ADVERTISEMENT

ಆಸ್ಪತ್ರೆಯಲ್ಲೇ ಕೊರೊನಾ ಸೋಂಕಿತ ಆತ್ಮಹತ್ಯೆ

ಇದೇ 24ರಂದು ದಾಖಲಾಗಿದ್ದ ರೋಗಿ–466

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 21:43 IST
Last Updated 27 ಏಪ್ರಿಲ್ 2020, 21:43 IST
ವಿಕ್ಟೋರಿಯಾ ಆಸ್ಪತ್ರೆ
ವಿಕ್ಟೋರಿಯಾ ಆಸ್ಪತ್ರೆ   

ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ವರ್ಷದ ಕೊರೊನಾ ಸೋಂಕಿತರೊಬ್ಬರು (ರೋಗಿ–466), ಆಸ್ಪತ್ರೆಯ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆಟೊ ಚಾಲಕರಾಗಿದ್ದ ಸೋಂಕಿತ, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೇ 24ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಸೋಮವಾರ ಬೆಳಗ್ಗೆ 9ರ ಸುಮಾರಿಗೆ ಶೌಚಾಲಯಕ್ಕೆಂದು ಹೋಗಿದ್ದ ಅವರು ಆಸ್ಪತ್ರೆಯ ತುರ್ತು ಕಿಟಕಿ (ಅಗ್ನಿ ಆಕಸ್ಮಿಕ ಸಂಭವಿಸಿದಾಗ ಬಳಸಲು ಇರುವ)ಯಿಂದ ಹೊರಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ವಿ.ವಿ.ಪುರ ಠಾಣೆ ಪೊಲೀಸರು ಹೇಳಿದರು.

ADVERTISEMENT

‘ಜೋರಾದ ಶಬ್ಧ ಕೇಳಿದ್ದ ನರ್ಸ್‌ಗಳು ಹಾಗೂ ಸಿಬ್ಬಂದಿ, ಕಿಟಕಿಯಲ್ಲಿ ನೋಡಿದಾಗ ಕೆಳಗೆ ಬಿದ್ದಿದ್ದ ಸೋಂಕಿತನನ್ನು ಕಂಡರು. ಸ್ಥಳಕ್ಕೆ ಹೋಗಿ ನೋಡಿದಾಗ ಸೋಂಕಿತ ಮೃತಪಟ್ಟಿದ್ದು ಗೊತ್ತಾಯಿತು. ನಂತರವೇ ಠಾಣೆಗೆ ವಿಷಯ ತಿಳಿಸಿದರು’ ಎಂದರು.

ಕಿಡ್ನಿ ವೈಫಲ್ಯ: ‘ಕೊರೊನಾ ಸೋಂಕಿತ ಆತ್ಮಹತ್ಯೆ ಸಂಬಂಧ ವಿ.ವಿ.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ಹೇಗಾಯಿತು? ಯಾರದ್ದು ನಿರ್ಲಕ್ಷ್ಯ ? ಎಂಬುದು ತನಿಖೆಯಿಂದಲೇ ತಿಳಿಯಬೇಕಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಸೆಪಟ್ ಹೇಳಿದರು.

‘ಸೋಂಕಿತ ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಡಯಾಲಿಸಿಸ್‌ ಸಹ ಮಾಡಿಸಿಕೊಳ್ಳುತ್ತಿದ್ದರು. ಇದೇ ತಿಂಗಳ 24ರಂದು ಅವರಿಗೆ ಸೋಂಕು ಇರುವುದು ದೃಢಪಟ್ಟಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಕುಟುಂಬದವರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿತ್ತು’ ಎಂದು ತಿಳಿಸಿದರು.

