಡುತ್ತಿಲ್ಲ

'ಬೀದಿಬದಿ ಆಹಾರ ಮಾರಾಟ ಮಳಿಗೆಗಳಲ್ಲಿ ಪಾರ್ಸೆಲ್ ಮಾತ್ರ ಅವಕಾಶ ನೀಡಲಾಗಿದ್ದು, ಬೆರಳೆಣಿಕೆಯಷ್ಟು ಗ್ರಾಹಕರು ಮಾತ್ರ ಆಹಾರ ಕೊಂಡೊಯ್ಯಲು ಬರುತ್ತಾರೆ. ಇದರ ಜೊತೆಗೆ ಆರೋಗ್ಯಾಧಿಕಾರಿಗಳು ಬೀದಿಬದಿ ವ್ಯಾಪಾರಕ್ಕೆ ಕೆಲವೆಡೆ ಅವಕಾಶ ನೀಡುತ್ತಿಲ್ಲ' ಎಂದು ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಸಿ.ರಂಗಸ್ವಾಮಿ ದೂರಿದರು.

‘ನಾಗಪುರ, ಕುರುಬರಹಳ್ಳಿ, ವಿಜಯನಗರ, ಕೆಂಗೇರಿ, ವೈಟ್‍ಫೀಲ್ಡ್ ಸೇರಿ ನಗರದ ಪ್ರಮುಖ ಸ್ಥಳಗಳಲ್ಲಿ ಬೀದಿಬದಿ ಆಹಾರ ಮಾರಾಟಕ್ಕೆ ಸ್ಥಳೀಯ ಅಧಿಕಾರಿಗಳು ಬಿಡುತ್ತಿಲ್ಲ. ಸರ್ಕಾರವೇ ಅನುಮತಿ ನೀಡಿರುವಾಗ ಅಧಿಕಾರಿಗಳು ವ್ಯಾಪಾರಕ್ಕೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ದೂರು ನೀಡಿದ್ದೇನೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.