ADVERTISEMENT

ಕೊರೊನಾ; ಬೆಂಗಳೂರಿನಲ್ಲಿ ₹1 ಕೋಟಿ ದಂಡ ವಸೂಲಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 20:12 IST
Last Updated 11 ಜುಲೈ 2020, 20:12 IST

ಬೆಂಗಳೂರು: ಕೊರೊನಾ ಸೋಂಕು ಹರಡುವಿಕೆ ತಡೆಯಲು ಜಾರಿಗೊಳಿಸಿರುವ ನಿಯಮಗಳನ್ನು ಉಲ್ಲಂಘಿಸಿದವರಿಂದ ಇದುವರೆಗೆ ನಗರದಲ್ಲಿ ₹1 ಕೋಟಿಗೂ ಅಧಿಕ ದಂಡ ವಸೂಲಿ ಮಾಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಬೇಕು. ಜನರಿಂದ ಅಂತರ ಕಾಯ್ದುಕೊಳ್ಳಬೇಕು. ಗ್ರಾಹಕರು ಅಂತರ ಕಾಪಾಡಿಕೊಂಡು ಸರದಿಯಲ್ಲಿ ನಿಂತು ಸಾಮಗ್ರಿ ಖರೀದಿಸಲು ಅನುವಾಗುವಂತೆ ಮಳಿಗೆಗಳಲ್ಲಿ ಸ್ಥಳ ಗುರುತು ಮಾಡಬೇಕು ಎಂಬ ನಿಯಮಗಳನ್ನು ಹಲವರು ಉಲ್ಲಂಘಿಸುತ್ತಿದ್ದಾರೆ. ಅಂಥವರನ್ನು ಪತ್ತೆ ಹಚ್ಚಿ ಬಿಬಿಎಂ‍ಪಿ ಅಧಿಕಾರಿಗಳು ಹಾಗೂ ಪೊಲೀಸರು ದಂಡ ವಿಧಿಸುತ್ತಿದ್ದಾರೆ.

ಜೂನ್ 9ರಿಂದ ಇದುವರೆಗೆ ನಡೆದಿರುವ ಕಾರ್ಯಾಚರಣೆಯಲ್ಲಿ, ನಿಯಮ ಉಲ್ಲಂಘಿಸಿದ್ದವರ ವಿರುದ್ಧ ಒಟ್ಟು 50,706 ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದರ ಜೊತೆಯೇ 149 ಅಂಗಡಿಗಳನ್ನೂ ಬಂದ್ ಮಾಡಿಸಲಾಗಿದೆ. ಮಾಸ್ಕ್ ಧರಿಸದಿದ್ದಕ್ಕೆ ಹಾಗೂ ಅಂತರ ಕಾಯ್ದುಕೊಳ್ಳದಿದ್ದಕ್ಕೆ ಪ್ರತ್ಯೇಕವಾಗಿ ದಂಡ ವಿಧಿಸಲಾಗಿದೆ.

ADVERTISEMENT

ಈ ಬಗ್ಗೆ ಟ್ವೀಟ್ ಮಾಡಿರುವ ಹೆಚ್ಚುವರಿ ಪೊಲೀಸ್ ಕಮಿಷನರ್ (ಆಡಳಿತ) ಹೇಮಂತ್ ನಿಂಬಾಳ್ಕರ್, ‘ದಂಡದ ಮೊತ್ತ ₹1 ಕೋಟಿ ದಾಟಿದೆ. ಇದು ಸಾಧನೆಯೆಂದು ನಾವು ಹೇಳುವುದಿಲ್ಲ. ಆರೋಗ್ಯಕ್ಕಾಗಿ ಎಲ್ಲರೂ ಮಾಸ್ಕ್ ಹಾಕಿಕೊಳ್ಳಬೇಕು. ಅಂತರ ಕಾಯ್ದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.