ಪಿಪಿಇ ಕಿಟ್‌ ಧರಿಸಿ ಹೇಳಿಕೆ ಸಂಗ್ರಹ: ಘಟನೆ ನಡೆಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಹೋದ ಪೊಲೀಸರು, ಆಸ್ಪತ್ರೆಯ ಮುಖ್ಯದ್ವಾರದ ಬಳಿಯೇ ನಿಂತುಕೊಂಡಿದ್ದರು. ಕೆಲ ನಿಮಿಷಗಳ ನಂತರ ವೈದ್ಯರ ಸಲಹೆಯಂತೆ ಪಿಪಿಇ ಕಿಟ್ ಧರಿಸಿಯೇ ಪೊಲೀಸರು, ಒಳಗೆ ಹೋಗಿ ಹೋಗಿ ಮಹಜರು ಮಾಡಿದರು. ಸಿಬ್ಬಂದಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯನ್ನೂ ಪಡೆದುಕೊಂಡರು.

‘ಚಿಕಿತ್ಸಾ ಕೊಠಡಿಗೆ ವೈದ್ಯರು, ನರ್ಸ್ ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ಮಾತ್ರ ಪ್ರವೇಶ ಇದೆ. ಐಸೋಲೇಟೆಡ್ ವಾರ್ಡ್ ಮತ್ತು ಘಟನೆ ಜಾಗದ ಸಂಪೂರ್ಣ ವಿಡಿಯೊ ಚಿತ್ರೀಕರಣ ಮಾಡುವಂತೆ ಸೂಚಿಸಿದ್ದೇನೆ’ ಎಂದು ಡಿಸಿಪಿ ರೋಹಿಣಿ ಹೇಳಿದರು.

‘ಎಲ್ಲ ಪ್ರವೇಶ ದ್ವಾರ ಬಂದ್ ಮಾಡಲಾಗಿತ್ತು’
ಕೊರೊನಾ ಸೋಂಕಿತರು ಮಾನಸಿಕವಾಗಿ ನೊಂದಿರುತ್ತಾರೆ. ಅವರನ್ನು ಜಾಗೃತಿಯಿಂದ ನೋಡಿಕೊಳ್ಳುವ ಜವಾಬ್ದಾರಿ ವೈದ್ಯರು ಹಾಗೂ ಸಿಬ್ಬಂದಿ ಮೇಲಿರುತ್ತದೆ. ಅದರ ನಡುವೆಯೇ ಈ ಘಟನೆ ನಡೆದಿರುವುದು ಆಸ್ಪತ್ರೆಯ ಸುರಕ್ಷತೆಯನ್ನೇ ಪ್ರಶ್ನಿಸುವಂತಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ತುರ್ತು ವಿಭಾಗದ ನೋಡಲ್ ಅಧಿಕಾರಿ ಅಸೀಮಾ ಬಾನು, ‘ಆಸ್ಪತ್ರೆಯ ಎಲ್ಲ ಪ್ರವೇಶ ದ್ವಾರಗಳನ್ನು ಹಾಗೂ ಕಿಟಕಿಗಳನ್ನು ಮುಚ್ಚಲಾಗಿತ್ತು. ಎಲ್ಲ ಕೀಗಳು ನನ್ನ ಬಳಿಯೇ ಇದ್ದವು. ಆದರೆ, ಸೋಂಕಿತ ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಹೋಗಿ ತುರ್ತು ಕಿಟಕಿಯಿಂದ ಜಿಗಿದಿದ್ದಾರೆ’ ಎಂದರು.

‘ವಾರ್ಡ್‌ನಲ್ಲಿ ಎಲ್ಲರಿಗೂ ಒಂದೇ ಶೌಚಾಲಯವಿದೆ. ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿ ಪಿಪಿಇ ಕಿಟ್ ಬದಲಾಯಿಸಿಕೊಳ್ಳುವ ಸಮಯದಲ್ಲೇ ಈ ಘಟನೆ ನಡೆದಿದೆ. ಅದರ ಕೀಗಳು ನನ್ನ ಬಳಿ ಇವೆ’ ಎಂದೂ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.