ADVERTISEMENT

ಬಿಎಂಟಿಸಿ: ಶೇ 10ರಷ್ಟು ಸಂಚಾರ ರದ್ದು

ಸೋಂಕು ಭೀತಿ: ಪ್ರಯಾಣಿಕರ ಸಂಖ್ಯೆ ಇಳಿಮುಖ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 22:36 IST
Last Updated 14 ಮಾರ್ಚ್ 2020, 22:36 IST
ಪ್ರಯಾಣಿಕರಿಲ್ಲದ ಬಿಎಂಟಿಸಿ ಬಸ್‌
ಪ್ರಯಾಣಿಕರಿಲ್ಲದ ಬಿಎಂಟಿಸಿ ಬಸ್‌   

ಬೆಂಗಳೂರು: ಕೋವಿಡ್ –19 ಭೀತಿಯಿಂದ ಬಿಎಂಟಿಸಿ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿತ್ತು. ಹೀಗಾಗಿ, ಶೇ 10ರಷ್ಟು ಬಸ್‌ಗಳ ಸಂಚಾರವನ್ನು ಸಂಸ್ಥೆ ರದ್ದುಪಡಿಸಿತು.

ಬೆಳಿಗ್ಗೆಯಿಂದಲೇ ಬಸ್‌ಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಕಂಡರು. ಅದರಲ್ಲೂ ವೋಲ್ವೊ (ಹವಾನಿಯಂತ್ರಿತ) ಬಸ್‌ಗಳನ್ನು ಹತ್ತಲು ಪ್ರಯಾಣಿಕರೇ ಇಲ್ಲವಾಗಿತ್ತು. ಮಧ್ಯಾಹ್ನದ ತನಕ ಗಮನಿಸಿದ ಅಧಿಕಾರಿಗಳು ನಂತರ ಬಸ್‌ಗಳ ಸಂಚಾರ ಕಡಿಮೆ ಮಾಡಿದರು. ಪ್ರತಿ ವಲಯವಾರು ಶೇ 10ರಷ್ಟು ಮಾರ್ಗದ ಕಾರ್ಯಾಚರಣೆ ರದ್ದುಗೊಳಿಸುವಂತೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಆದೇಶಿಸಿದರು.

‘ಕಡಿಮೆ ಬಸ್‌ಗಳು ಸಂಚಾರ ಮಾಡುವ ಮಾರ್ಗಗಳಲ್ಲಿ ಅವುಗಳ ಸಂಖ್ಯೆ ಕಡಿಮೆ ಮಾಡಬಾರದು. ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುತ್ತಿದ್ದು, ಅವರಿಗೆ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಿ ಬಸ್‌ಗಳ ಕಾರ್ಯಾಚರಣೆ ಮಾಡಬೇಕು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ಮದುವೆಗೆ ತಡೆ ಬೇಡ’ : ಮದುವೆ ಸಮಾರಂಭಗಳನ್ನು ನಿರ್ಬಂಧಿಸಬಾರದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್‌ಕುಮಾರ್ ಅವರು ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

‘ನಗರದಲ್ಲಿ ಮದುವೆ ಸಮಾರಂಭವೊಂದರ ಅಲಂಕಾರ ಮತ್ತು ಪೆಂಡಾಲ್ ತೆಗೆದಿರುವುದು ತಿಳಿದು ಬಂದಿದೆ. ಮದುವೆ ಎಂಬುದು ನಮ್ಮ ಸಾಂಸ್ಕೃತಿಕ ಪರಂಪರೆಯ ಭಾಗ. 100ರಿಂದ 150 ಜನ ಸೇರುವ ಮದುವೆ ಸಮಾರಂಭಗಳನ್ನು ಅಡ್ಡಿಪಡಿಸಬಾರದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.