ADVERTISEMENT

ಮೆಟ್ರೊ ಕಾಮಗಾರಿ ಮೇಲೂ ಪರಿಣಾಮ

ಕೋವಿಡ್‌–19 ಭೀತಿ: ಸುರಂಗ ಕೊರೆಯಲು ಬರಬೇಕು ಚೀನಿಯರು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2020, 3:25 IST
Last Updated 23 ಮಾರ್ಚ್ 2020, 3:25 IST
ನಗರದ ಬಂಬೂ ಬಜಾರ್ ಬಳಿ ಕಂಟೋನ್ಮೆಂಟ್ ಮೆಟ್ರೊ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ಸುರಂಗ ಕೊರೆಯುವ ಯಂತ್ರದ ಬಿಡಿಭಾಗಗಳನ್ನು ತಂದಿಡಲಾಗಿದೆ ಪ್ರಜಾವಾಣಿ ಚಿತ್ರ
ನಗರದ ಬಂಬೂ ಬಜಾರ್ ಬಳಿ ಕಂಟೋನ್ಮೆಂಟ್ ಮೆಟ್ರೊ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ಸುರಂಗ ಕೊರೆಯುವ ಯಂತ್ರದ ಬಿಡಿಭಾಗಗಳನ್ನು ತಂದಿಡಲಾಗಿದೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಯ ಮೇಲೂ ‘ಕೋವಿಡ್- 19’ ಪರಿಣಾಮ ಉಂಟಾಗಿದೆ.

ಬಂಬೂ ಬಜಾರ್ ಬಳಿ ಕಂಟೋನ್ಮೆಂಟ್ ಮೆಟ್ರೊ ರೈಲು ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ಸುರಂಗ ಕೊರೆಯುವ ಯಂತ್ರಗಳನ್ನು (ಟಿಬಿಎಂ) ತಂದು ಇಡಲಾಗಿದೆ.

ಚೀನಾದಿಂದ ಬಂದಿರುವ ಈ ದೈತ್ಯ ಯಂತ್ರಗಳ ಬಿಡಿ ಭಾಗಗಳನ್ನು ಜೋಡಿಸುವ ಕಾರ್ಯ ನಡೆಯಬೇಕಿದೆ‌. ಈ ಕಾರ್ಯಕ್ಕೆ ಚೀನಾ ರೈಲ್ವೆ
ಕನ್‌ಸ್ಟ್ರಕ್ಷನ್ ಹೆವಿ ಇಂಡಸ್ಟ್ರಿ ಕಾರ್ಪೊ ರೇಷನ್ ಲಿಮಿಟೆಡ್ (ಸಿಆರ್‌ಸಿಎಚ್ಐಸಿ) ಕಂಪನಿಯ ನೌಕರರು ಚೀನಾದಿಂದ ಬರಬೇಕು. ಆದರೆ, ಕೊರೊನಾ ವೈರಸ್ ಹರಡುವ ಭೀತಿಯಿಂದ, ಚೀನಿಯರ ಭಾರತ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧ ತೆಗೆದ ಬಳಿಕ ಚೀನಾದಿಂದ ತಜ್ಞ ನೌಕರರು ಬಂದ ನಂತರವೇ ಪೂರ್ಣ ಪ್ರಮಾಣದಲ್ಲಿ ಸುರಂಗ ಕೊರೆಯುವ ಕಾರ್ಯ ಆರಂಭವಾಗಲಿದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.

ಎಲ್ ಆ್ಯಂಡ್ ಟಿಗೆ ಗುತ್ತಿಗೆ: 6 ಕಿ.ಮೀ ಸುರಂಗ ಮಾರ್ಗ ನಿರ್ಮಿಸುವ ಗುತ್ತಿಗೆಯನ್ನು ₹2,628 ಕೋಟಿಗೆ
ಎಲ್ ಆ್ಯಂಡ್ ಟಿ ಕಂಪನಿ ಪಡೆದುಕೊಂಡಿದೆ.

ಚೀನಾದ ಸಿಆರ್‌ಸಿಎಚ್ಐಸಿ ಈ ಕಂಪನಿಯಿಂದ ನಾಲ್ಕು ಟಿಬಿಎಂಗಳನ್ನು ಅದು ಖರೀದಿಸುತ್ತಿದೆ. ಎರಡು ಟಿಬಿಎಂಗಳು ನಗರಕ್ಕೆ ಬಂದಿದ್ದು, ಇನ್ನೆರಡು ಶೀಘ್ರದಲ್ಲೇ ಬರಲಿವೆ.

ಮತ್ತೊಂದು ಯಂತ್ರವನ್ನು ಶಿವಾಜಿನಗರದಲ್ಲಿ ಇಡಲಾಗಿದೆ. ಈ ಯಂತ್ರದ ಬಿಡಿಭಾಗಗಳ ಜೋಡಣೆ ಕಾರ್ಯವೂ ಚೀನಾದ‌ ನೌಕರರು
ಬಂದ ನಂತರವೇ ಆರಂಭವಾಗಲಿದೆ. ಬಂಬೂ ಬಜಾರ್‌ನಿಂದ ಶಿವಾಜಿನಗರದ ಕಡೆ ಒಂದು, ಟ್ಯಾನರಿ ರಸ್ತೆಯ ಕಡೆಗೆ ಒಂದು ಸುರಂಗ ಮಾರ್ಗ ನಿರ್ಮಾಣವಾಗಲಿದೆ.

ಎರಡನೇ ಹಂತದಲ್ಲಿ ಒಟ್ಟು 13 ಕಿ.ಮೀ. ಮೆಟ್ರೊ ಸುರಂಗ ಕಾರಿಡಾರ್‌ ನಿರ್ಮಾಣವಾಗಲಿದೆ. ಒಟ್ಟು ಎರಡು ಪ್ಯಾಕೇಜ್‌ಗಳ ಗುತ್ತಿಗೆಯನ್ನು ಎಲ್‌ ಆ್ಯಂಡ್‌ ಟಿ ಪಡೆದಿದ್ದು, ಮುಂಬೈನ ಆಫ್ಕಾನ್ಸ್‌ಇನ್‌ಫ್ರಾಸ್ಟ್ರಕ್ಚರ್‌ ಕಂಪನಿ ಮತ್ತು ಕೋಲ್ಕತ್ತದ ಐಟಿಡಿ ಸಿಮೆಂಟೇಷನ್‌ ಇಂಡಿಯಾ ತಲಾ ಒಂದು ಪ್ಯಾಕೇಜ್‌ನ ಗುತ್ತಿಗೆಯನ್ನು ಪಡೆದಿವೆ. ಈ ಕಾಮಗಾರಿ ಪೂರ್ಣಗೊಳಿಸಲು ಮೂರೂ ಕಂಪನಿಗಳಿಗೆ ಮೂರೂವರೆ ವರ್ಷಗಳ ಗಡುವು ನೀಡಲಾಗಿದೆ.

ಟಿಬಿಎಂಗಳನ್ನು ಜೋಡಿಸಲು ಚೀನಾದಿಂದ ಆ ಕಂಪನಿಯ ತಜ್ಞರೊಬ್ಬರು ಬರಬೇಕಿದೆ‌. ಸುರಂಗ ಕೊರೆಯುವ ಕಾರ್ಯ ನಿಗದಿಗಿಂತ ಸ್ವಲ್ಪ ತಡವಾಗಿ ಆರಂಭವಾಗಲಿದೆ

-ಅಜಯ್ ಸೇಠ್, ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.